

ಬೆಂಗಳೂರು: ಕಳೆದ 20 ದಿನಗಳಲ್ಲೇ ಮೂರನೇ ಬಾರಿ ನಮ್ಮ ಮೆಟ್ರೋದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಗುರುವಾರ ಬೆಳಗ್ಗೆ ಪೀಕ್ ಅವರ್‌ನಲ್ಲಿ ಹಸಿರು ಮಾರ್ಗ (ಗ್ರೀನ್ ಲೈನ್) ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನೀಡಿರುವ ಮಾಹಿತಿ ಪ್ರಕಾರ, ಬೆಳಗ್ಗೆ 8.23ರ ಸುಮಾರಿಗೆ ಬನಶಂಕರಿ ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ರೈಲಿನಲ್ಲಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ರೈಲು ಮುಂದೆ ಚಲಿಸಲು ಸಾಧ್ಯವಾಗಲಿಲ್ಲ. ಇದರಿಂದ ಗ್ರೀನ್ ಲೈನ್‌ನ ಸಂಪೂರ್ಣ ಮಾರ್ಗದಲ್ಲಿ ರೈಲು ಸಂಚಾರ ವಿಳಂಬವಾಯಿತು.
ತಕ್ಷಣವೇ ರೈಲಿನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಇತರ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಬಳಿಕ ದೋಷ ಪತ್ತೆಹಚ್ಚಲು ಸಂಬಂಧಿತ ರೈಲನ್ನು ಹಳಿಯಿಂದ ತೆರವುಗೊಳಿಸಿ ಪರಿಶೀಲನೆ ನಡೆಸಲಾಯಿತು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ತಾಂತ್ರಿಕ ದೋಷದಿಂದಾಗಿ ಬೆಳಗ್ಗೆ 8.23ರಿಂದ 8.38ರವರೆಗೆ ಗ್ರೀನ್ ಲೈನ್ ಸೇವೆಗೆ ನೇರ ಪರಿಣಾಮ ಬೀರಿತು. ಸುರಕ್ಷತಾ ದೃಷ್ಟಿಯಿಂದ ರೈಲುಗಳನ್ನು ನಿಗದಿತ ವೇಗಕ್ಕಿಂತ ಕಡಿಮೆ ವೇಗದಲ್ಲಿ ಓಡಿಸಲಾಯಿತು. ಇದರಿಂದ ಬೆಳಗ್ಗೆ 10.30ರವರೆಗೆ ರೈಲು ಸಂಚಾರದಲ್ಲಿ ವಿಳಂಬ ಉಂಟಾಯಿತು. ನಂತರ ವೇಳಾಪಟ್ಟಿಯಂತೆ ಮೆಟ್ರೋ ಸೇವೆ ಸಹಜ ಸ್ಥಿತಿಗೆ ಮರಳಿತು.
ಕಳೆದ ಕೆಲವು ದಿನಗಳಿಂದ ನಮ್ಮ ಮೆಟ್ರೋದಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವುದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜೂನ್ 23ರಂದು ಪರ್ಪಲ್ ಲೈನ್‌ನ ಭೂಗತ ಮಾರ್ಗದಲ್ಲಿ ಥರ್ಡ್ ರೈಲು (Third Rail) ಜೋಡಣೆ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಸುಮಾರು ಐದು ಗಂಟೆಗಳ ಕಾಲ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು. ಸಂಜೆ ಪೀಕ್ ಅವರ್‌ನಲ್ಲಿ ಸಂಭವಿಸಿದ ಈ ಘಟನೆ ಸಾವಿರಾರು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.
ಇದಾದ ಎರಡು ದಿನಗಳ ಬಳಿಕ, ಜೂನ್ 25ರಂದು ಮೆಟ್ರೋ ರೈಲಿನ ಬಾಗಿಲುಗಳು ಸರಿಯಾಗಿ ಮುಚ್ಚದ ತಾಂತ್ರಿಕ ದೋಷದಿಂದ ಸುಮಾರು 20 ನಿಮಿಷಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಇದೀಗ ಬನಶಂಕರಿ ನಿಲ್ದಾಣದಲ್ಲಿ ಸಂಭವಿಸಿರುವ ಸಿಗ್ನಲಿಂಗ್ ದೋಷವು ಕಳೆದ 20 ದಿನಗಳಲ್ಲಿ ಸಂಭವಿಸಿದ ಮೂರನೇ ತಾಂತ್ರಿಕ ಸಮಸ್ಯೆಯಾಗಿದ್ದು, ಇದು ಮೆಟ್ರೋ ನಿರ್ವಹಣೆ ಮತ್ತು ತಾಂತ್ರಿಕ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.