

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರು ತಮ್ಮ ತಂಡದೊಂದಿಗೆ ಬೆಂಗಳೂರಿನಿಂದ ಆಂಧ್ರಪ್ರದೇಶದ ತಿರುಪತಿಗೆ ಸೈಕಲ್ ಮೂಲಕವೇ ಪ್ರಯಾಣ ಬೆಳೆಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಬೆಂಗಳೂರಿನಿಂದ ತಿರುಪತಿ ವೆಂಕಟರಮಣ ಸ್ವಾಮಿ ಸನ್ನಿಧಿವರೆಗಿನ ಒಟ್ಟು 265ಕಿಲೋಮೀಟರ್ ದೂರದ ಹಾದಿಯನ್ನು ಶಾಸಕರು ಮತ್ತು ಅವರ ಸೈಕ್ಲಿಂಗ್ ತಂಡ ಕೇವಲ 14 ಗಂಟೆ 10 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದಾರೆ.
ತಮ್ಮ 60ರ ಹರೆಯದಲ್ಲೂ ಯುವಕರಿಗೂ ಮಾದರಿಯಾಗುವಂತೆ ಸೈಕಲ್ ತುಳಿದಿರುವ ಸುರೇಶ್ ಕುಮಾರ್ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಬೆಂಗಳೂರಿನಿಂದ ಹೊರಟ ಈ ಸೈಕ್ಲಿಂಗ್ ತಂಡವು ಹೆದ್ದಾರಿಯ ಕಠಿಣ ಹಾದಿ, ಏರಿಳಿತಗಳನ್ನು ಯಶಸ್ವಿಯಾಗಿ ದಾಟಿ ನಿಗದಿತ ಅವಧಿಗಿಂತ ಮುನ್ನವೇ ತಿರುಪತಿ ಬೆಟ್ಟದ ತಪ್ಪಲನ್ನು ತಲುಪಿದೆ.
10 ಜನರ ತಂಡದ ಜೊತೆ ಸುರೇಶ್ ಕುಮಾರ್ ಸೈಕಲ್ನಲ್ಲಿ ತೆರಳಿದ್ದು, ಈ ಟೀಂ ಸತತ 3ನೇ ಬಾರಿಗೆ ತಿರುಪತಿಗೆ ಸೈಕ್ಲಿಂಗ್ ಮಾಡಿದೆ. ಬಸವೇಶ್ವರದಿಂದ ರಾಜಾಜಿನಗರ ಒಂದನೇ ಬ್ಲಾಕ್, ಯಶವಂತಪುರ, ಬಿ ಇ ಎಲ್ ವೃತ್ತ, ಅವಲಳ್ಳಿ ಅರಣ್ಯ ಪ್ರದೇಶ, ರಾಜಾನುಕುಂಟೆ, ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ, ದೇವನಹಳ್ಳಿ, ವಿಜಯಪುರ, ಕೈವಾರ, ಮದನಪಲ್ಲಿ, ಪೀಲೇರು ಮಾರ್ಗವಾಗಿ ಸಾಗಿ ತಿರುಪತಿ ತಲುಪಿದೆ.