Nepalದಲ್ಲಿ Belagavi ಯುವಕನ ಭೀಕರ ಕೊಲೆ; ನಿದ್ದೆಯಲ್ಲಿದ್ದಾಗ ಚಾಕು ಇರಿದ Roommate..!

ಮೃತ ಸಾಹಿಲ್ ಈ ಹಿಂದೆ ದುಬೈ ಮತ್ತು ಥೈಲ್ಯಾಂಡ್‌ನಲ್ಲಿ ಕೆಲಸ ಮಾಡಿದ್ದ. ಸುಮಾರು 25 ದಿನಗಳ ಹಿಂದೆ ಆತ ನೇಪಾಳದ ದಮಕ್ ನಗರದಲ್ಲಿರುವ ಹೋಟೆಲ್‌ನಲ್ಲಿ ಉದ್ಯೋಗಕ್ಕಾಗಿ ತೆರಳಿದ್ದ. ಅಲ್ಲಿ ಸದ್ದಾಂ ಹುಸೇನ್ ಜೊತೆ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದ.
Sahil Riyaz Ahmed Momin
ಸಾಹಿಲ್ ರಿಯಾಜ್ ಅಹ್ಮದ್ ಮೊಮಿನ್
Updated on

ಬೆಳಗಾವಿ: ಉದ್ಯೋಗ ಅರಸಿ ನೇಪಾಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ಮೂಲದ 25 ವರ್ಷದ ಯುವಕನನ್ನು ಆತನ ರೂಮ್‌ಮೇಟ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನೇಪಾಳದ ದಮಕ್‌ನಲ್ಲಿ ನಡೆದಿದೆ.

ಮೃತನನ್ನು ಸಾಹಿಲ್ ರಿಯಾಜ್ ಅಹ್ಮದ್ ಮೊಮಿನ್ (25) ಎಂದು ಗುರುತಿಸಲಾಗಿದೆ. ಕೊಲೆ ಬಳಿಕ ಆರೋಪಿ ಪರಾರಿಯಾಗಿದ್ದು, ನೇಪಾಳ ಪೊಲೀಸರು ಆತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ರಿಯಾಜ್ ಅಹ್ಮದ್ ಮೊಮಿನ್ ಬೆಳಗಾವಿ ಜಿಲ್ಲೆಯ ಖಾನಾಪುರದ ಮುಸ್ಲಿಂ ನಿಂಗಾಪುರ ಗಲ್ಲಿಯ ನಿವಾಸಿಯಾಗಿದ್ದ. ಪ್ರಕರಣದ ಆರೋಪಿ ಸದ್ದಾಂ ಹುಸೇನ್, ಉತ್ತರ ಪ್ರದೇಶ ಮೂಲದವನಾಗಿದ್ದು, ಆತನ ವಿರುದ್ಧ ನೇಪಾಳ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಮೃತ ಸಾಹಿಲ್ ಈ ಹಿಂದೆ ದುಬೈ ಮತ್ತು ಥೈಲ್ಯಾಂಡ್‌ನಲ್ಲಿ ಕೆಲಸ ಮಾಡಿದ್ದ. ಸುಮಾರು 25 ದಿನಗಳ ಹಿಂದೆ ಆತ ನೇಪಾಳದ ದಮಕ್ ನಗರದಲ್ಲಿರುವ ಹೋಟೆಲ್‌ನಲ್ಲಿ ಉದ್ಯೋಗಕ್ಕಾಗಿ ತೆರಳಿದ್ದ. ಅಲ್ಲಿ ಸದ್ದಾಂ ಹುಸೇನ್ ಜೊತೆ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದ.

ಘಟನೆಗೆ ಒಂದು ದಿನ ಮೊದಲು ಸಾಹಿಲ್ ತನ್ನ ಬೆಳಗಾವಿ ಮೂಲದ ಸ್ನೇಹಿತನನ್ನೂ ಅದೇ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಲು ಕರೆಸಿಕೊಂಡಿದ್ದ. ಆತ ಕೂಡ ಅದೇ ಕೊಠಡಿಯಲ್ಲಿ ತಂಗಿದ್ದ.

ಆ ರಾತ್ರಿ ಸಾಹಿಲ್ ಮತ್ತು ಸದ್ದಾಂ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ನೇಹಿತ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದ ಎನ್ನಲಾಗಿದೆ. ಆದರೆ, ಶುಕ್ರವಾರ ಮುಂಜಾನೆ ಸುಮಾರು 5 ಗಂಟೆ ವೇಳೆಗೆ, ಸಾಹಿಲ್ ನಿದ್ರೆಯಲ್ಲಿದ್ದಾಗ ಸದ್ದಾಂ ಚಾಕುವಿನಿಂದ ಹೊಟ್ಟೆಗೆ ಇರಿದು ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಾಹಿಲ್ ಕಿರುಚಾಟ ಕೇಳಿ ಎಚ್ಚೆತ್ತ ಸ್ನೇಹಿತ, ಆರೋಪಿಯನ್ನು ಬೆನ್ನಟ್ಟಲು ಯತ್ನಿಸಿದರೂ, ಆತ ತಪ್ಪಿಸಿಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಸಾಹಿಲ್ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

Sahil Riyaz Ahmed Momin
ಅಮೆರಿಕದಲ್ಲಿ ಕೌಟುಂಬಿಕ ಹಿಂಸಾಚಾರ: ಭಾರತೀಯ ಮೂಲದ ಗೂಗಲ್ ಟೆಕ್ಕಿ ಹತ್ಯೆ; ಮಗನಿಗೂ ಗುಂಡೇಟು!

ಘಟನೆಯ ಬಳಿಕ ಸಾಹಿಲ್ ಅವರ ಕುಟುಂಬಸ್ಥರು ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಅಂಜುಮನ್-ಎ-ಇಸ್ಲಾಂ ತಾಲ್ಲೂಕು ಅಧ್ಯಕ್ಷ ಹಾಗೂ ಸಮಾಜಸೇವಕ ಇರ್ಫಾನ್ ತಾಲಿಕೋಟಿ ಅವರನ್ನು ಸಂಪರ್ಕಿಸಿ, ಮನವಿ ಮಾಡಿದ್ದಾರೆ.

ಬೆಳಗಾವಿಯ ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ಭೇಟಿ ಮಾಡಿ ನೇಪಾಳ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಕಾನೂನು ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಇದಲ್ಲದೆ, ನೇಪಾಳದ ಅಧಿಕಾರಿಗಳೊಂದಿಗೂ ಸಂಪರ್ಕದಲ್ಲಿದ್ದು ಪ್ರಕರಣದ ಬಗ್ಗೆ ನಿರಂತರ ಮಾಹಿತಿ ಪಡೆದುಕೊಂಡಿದ್ದಾರೆ. ಶನಿವಾರ ಸಾಹಿಲ್ ಅವರ ತಂದೆ, ಸಹೋದರ ಮತ್ತು ಕುಟುಂಬ ಸದಸ್ಯರು ನೇಪಾಳಕ್ಕೆ ತೆರಳಿ ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಯಾಣ ಬೆಳೆಸಿದ್ದಾರೆ.

ವಿಮಾನಗಳ ಲಭ್ಯತೆಗೆ ಅನುಗುಣವಾಗಿ ಸಾಹಿಲ್ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿ, ಗೋವಾ ಅಥವಾ ಬೆಳಗಾವಿಗೆ ವಿಮಾನದ ಮೂಲಕ ತರಲಾಗುವುದು ಎನ್ನಲಾಗುತ್ತಿದ್ದು, ಬಳಿಕ ಖಾನಾಪುರಕ್ಕೆ ಕೊಂಡೊಯ್ಯಲಾಗುತ್ತಿದ್ದು, ಸೋಮವಾರ ಸ್ವಗ್ರಾಮ ತಲುಪುವ ನಿರೀಕ್ಷೆಯಿದೆ.

ಇದೇ ವೇಳೆ, ಆರೋಪಿ ಉತ್ತರ ಪ್ರದೇಶದತ್ತ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಯ ಭಾವಚಿತ್ರ ಹಾಗೂ ಇತರ ವಿವರಗಳನ್ನು ಬೆಳಗಾವಿ ಜಿಲ್ಲಾ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ರವಾನಿಸಿದ್ದು, ಆತನ ಬಂಧನಕ್ಕಾಗಿ ಶೋಧ ಮುಂದುವರಿದಿದೆ.

ಈ ಘಟನೆ ಖಾನಾಪುರದಲ್ಲಿ ತೀವ್ರ ಆಘಾತ ಮೂಡಿಸಿದೆ. ಸಾಹಿಲ್ ಶಾಂತ ಸ್ವಭಾವದ, ಎಲ್ಲರೊಂದಿಗೆ ಸೌಹಾರ್ದದಿಂದ ನಡೆದುಕೊಳ್ಳುತ್ತಿದ್ದ ಯುವಕನಾಗಿದ್ದ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com