

ನವದೆಹಲಿ: ಬಿಡದಿ ಟೌನ್‌ಶಿಪ್‌ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ರೈತರ ಹೋರಾಟ ಸಹ ತೀವ್ರಗೊಂಡಿದೆ. ಮಂಗಳವಾರ ಸರ್ವೇಗೆ ಹೋದ ಅಧಿಕಾರಿಗಳ ಮೇಲೆ ಪೊರಕೆ ದಾಳಿ ನಡೆಸಿದ್ದರು.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಬಿಡದಿ ಯೋಜನೆಯ ಪಿತಾಮಹ ನಾನಲ್ಲ, ಇದು ನನ್ನ ಕನಸಿನ ಯೋಜನೆಯೂ ಅಲ್ಲ, ಇದರ ಅವಶ್ಯಕತೆಯೇ ಇಲ್ಲ ಎಂದು ಹೇಳಿದ್ದಾರೆ.
'ನಿನ್ನೆ ಬಿಡದಿಯಲ್ಲಿ ನಡೆದ ಘಟನೆ ನನಗೆ ತುಂಬಾ ನೋವುಂಟು ಮಾಡಿದೆ. ರಾಜಕೀಯಕ್ಕಾಗಿ ಏನೆಲ್ಲಾ ನಡೆಯುತ್ತಿದೆ? ರೈತರ ಬದುಕನ್ನು ಹಾಳು ಮಾಡಲು ದೊಡ್ಡ ಸಂಚು ನಡೆಯುತ್ತಿದೆ. ಈ ಯೋಜನೆ ನನ್ನ ಕನಸಿನ ಯೋಜನೆಯಲ್ಲ" ಎಂದು ಸಿಎಂ ತಿಳಿಸಿದ್ದರು.
ರೈತರ ಅಭಿಪ್ರಾಯ ಸಂಗ್ರಹಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಇದು ಕೊಡುವ ವರದಿಯ ಮೇಲೆ ಮುಂದಿನ ಹೆಜ್ಚೆ ಇಡಲು ಸರ್ಕಾರ ತೀರ್ಮಾನಿಸಿದೆ. ಆದರೆ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಲ್ಲ ಅಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ಸುದ್ದಿಗೋಷ್ಠಿ ಬೆನ್ನಲ್ಲೇ ಬಿಡದಿ ಟೌನ್‌ಶಿಪ್ ವ್ಯಾಪ್ತಿಯ 4 ಕಂದಾಯ ಗ್ರಾಮಗಳಾದ ಬನ್ನಿಗಿರಿ, ಅರಳಾಳುಸಂದ್ರ, ಕೆ.ಜಿ.ಗೊಲ್ಲರಪಾಳ್ಯ, ಹೊಸೂರು ಗ್ರಾಮಗಳ ಜಮೀನು ಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆ ಎರಡನೇ ಹಂತದ ಭೂಸ್ವಾಧೀನಕ್ಕೆ ಇಂದು ಅಂತಿಮ ಅಧಿಸೂಚನೆ ಹೊರಡಿಸಿದೆ.
ಹೊಸೂರಿನ 2,390 ಎಕರೆ 12 ಗುಂಟೆ, ಕೆಜಿ ಗೊಲ್ಲರಪಾಳ್ಯದ ಒಟ್ಟು 315 ಎಕರೆ 36 ಗುಂಟೆ, ಬನ್ನಿಗಿರಿ ಗ್ರಾಮದ 775 ಎಕರೆ 8 ಗುಂಟೆ, ಅರಳಾಳುಸಂದ್ರದ 1,460 ಎಕರೆ 21 ಗುಂಟೆ ಜಮೀನು ಭೂಸ್ವಾಧೀನಕ್ಕೊಳಪಟ್ಟಿದೆ ಎಂದು ನಗರಾಭಿವೃದ್ಧಿ ಇಲಾಖೆ(ಬಿಡಿಎ ಮತ್ತು ಬೆಂಗಳೂರು-1)ಯ ಅಧೀನ ಕಾರ್ಯದರ್ಶಿ ರಾಜೇಶ್ ಎಸ್.ಸೂಳಿಕೇರಿ ಅವರು ಆದೇಶ ಹೊರಡಿಸಿದ್ದಾರೆ.