

ಬೆಂಗಳೂರು: ರಾಜ್ಯದ ಎಲ್ಲಾ 5,927 ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರನ್ನು ಸೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಪ್ರಕ್ರಿಯೆಯನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಂಗಳವಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಲೆಕ್ಕ ಸಹಾಯಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ರಾಜ್ಯ ಬಜೆಟ್‌ನಲ್ಲಿ ಈ ಘೋಷಣೆ ಮಾಡಲಾಗಿದ್ದು, ಇದೀಗ ಸ್ವಾತಂತ್ರ್ಯ ದಿನಾಚರಣೆಯೊಳಗೆ ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಹಾಗೂ ಗ್ರಾಮೀಣ ಸ್ವಯಂ ಆಡಳಿತದ ಕನಸು ಕಂಡಿದ್ದ ಮಹಾತ್ಮ ಗಾಂಧಿ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿದ್ದ ವೇಳೆ, ದೇಶದ 2.68 ಲಕ್ಷ ಗ್ರಾಮ ಪಂಚಾಯಿತಿಗಳಿಗೂ ಮಹಾತ್ಮ ಗಾಂಧಿ ಹೆಸರಿಡುವಂತೆ ತಾವು ಸಲಹೆ ನೀಡಿದ್ದಾಗಿ ಸಚಿವರು ತಿಳಿಸಿದರು. ಜೊತೆಗೆ, VB-G RAM G ಯೋಜನೆಯ ಹೆಸರಿನ ಮುಂಚೆ ಮಹಾತ್ಮ ಗಾಂಧಿ ಅವರ ಹೆಸರನ್ನು ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವುದಾಗಿ ಹೇಳಿದರು.
ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ರೂಪಿಸಲು ಪಂಚಾಯಿತಿ ಅಧಿಕಾರಿಗಳು ಶ್ರಮಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಯುವಕರು ನಗರಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.
ಪಿಡಿಒಗಳು, ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಲೆಕ್ಕ ಸಹಾಯಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಆನ್‌ಲೈನ್ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಧಿಕಾರಿಗಳು ಪ್ರಾಮಾಣಿಕತೆ, ಬದ್ಧತೆ ಹಾಗೂ ಕಾರ್ಯಕ್ಷಮತೆಯಿಂದ ಕೆಲಸ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
2026-27ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಪ್ರಥಮ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಸೇರಿದಂತೆ 1,801 ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ಅರ್ಹರಾದ 1,229 ಸಿಬ್ಬಂದಿಗೆ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಆದೇಶ ನೀಡಲಾಗಿದೆ.
ಪಿಡಿಒಗಳ ವರ್ಗಾವಣೆಗೆ 839 ಅರ್ಜಿಗಳು ಸಲ್ಲಿಕೆಯಾಗಿದ್ದು, ವಿಶೇಷ ವರ್ಗ, ಕಡ್ಡಾಯ ಹಾಗೂ ಸಾಮಾನ್ಯ ವರ್ಗಾವಣೆ ಅರ್ಜಿಗಳೂ ಇದರಲ್ಲಿ ಸೇರಿವೆ. ಗ್ರಾಮೀಣಾಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು. ಗ್ರಾಮಗಳಲ್ಲಿ ನಿರ್ಮಾಣವಾಗುವ ಪ್ರತಿಯೊಂದು ಆಸ್ತಿಯೂ ದೀರ್ಘಕಾಲ ಬಾಳಿಕೆ ಬರುವಂತಿರಬೇಕು ಹಾಗೂ ಜಿಯೋ-ಟ್ಯಾಗ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇಂದ್ರ ಸರ್ಕಾರ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎ)'ಯ ಹೆಸರನ್ನು 'ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)' (VB-G RAM G) ಎಂದು ಬದಲಾಯಿಸಿರುವುದನ್ನು ಕಾಂಗ್ರೆಸ್ ವಿರೋಧಿಸುತ್ತಿದ್ದು, ಇದರ ನಡುವೆಯೇ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಹೆಸರಿಡುವ ನಿರ್ಧಾರ ಕೈಗೊಂಡಿದೆ.