ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಫೈರಿಂಗ್: ಜೈಲಿನಿಂದ ಪರಾರಿಯಾದ 3 ಕೈದಿಗಳ ಅರೆಸ್ಟ್ ವೇಳೆ ಹಲ್ಲೆಗೆ ಯತ್ನ, ಗುಂಡಿನ ದಾಳಿ- 8 ಮಂದಿ ಸಿಬ್ಬಂದಿ ಅಮಾನತು-Video

ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿ,ಪರಾರಿಯಾಗಿದ್ದ ಮೂರು ಜನ ಆರೋಪಿಗಳ ಪತ್ತೆಗಾಗಿ ಕಲಬುರಗಿ ನಗರ, ಎಸ್‌ಪಿ ಹಾಗೂ ಬೀದರ್ ಪೊಲೀಸರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
(Top) Kalaburagi Police Commissioner Sharanappa SD inspects Kalaburagi Central Jail premises on Tuesday. (Inset) The three convicts who escaped
ಕಲಬುರಗಿ ಕೇಂದ್ರ ಕಾರಾಗೃಹದ ಆವರಣವನ್ನು ಪರಿಶೀಲಿಸುತ್ತಿರುವ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. (ಒಳಚಿತ್ರ) ಕಾರಾಗೃಹದಿಂದ ಪರಾರಿಯಾಗಿರುವ ಮೂವರು ಶಿಕ್ಷಿತ ಕೈದಿಗಳು.
Updated on

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಬುಧವಾರ ಮಹತ್ವದ ಬೆಳವಣಿಗೆ ನಡೆದಿದೆ. ನಿನ್ನೆಯಷ್ಟೇ ಪರಾರಿಯಾಗಿದ್ದ ಆರೋಪಿಯನ್ನು ಅರೆಸ್ಟ್ ಮಾಡುವಾಗ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಪೊಲೀಸರು ಫೈರಿಂಗ್ (Firing) ಮಾಡಿದ್ದಾರೆ.

ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿ,ಪರಾರಿಯಾಗಿದ್ದ ಮೂರು ಜನ ಆರೋಪಿಗಳ ಪತ್ತೆಗಾಗಿ ಕಲಬುರಗಿ ನಗರ, ಎಸ್‌ಪಿ ಹಾಗೂ ಬೀದರ್ ಪೊಲೀಸರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಅದರಂತೆ ಸಂತೋಷ್ ಎಂಬ ಕೈದಿ ಕಪನೂರ್ ಇಂಡಸ್ಡ್ರಿಯಲ್ ಏರಿಯಾದಲ್ಲಿ ಇರುವ ಖಚಿತ ಮಾಹಿತಿ ಸಿಕ್ಕಿದೆ. ಈ ವೇಳೆ ಆತನನ್ನು ಬಂಧಿಸಲು ಹೋದಾಗ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ಈ ವೇಳೆ ಆತ್ಮರಕ್ಷಣೆಗಾಗಿ ನಮ್ಮ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಜೊತೆಗೆ ಆರೋಪಿಯ ಬಲಗಾಗಲಿಗೆ ಗುಂಡು ಹೊಡೆದಿದ್ದಾರೆ. ಪರಾರಿಯಾದ ಇನ್ನಿಬ್ಬರು ಕೈದಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಗಾಯಗೊಂಡ ಕೈದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಆರೋಗ್ಯ ಸ್ಥಿರವಾಗಿದೆ. ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಸಂಬಂಧಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯಲ್ಲಿ ಗಾಯಗೊಂಡ ಪೇದೆ ಹಾಗೂ ಆರೋಪಿಯ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ. ಗಾಯಗೊಂಡ ಕೈದಿ ಸಂತೋಷ ಹಾಗೂ ಪೊಲೀಸರನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

(Top) Kalaburagi Police Commissioner Sharanappa SD inspects Kalaburagi Central Jail premises on Tuesday. (Inset) The three convicts who escaped
ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಪರಾರಿ! Video

ಪರಾರಿಯಾಗಿದ್ದು ಹೇಗೆ?

ಮಸ್ತಾನ್, ಸಂತೋಷ್ ಹಾಗೂ ಸಾಗರ್ ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾದ ಕೈದಿಗಳು. ಬೀದರ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಈ ಮೂವರು ಶಿಕ್ಷೆಗೆ ಒಳಪಟ್ಟಿದ್ದರು. ನಿನ್ನೆ ನಸುಕಿನ ಜಾವ 3 ಗಂಟೆಗೆ ಜೈಲಿನ ಕಂಪೌಡ್ ಹಾರಿ ಈ ಮೂವರು ಪರಾರಿಯಾಗಿದ್ದಾರೆ. ಕೈದಿಗಳು ಪರಾರಿಯಾಗಲು ಜೈಲು ಸಿಬ್ಬಂದಿಯೇ ಸಹಕಾರ ನೀಡಿದ್ದಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

ಮಧ್ಯರಾತ್ರಿ ಲಾಕಪ್‌ನಲ್ಲಿ ಇರಬೇಕಾದ ಕೈದಿಗಳನ್ನು ಜೈಲು ಸಿಬ್ಬಂದಿ ಯಾಕೆ ಹೊರಗೆ ಬಿಟ್ಟರು ಎಂಬ ಪ್ರಶ್ನೆ ಮೂಡಿದೆ. ಈ ಮೂಲಕ ಕೈದಿಗಳ ಪರಾರಿಗೆ ಜೈಲಿನ ಹಲವು ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೈದಿಗಳ ಪರಾರಿ: ಎಂಟು ಕಾರಾಗೃಹ ಸಿಬ್ಬಂದಿ ಅಮಾನತು

ಈ ಘಟನೆ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆರೋಪದಡಿ ಎಂಟು ಕಾರಾಗೃಹ ಸಿಬ್ಬಂದಿಯನ್ನು ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಲಾಗಿದೆ.

ಪರಾರಿಯಾದ ಕೈದಿಗಳು ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದ ಮಸ್ತಾನ್, ಔರಾದ್ ತಾಲೂಕಿನ ಸಂತಪುರ ಗ್ರಾಮದ ಸಂತೋಷ್ ಬಸಪ್ಪ ಹಾಗೂ ಬೀದರ್ ತಾಲೂಕಿನ ಬಕ್ಚೌಡಿ ಗ್ರಾಮದ ಸಾಗರ್ ಭೀಮರಾಯ. ಇವರು ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.

ಭದ್ರತಾ ಗೋಡೆಯನ್ನು ಹಾರಿ ಕಾರಾಗೃಹದಿಂದ ತಪ್ಪಿಸಿಕೊಂಡಿರುವ ಅವರು ಪರಾರಿಯಾಗಿರುವ ವಿಷಯ ನಿನ್ನೆ ಮಂಗಳವಾರ ಬೆಳಗ್ಗೆ ನಂತರವೇ ಕಾರಾಗೃಹ ಸಿಬ್ಬಂದಿಗೆ ತಿಳಿದುಬಂದಿದೆ. ಬಳಿಕ ಸಿಬ್ಬಂದಿ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು, ಪರಾರಿಯಾದ ಕೈದಿಗಳನ್ನು ಪತ್ತೆಹಚ್ಚಿ ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಿಬ್ಬಂದಿಗೆ ತಿಳಿಸಿದ್ದಾರೆ.

ಬೆಳಗಾವಿ ವಲಯದ ಕಾರಾಗೃಹಗಳ ಡಿಐಜಿ ಎಂ. ಸೋಮಶೇಖರ್ ನಿನ್ನೆ ಸಂಜೆ ಕಾರಾಗೃಹಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ವಿಚಾರಣೆ ನಡೆಸಿದರು.


ಕಾರಾಗೃಹಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಅಲೋಕ್ ಕುಮಾರ್, ಕರ್ತವ್ಯಲೋಪದ ಆರೋಪದಡಿ ಮೂವರು ವಾರ್ಡರ್‌ಗಳು, ಇಬ್ಬರು ಮುಖ್ಯ ವಾರ್ಡರ್‌ಗಳು, ಒಬ್ಬ ಸಹಾಯಕ ಅಧೀಕ್ಷಕ, ಒಬ್ಬ ಅಧೀಕ್ಷಕ ಹಾಗೂ ಒಬ್ಬ ಕಾರ್ಯನಿರ್ವಾಹಕ ಜೈಲರ್ ಸೇರಿದಂತೆ ಒಟ್ಟು ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಹೊಸ ಕಾರಾಗೃಹ ಅಧೀಕ್ಷಕರು ಬುಧವಾರ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ.

ಇದೇ ವೇಳೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮೈಕೇರಿ, ಕಾರಾಗೃಹ ಇಲಾಖೆ ವ್ಯಾಪ್ತಿಗೆ ಬರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸ್ವಕ್ಷೇತ್ರ ಕಲಬುರಗಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವರು ಈ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com