

ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಧರಣಿ ಕೂರುವುದು ಬೇಡ ಎಂದು ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರ ಪರವಾಗಿ ಧರಣಿ ನಡೆಸುವ ಬದಲು ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಎಚ್.ಡಿ. ದೇವೇಗೌಡರು ಪ್ರತಿಭಟನೆ ನಡೆಸಲಿ ಎಂದು ಸಲಹೆ ನೀಡಿದ್ದಾರೆ.
ದೇವೇಗೌಡರು ಪ್ರಧಾನಿ ಮೋದಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಿದ್ದರೆ ಮೇಕೆದಾಟು ಮತ್ತು ಮಹದಾಯಿ ಯೋಜನೆಗಳ ಕುರಿತು ಕೇಂದ್ರದ ಮೇಲೆ ಒತ್ತಡ ಏಕೆ ತರುತ್ತಿಲ್ಲ? ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಬೇಕಲ್ಲವೇ ಎಂದು ಪ್ರಶ್ನಿಸಿದರು.
ಹಾಸನ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ದೇವೇಗೌಡರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಪುತ್ರ ವ್ಯಾಮೋಹ ಬಿಟ್ಟು ರಾಜ್ಯದ ಜನರ ಸಮಸ್ಯೆಗಳ ಕಡೆ ಗಮನಹರಿಸಬೇಕು, ಕುಮಾರಸ್ವಾಮಿ, ಮತ್ತು ನಿಖಿಲ್ ಅವರನ್ನು ಮೆಚ್ಚಿಸಲು ಧರಣಿ ಕೂರಬೇಡಿ ಎಂದು ಸಲಹೆ ನೀಡಿದರು.
ಬಿಡದಿ ಪ್ರತಿಭಟನೆ ವೇಳೆ ರೈತರ ಮೇಲೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ನೀಡಿರುವ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಪೊರಕೆ, ಚಪ್ಪಲಿ ಹಿಡಿದುಕೊಂಡು ಬಂದಿದ್ದರೆ ಅವರ ಮೇಲೂ ಕೇಸ್ ಆಗುತ್ತಿತ್ತು ಎಂದರು.