

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳಲ್ಲಿ ಡಿಜಿಟಲ್ ಪಾವತಿ ನಂಬಿ ಪ್ರಯಾಣಿಸುವ ಸಾರ್ವಜನಿಕರಿಗೆ ಹೊಸ ತಲೆನೋವು ಶುರುವಾಗಿದೆ.
ಬಸ್‌ಗಳಲ್ಲಿ ಅಳವಡಿಸಲಾಗಿರುವ ಹೊಸ ಯುಪಿಐ (UPI) ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಲ್ಲಿ (ETM) ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರ ಖಾತೆಯಿಂದ ಹಣ ಕಡಿತವಾಗುತ್ತಿದ್ದರೂ ಟಿಕೆಟ್ ಮಾತ್ರ ಪ್ರಿಂಟ್ ಆಗುತ್ತಿಲ್ಲ.
ಹೆಬ್ಬಾಳ–ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬಂದಿದ್ದು, ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.
ಕಲ್ಯಾಣನಗರದಲ್ಲಿ ಬಸ್ ಹತ್ತಿದ ಮಹಿಳೆಯೊಬ್ಬರು ಬಾಣಸವಾಡಿಗೆ ತೆರಳಲು ರೂ.12 ಟಿಕೆಟ್‌ಗಾಗಿ ನಿರ್ವಾಹಕರ ಯಂತ್ರದಲ್ಲಿದ್ದ ಡೈನಾಮಿಕ್ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಮೂಲಕ ಹಣ ಪಾವತಿಸಿದರು. ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದ್ದರೂ ಟಿಕೆಟ್ ಮಾತ್ರ ಮುದ್ರಣವಾಗಲಿಲ್ಲ.
ನಂತರ ಅವರು ಮತ್ತೊಂದು ಯುಪಿಐ ಆ್ಯಪ್ ಮೂಲಕ ಮತ್ತೆ ಹಣ ಪಾವತಿಸಲು ಪ್ರಯತ್ನಿಸಿದರು. ಎರಡನೇ ಬಾರಿಯೂ ಹಣ ಖಾತೆಯಿಂದ ಕಡಿತವಾದರೂ ಟಿಕೆಟ್ ಸಿಗಲಿಲ್ಲ. ಬಳಿಕ ಮತ್ತೊಬ್ಬ ಪ್ರಯಾಣಿಕರು ಅವರ ಪರವಾಗಿ ರೂ.12 ಪಾವತಿಸಿದರೂ ಅದೇ ಸಮಸ್ಯೆ ಮರುಕಳಿಸಿತು.
ಒಟ್ಟು ರೂ.36 ಖಾತೆಯಿಂದ ಕಡಿತವಾದರೂ ಒಂದೂ ಟಿಕೆಟ್ ಕೂಡ ಮುದ್ರಣವಾಗದ ಹಿನ್ನೆಲೆಯಲ್ಲಿ, ಮಹಿಳೆ ಮತ್ತು ನಿರ್ವಾಹಕರ ನಡುವೆ ವಾಗ್ವಾದ ನಡೆಯಿತು. ಈ ಗೊಂದಲದಿಂದ ಬಸ್ ಸುಮಾರು 8ರಿಂದ 10 ನಿಮಿಷಗಳ ಕಾಲ ನಿಂತಿತ್ತು. ಬಳಿಕ ಪರಿಸ್ಥಿತಿಯನ್ನು ಮನಗಂಡ ನಿರ್ವಾಹಕರು ಟಿಕೆಟ್ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ನಿರ್ವಾಹಕರು, "ಯುಪಿಐ ಮೂಲಕ ಹಣ ಯಶಸ್ವಿಯಾಗಿ ಜಮೆಯಾಗಿದ್ದರೆ ಟಿಕೆಟ್ ಸ್ವಯಂಚಾಲಿತವಾಗಿ ಮುದ್ರಣವಾಗುತ್ತದೆ. ಟಿಕೆಟ್ ಬರದಿದ್ದರೆ ಪಾವತಿ ಪೂರ್ಣಗೊಂಡಿಲ್ಲ ಎಂದರ್ಥ" ಎಂದು ತಮ್ಮ ವಾದ ಮಂಡಿಸಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆ ವೋಲ್ವೋ ಬಸ್‌ನಲ್ಲೂ ನಡೆದಿದೆ. ಟಿನ್ ಫ್ಯಾಕ್ಟರಿಯಿಂದ ಬಾಣಸವಾಡಿಗೆ ಪ್ರಯಾಣಿಸುತ್ತಿದ್ದ ದಿವ್ಯಾ ಕುಮಾರ್ ಎಂಬ ಪ್ರಯಾಣಿಕರು, ಹಲವು ಮಂದಿಗೆ ಯುಪಿಐ ಮೂಲಕ ಹಣ ಪಾವತಿಸಿದರೂ ಟಿಕೆಟ್ ಬರಲಿಲ್ಲ ಎಂದು ತಿಳಿಸಿದ್ದಾರೆ.
ಕೊನೆಗೆ ನಿರ್ವಾಹಕರು ಯಾರ ಬಳಿ ನಗದು ಇದೆಯೇ ಎಂದು ಕೇಳಿದರು. ಒಬ್ಬ ಪ್ರಯಾಣಿಕರು ನಗದು ನೀಡಿ ಎಲ್ಲರ ಟಿಕೆಟ್ ಪಡೆದರು. ಉಳಿದವರು ಆ ಪ್ರಯಾಣಿಕರ ಖಾತೆಗೆ ಯುಪಿಐ ಮೂಲಕ ಹಣ ವರ್ಗಾಯಿಸಿದರು," ಎಂದು ವಿವರಿಸಿದ್ದಾರೆ.
ಈ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಅನೇಕ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಹೆಚ್ಚಿನ ಜನ ಈಗ ನಗದು ಇಟ್ಟುಕೊಳ್ಳುವುದಿಲ್ಲ. ನಿರ್ವಾಹಕರ ಬಳಿಯೂ ಚಿಲ್ಲರೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಯುಪಿಐ ವ್ಯವಸ್ಥೆ ಕೈಕೊಟ್ಟರೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ," ಎಂದು ಬರೆದುಕೊಂಡಿದ್ದಾರೆ.
ವಿಶೇಷವಾಗಿ ಹೆಬ್ಬಾಳ–ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಈ ತಾಂತ್ರಿಕ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಉಲ್ಲೇಖಿಸಿದ್ದು, ಬಿಎಂಟಿಸಿ ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಡಿಜಿಟಲ್ ಪಾವತಿ ವ್ಯವಸ್ಥೆಯ ಮೇಲೆಯೇ ಹೆಚ್ಚಿನ ಪ್ರಯಾಣಿಕರು ಅವಲಂಬಿತರಾಗಿರುವ ಈ ಸಂದರ್ಭದಲ್ಲಿ, ಯುಪಿಐ ತಾಂತ್ರಿಕ ದೋಷದಿಂದ ಉಂಟಾದ ಗೊಂದಲ ಬಿಎಂಟಿಸಿಯ ಡಿಜಿಟಲ್ ಟಿಕೆಟ್ ವ್ಯವಸ್ಥೆಯ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದುವರೆಗೆ ಈ ಕುರಿತು ಬಿಎಂಟಿಸಿಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ನೀಡಲಾಗಿಲ್ಲ.