ಬಿಡದಿ ಟೌನ್ ಶಿಪ್ ಯೋಜನೆ ಹಣ ಹೈಕಮಾಂಡ್ ಗೆ: BJP ನಾಯಕರ ಆರೋಪ; ಬೆಂಗಳೂರಿನಲ್ಲಿ ತೀವ್ರ ಪ್ರತಿಭಟನೆ; Video

ರೈತರು ಹಾಗೂ ಸ್ಥಳೀಯರ ತೀವ್ರ ವಿರೋಧದ ನಡುವೆಯೂ, ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಮಗ್ರ ಟೌನ್‌ಶಿಪ್ ಎಂದು ಬಿಂಬಿಸಲಾಗಿರುವ ಜಿಬಿಐಟಿ ಯೋಜನೆಗಾಗಿ ಭೂಸ್ವಾಧೀನದ ಅಂತಿಮ ಅಧಿಸೂಚನೆಗಳನ್ನು ಸರ್ಕಾರ ಹೊರಡಿಸಿರುವುದನ್ನು ಬಿಜೆಪಿ ಖಂಡಿಸಿತು.
BjP leaders protest against Bidadi township project in Bengaluru today
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರಿಂದ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಪ್ರತಿಭಟನೆ
Updated on

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗಾಗಿ ರೈತರ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಬಿಜೆಪಿ ಶುಕ್ರವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು.

ರೈತರು ಹಾಗೂ ಸ್ಥಳೀಯರ ತೀವ್ರ ವಿರೋಧದ ನಡುವೆಯೂ, ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಮಗ್ರ ಟೌನ್‌ಶಿಪ್ ಎಂದು ಬಿಂಬಿಸಲಾಗಿರುವ ಜಿಬಿಐಟಿ ಯೋಜನೆಗಾಗಿ ಭೂಸ್ವಾಧೀನದ ಅಂತಿಮ ಅಧಿಸೂಚನೆಗಳನ್ನು ಸರ್ಕಾರ ಹೊರಡಿಸಿರುವುದನ್ನು ಬಿಜೆಪಿ ಖಂಡಿಸಿತು.

ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಡದಿ ಸುತ್ತಮುತ್ತಲಿನ ಗ್ರಾಮಗಳ ರೈತರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ಲೆಕಾರ್ಡ್‌ಗಳನ್ನು ಹಿಡಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರವನ್ನು "ರೈತ ವಿರೋಧಿ ಸರ್ಕಾರ" ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡದಿ ಸ್ಯಾಟಲೈಟ್ ಟೌನ್‌ಶಿಪ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಶೇ.80ಕ್ಕೂ ಹೆಚ್ಚು ರೈತರು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿ ಈ ಯೋಜನೆಯ ಬಗ್ಗೆ ಏಕೆ ಇಷ್ಟೊಂದು ಆಸಕ್ತಿ ತೋರಿಸುತ್ತಿದ್ದಾರೆ ಎಂದು ರೈತ ಸಮುದಾಯ ಪ್ರಶ್ನಿಸುತ್ತಿದೆ. ಸರ್ಕಾರ ಭೂಸ್ವಾಧೀನದ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಡದಿ ಯೋಜನೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ರೂಪಿಸಿರುವ ರಿಯಲ್ ಎಸ್ಟೇಟ್ ಯೋಜನೆಯಾಗಿದೆ. ರಾಜ್ಯ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿಯಿದೆ. ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವೆ ಒಪ್ಪಂದವಾಗಿದೆ. ಈ ಯೋಜನೆಯ ಹಣ ಕಾಂಗ್ರೆಸ್ ಪಕ್ಷಕ್ಕೆ ಹೋಗಲಿದೆ. ಆದರೆ ಮುಖ್ಯ ವಿಷಯ ಅದು ಅಲ್ಲ; ರೈತರ ಹಿತಾಸಕ್ತಿಯೇ ಮುಖ್ಯ ಎಂದು ಆರೋಪಿಸಿದರು.

ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದರು.

BjP leaders protest against Bidadi township project in Bengaluru today
'ರಕ್ತ ಕೊಟ್ಟೇವು, ಭೂಮಿ ಕೊಡುವುದಿಲ್ಲ': ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಮಹಿಳೆಯರಿಂದ ಬ್ಯಾನರ್ ಗೆ ರಕ್ತ ಹಚ್ಚಿ ಪ್ರತಿಭಟನೆ

ಕಳೆದ ತಿಂಗಳು ರಾಮನಗರ ಮತ್ತು ಹರೋಹಳ್ಳಿ ತಾಲ್ಲೂಕಿನ ಮೂರು ಗ್ರಾಮಗಳ 499 ಎಕರೆ ಭೂಮಿಗೆ ಸಂಬಂಧಿಸಿದ ಮೊದಲ ಹಂತದ ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸಲಾಗಿತ್ತು. ಬುಧವಾರ ರಾಮನಗರ ತಾಲ್ಲೂಕಿನ ನಾಲ್ಕು ಗ್ರಾಮಗಳ ವ್ಯಾಪ್ತಿಯ ಸುಮಾರು 4,940 ಎಕರೆ ಭೂಮಿಗೆ ಸಂಬಂಧಿಸಿದ ಎರಡನೇ ಹಂತದ ಅಂತಿಮ ಅಧಿಸೂಚನೆಯನ್ನೂ ಸರ್ಕಾರ ಪ್ರಕಟಿಸಿದೆ.

ಮೂಲಗಳ ಪ್ರಕಾರ, ಈ ಯೋಜನೆಗೆ ಒಟ್ಟು 9,600 ಎಕರೆ ಭೂಮಿ ಅಗತ್ಯವಿದ್ದು, ಅದು ಒಂಬತ್ತು ಕಂದಾಯ ಗ್ರಾಮಗಳು ಹಾಗೂ 16 ಕಂದಾಯೇತರ ಗ್ರಾಮಗಳಲ್ಲಿ ವ್ಯಾಪಿಸಿದೆ.

ಈ ಯೋಜನೆಗಾಗಿ ಕಳೆದ ವರ್ಷದ ಮಾರ್ಚ್‌ನಲ್ಲಿ ಒಂಬತ್ತು ಗ್ರಾಮಗಳ ವ್ಯಾಪ್ತಿಯ 7,481 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಸೂಚನೆಗಳು ಹೊರಬರುವ ಸಾಧ್ಯತೆ ಇದೆ.

ಸರ್ಕಾರ ಪ್ರತಿ ಎಕರೆಗೆ 2.30 ಕೋಟಿ ರೂಪಾಯಿ ದರ ನಿಗದಿಪಡಿಸಿದ್ದು, ಭೂಮಿಯಲ್ಲಿ ಬೆಳೆದಿರುವ ಬೆಳೆಗಳ ಆಧಾರದ ಮೇಲೆ ಹೆಚ್ಚುವರಿ ಪರಿಹಾರ ನೀಡುವ ಪ್ರಸ್ತಾವವೂ ಇದೆ ಎಂದು ಮೂಲಗಳು ತಿಳಿಸಿವೆ.

ಇದರ ನಡುವೆಯೂ ರೈತರು ಯೋಜನೆ ವಿರೋಧಿಸಿ ಸ್ಥಳೀಯ ಮಟ್ಟದಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಸೋಮವಾರ ಮಂಡಲಹಳ್ಳಿಯಲ್ಲಿ ಜಂಟಿ ಮಾಪನ ಸಮಿತಿ (JMC) ಅಧಿಕಾರಿಗಳನ್ನು ಮಹಿಳೆಯರು ಪೊರಕೆ ಹಿಡಿದು ಓಡಿಸಿದ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಯೋಜನೆ ಪರ ಮತ್ತು ವಿರೋಧಿ ರೈತರ ನಡುವೆ ಕೆಲವೆಡೆ ಮುಖಾಮುಖಿ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇದಕ್ಕೆ ಮಧ್ಯೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಭೂಮಿ ನೀಡಲು ಇಚ್ಛಿಸದವರು ಕೃಷಿ ಮುಂದುವರಿಸಬಹುದು ಎಂದಿರುವ ಅವರು, ಯೋಜನೆ ಕುರಿತು ಪರಿಶೀಲಿಸಲು ಸಮಿತಿ ರಚಿಸಲಾಗುವುದು ಮತ್ತು ಅದರ ಶಿಫಾರಸುಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com