ಬೆಂಗಳೂರು: ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತವಾಗಿ ಜಾತಿ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಿಸುವ ಸೇವೆಗೆ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಪ್ರಮುಖ ಹಿರಿಯ ಅಧಿಕಾರಿಗಳು ಇದ್ದರು.
ರಾಜ್ಯದಲ್ಲಿ ಇನ್ಮುಂದೆ ಅರ್ಹ ವ್ಯಕ್ತಿಗಳು ಜಾತಿ ಪ್ರಮಾಣಪತ್ರಗಳನ್ನು ಯಾವುದೇ ವಿತರಣಾ ಶುಲ್ಕವಿಲ್ಲದೆ ತಮ್ಮ ಮನೆ ಬಾಗಿಲಲ್ಲೇ ಪಡೆಯಬಹುದು ಮತ್ತು ಇದರೊಂದಿಗೆ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ಉಪ ತಹಸೀಲ್ದಾರ್‌ಗಳಿಗೆ ನೀಡಲಾಗಿದೆ.
ಈ ಉಪಕ್ರಮಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ, ತಂತ್ರಜ್ಞಾನ ಮತ್ತು ಸರಳೀಕೃತ ಕಾರ್ಯವಿಧಾನಗಳ ಮೂಲಕ ಆಡಳಿತವನ್ನು ಜನರಿಗೆ ಹತ್ತಿರವಾಗಿಸುವುದರೊಂದಿಗೆ ಇವು ರಾಜ್ಯದ ಆಡಳಿತಾತ್ಮಕ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಸೃಷ್ಟಿಸುತ್ತವೆ ಎಂದು ಹೇಳಿದರು.
'ಇದು ಕೇವಲ ಪ್ರಮಾಣಪತ್ರಗಳನ್ನು ವಿತರಿಸುವ ವಿಷಯವಲ್ಲ; ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಗುರುತು ಮತ್ತು ಧ್ವನಿಯನ್ನು ರಕ್ಷಿಸುವ ವಿಷಯವಾಗಿದೆ. ಜನರು ಸರ್ಕಾರಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಬದಲು, ಸರ್ಕಾರಿ ಸೇವೆಗಳು ನೇರವಾಗಿ ಜನರನ್ನು ತಲುಪುವಂತೆ ಮಾಡುವುದೇ ನಮ್ಮ ಉದ್ದೇಶ' ಎಂದರು.
ಹೊಸ ಕಾರ್ಯಕ್ರಮದಡಿ, ಸರ್ಕಾರವು ಈಗಾಗಲೇ 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣಪತ್ರಗಳನ್ನು ಜಿಲ್ಲಾ, ತಾಲೂಕು ಮತ್ತು ಗ್ರಾಮವಾರು ಪಿಡಿಎಫ್ (PDF) ಸ್ವರೂಪದಲ್ಲಿ ವರ್ಗೀಕರಿಸಿ ಜಿಲ್ಲಾಧಿಕಾರಿಗಳೊಂದಿಗೆ ಹಂಚಿಕೊಂಡಿದೆ. ಜಿಲ್ಲಾಡಳಿತಗಳು ಈ ಪ್ರಮಾಣಪತ್ರಗಳನ್ನು ಮುದ್ರಿಸಿ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಿವೆ.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಫಲಾನುಭವಿಗಳ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಸೇವೆ/ಸೌಲಭ್ಯ ಪಡೆದ ನಂತರದ ಸ್ವೀಕೃತಿ ವಿವರಗಳನ್ನು ದಾಖಲಿಸಲು ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ನಾಗರಿಕರು ನಿಗದಿತ ಸರ್ಕಾರಿ ವೆಬ್‌ಸೈಟ್‌ನಿಂದ ತಮ್ಮ ಜಾತಿ ಪ್ರಮಾಣಪತ್ರದ ಆರ್‌ಡಿ (RD) ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಪ್ರಮಾಣಪತ್ರಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಸೇವೆಯು ಸರ್ಕಾರಿ ಸಹಾಯ ಕೇಂದ್ರಗಳಲ್ಲೂ ಲಭ್ಯವಿರುತ್ತದೆ.
ಸರ್ಕಾರವು ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ್ದು, ಇಲ್ಲಿ ನಾಗರಿಕರು ಜಾತಿ ಪ್ರಮಾಣಪತ್ರಗಳು ಮತ್ತು ಇತರ ಅಗತ್ಯ ದಾಖಲೆಗಳ ಮುದ್ರಿತ ಪ್ರತಿಗಳನ್ನು ಉಚಿತವಾಗಿ ಪಡೆಯಬಹುದು.
ಸುಮಾರು 57 ಲಕ್ಷ ಜಾತಿ ಪ್ರಮಾಣಪತ್ರಗಳನ್ನು ಈಗಾಗಲೇ ಫಲಾನುಭವಿಗಳ ಮೊಬೈಲ್ ಸಂಖ್ಯೆಗಳೊಂದಿಗೆ ಜೋಡಿಸಲಾಗಿದೆ. ವಾಟ್ಸಾಪ್ ಮತ್ತು ಎಸ್‌ಎಂಎಸ್ (SMS) ಮೂಲಕ ಡೌನ್‌ಲೋಡ್ ಲಿಂಕ್‌ಗಳನ್ನು ಕಳುಹಿಸಲಾಗಿದ್ದು, ಇದರಿಂದ ಯಾವುದೇ ವೆಚ್ಚವಿಲ್ಲದೆ ಡಿಜಿಟಲ್ ರೂಪದಲ್ಲಿ ಅವುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಉಪ ತಹಸೀಲ್ದಾರರು ವಾಸಸ್ಥಳ ಪ್ರಮಾಣಪತ್ರಗಳನ್ನು ನೀಡಲಿದ್ದಾರೆ. ಮತ್ತೊಂದು ಪ್ರಮುಖ ಸುಧಾರಣೆಯಾಗಿ, ಕಾಯಂ ವಾಸಸ್ಥಳ ಪ್ರಮಾಣಪತ್ರಗಳನ್ನು ನೀಡುವ ಹೆಚ್ಚುವರಿ ಅಧಿಕಾರವನ್ನು ಕಂದಾಯ ಇಲಾಖೆಯು ಉಪ ತಹಸೀಲ್ದಾರರಿಗೆ ವಹಿಸಿದೆ. ಈ ಕ್ರಮದಿಂದಾಗಿ ಪ್ರಕ್ರಿಯೆಯ ಸಮಯ ಕಡಿಮೆಯಾಗಲಿದ್ದು, ಸೇವೆಯು ಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವ ನಿರೀಕ್ಷೆಯಿದೆ.
ಸರ್ಕಾರವೇ ನಿಮ್ಮ ಬಾಗಿಲಿಗೆ ಬರುತ್ತದೆ. ಇದು ನಮ್ಮ ಭರವಸೆ. ಅತ್ಯಂತ ತಳಮಟ್ಟದ ಅಥವಾ ಸಮಾಜದ ಅಂಚಿನಲ್ಲಿರುವ ನಾಗರಿಕರೂ ಸಹ ಯಾವುದೇ ತಾರತಮ್ಯ ಅಥವಾ ವಿಳಂಬವಿಲ್ಲದೆ, ಗೌರವಯುತವಾಗಿ ಮತ್ತು ಸುಲಭವಾಗಿ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸುವುದು ಸರ್ಕಾರದ ಆದ್ಯತೆಯಾಗಿದೆ. ದಕ್ಷ ಮತ್ತು ಪಾರದರ್ಶಕ ಆಡಳಿತದ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವುದು ಕರ್ನಾಟಕದ ಪ್ರಗತಿಗೆ ಅತ್ಯಗತ್ಯ' ಎಂದು ಶಿವಕುಮಾರ್ ತಿಳಿಸಿದರು.