

ಬೆಂಗಳೂರು: ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿ ಬೀದಿ ವ್ಯಾಪಾರಿಗಳಿಗೆ ನಿಗದಿತ ಸ್ಥಳಗಳನ್ನು ಗುರುತಿಸಿ, ಅಲ್ಲಿಯೇ ವ್ಯಾಪಾರ ನಡೆಸಲು ಅವಕಾಶ ನೀಡಲಾಗುವುದು ಎಂದು ಬೆಂಗಳೂರು ಕೇಂದ್ರ ನಗರ ನಿಗಮದ (BCCC) ಆಯುಕ್ತ ಜಗದೀಶ್ ಜಿ ತಿಳಿಸಿದ್ದಾರೆ.
ಚಿಕ್ಕಪೇಟೆ ವಿಭಾಗದ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿನ ಬೀದಿ ವ್ಯಾಪಾರಿಗಳಿಗೆ ನಿಗದಿತ ವ್ಯಾಪಾರ ಸ್ಥಳಗಳ ಹಂಚಿಕೆ ಕುರಿತು ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಅಕ್ಷರಶಃ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಪಾದಚಾರಿ ಮಾರ್ಗದಲ್ಲಿ ಬಿಳಿ ಗೆರೆಯಿಂದ ಗುರುತಿಸಲಾದ ಸ್ಥಳಗಳಲ್ಲಷ್ಟೇ ಬೀದಿ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದು ಹೇಳಿದರು.
ಇದರಿಂದ ಬೀದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ, ಸಾರ್ವಜನಿಕರಿಗೆ ಪಾದಚಾರಿ ಮಾರ್ಗಗಳು ಸುರಕ್ಷಿತವಾಗಿ, ಅಡೆತಡೆಗಳಿಲ್ಲದೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ ಬಿಸಿಸಿಸಿ ವತಿಯಿಂದ ಪಾದಚಾರಿ ಮಾರ್ಗದಲ್ಲಿ ಬಿಳಿ ಗೆರೆಯನ್ನು ಎಳೆದು ನಿಗದಿತ ವ್ಯಾಪಾರ ವಲಯಗಳನ್ನು ಗುರುತಿಸುವ ಕಾರ್ಯ ಆರಂಭಿಸಲಾಗಿದೆ. ಈ ಗುರುತುಗಳ ಉದ್ದೇಶ ಬೀದಿ ವ್ಯಾಪಾರಿಗಳನ್ನು ನಿಯಂತ್ರಿತ ಪ್ರದೇಶಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವುದರ ಜೊತೆಗೆ, ಪಾದಚಾರಿಗಳಿಗೆ ಮುಕ್ತವಾಗಿ ಸಂಚರಿಸಲು ಸಾಕಷ್ಟು ಜಾಗ ಉಳಿಯುವಂತೆ ನೋಡಿಕೊಳ್ಳುವುದಾಗಿದೆ.
ಸಭೆಯಲ್ಲಿ ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ವೆಂಕಟಚಲಪತಿ, ಜಂಟಿ ಆಯುಕ್ತ ಹೇಮಂತ್ ಶರಣ್, ಉಪ ಕಾನೂನು ಅಧಿಕಾರಿ, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಕಲ್ಯಾಣ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.