ಚೀನಿ ಸೈಬರ್ ವಂಚನಾ ಜಾಲದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗರ ರಕ್ಷಣೆ..!

ಥಾಯ್ಲೆಂಡ್, ಮ್ಯಾನ್ಮಾರ್, ಲಾವೋಸ್ ಹಾಗೂ ಕಂಬೋಡಿಯಾ ದೇಶಗಳಲ್ಲಿ ಐಟಿ, ಗ್ರಾಹಕ ಸೇವೆ, ಡೇಟಾ ಎಂಟ್ರಿ ಅಥವಾ ಆನ್‌ಲೈನ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಬಳದ ಉದ್ಯೋಗದ ಆಮಿಷ ಒಡ್ಡುವ ಆಫರ್‌ಗಳನ್ನು ಪರಿಶೀಲಿಸದೇ ಒಪ್ಪಿಕೊಳ್ಳಬಾರದು.
file photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಮ್ಯಾನ್ಮಾರ್‌ನಲ್ಲಿರುವ ಚೀನಿ ವಂಚನಾ ಜಾಲದ (Scam Compound) ಕೇಂದ್ರದಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ ಇಬ್ಬರು ಯುವಕರನ್ನು ಯಶಸ್ವಿಯಾಗಿ ರಕ್ಷಿಸಿ ಭಾರತಕ್ಕೆ ಕರೆತರಲಾಗಿದೆ.

ಕರ್ನಾಟಕ ಸೈಬರ್ ಕಮಾಂಡ್, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C), ಜಾರಿ ನಿರ್ದೇಶನಾಲಯ (ED) ಹಾಗೂ ಮ್ಯಾನ್ಮಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಜಂಟಿ ಕಾರ್ಯಾಚರಣೆಯ ಫಲವಾಗಿ ಈ ರಕ್ಷಣೆ ಸಾಧ್ಯವಾಗಿದೆ. ಇಬ್ಬರೂ ಯುವಕರು ಸೋಮವಾರ ತಡರಾತ್ರಿ ಸುರಕ್ಷಿತವಾಗಿ ತಮ್ಮ ಮನೆಗಳಿಗೆ ತಲುಪಿದ್ದಾರೆ.

ಕರ್ನಾಟಕ ಸೈಬರ್ ಕಮಾಂಡ್ ನೀಡಿದ ಮಾಹಿತಿ ಪ್ರಕಾರ, ಜಾರಿ ನಿರ್ದೇಶನಾಲಯದ ಉಪನಿರ್ದೇಶಕರಿಂದ ದೊರೆತ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.

ಬಳಿಕ I4C ಹಾಗೂ ಮ್ಯಾನ್ಮಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಅತಿ ಕಡಿಮೆ ಅವಧಿಯಲ್ಲಿ ಇಬ್ಬರು ಯುವಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು,

"ಭಾರತೀಯ ನಾಗರಿಕರ ರಕ್ಷಣೆಯಲ್ಲಿ ತ್ವರಿತ ಮಾಹಿತಿ ವಿನಿಮಯ, ವಿವಿಧ ತನಿಖಾ ಸಂಸ್ಥೆಗಳ ಸಮನ್ವಯ ಹಾಗೂ ರಾಜತಾಂತ್ರಿಕ ಸಹಕಾರ ಎಷ್ಟು ಪರಿಣಾಮಕಾರಿ ಎಂಬುದಕ್ಕೆ ಈ ಕಾರ್ಯಾಚರಣೆ ಉತ್ತಮ ಉದಾಹರಣೆಯಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ಮಾರ್‌ನ ಕಯಿನ್ (Kayin) ರಾಜ್ಯದಲ್ಲಿರುವ ಈ ವಂಚನಾ ಕೇಂದ್ರವು ಚೀನಿ ಅಪರಾಧ ಜಾಲಗಳ ನಿಯಂತ್ರಣದಲ್ಲಿರುವ ಹಲವು ಕೇಂದ್ರಗಳಲ್ಲಿ ಒಂದಾಗಿದೆ.

file photo
ಬೆಂಗಳೂರಿನಲ್ಲಿ 500 ರೂ ನಕಲಿ ನೋಟು ಮುದ್ರಿಸಿ ಚಲಾವಣೆ: ಇಬ್ಬರ ಬಂಧನ; ಬೆಚ್ಚಿ ಬಿದ್ದ ರಾಜಧಾನಿ ಜನ!

ಈ ರೀತಿಯ ಕೇಂದ್ರಗಳಲ್ಲಿ ಮಾನವ ಕಳ್ಳಸಾಗಣೆಗೆ ಒಳಗಾದವರನ್ನು ಬಲವಂತವಾಗಿ ಆನ್‌ಲೈನ್ ಪ್ರೇಮ ವಂಚನೆ (Romance Scam) ಮತ್ತು ಹೂಡಿಕೆ ವಂಚನೆ (Investment Fraud) ನಡೆಸಲು ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ "ಪಿಗ್-ಬಚ್ಚರಿಂಗ್ ಸ್ಕ್ಯಾಮ್" (Pig-Butchering Scam) ಎಂದು ಕರೆಯಲಾಗುತ್ತದೆ. ಈ ವಂಚನೆಗಳ ಮೂಲಕ ವಿಶ್ವದಾದ್ಯಂತ ಸಾವಿರಾರು ಜನರನ್ನು ವಂಚಿಸಲಾಗುತ್ತಿದೆ ಎಂದು ಕರ್ನಾಟಕ ಸೈಬರ್ ಕಮಾಂಡ್ ತಿಳಿಸಿದೆ.

ವಿದೇಶಿ ಉದ್ಯೋಗದ ಆಮಿಷಕ್ಕೆ ಬಲಿಯಾಗದಿರಿ

ಈ ಘಟನೆಯ ಬಳಿಕ ಕರ್ನಾಟಕ ಸೈಬರ್ ಕಮಾಂಡ್ ಯುವಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಥಾಯ್ಲೆಂಡ್, ಮ್ಯಾನ್ಮಾರ್, ಲಾವೋಸ್ ಹಾಗೂ ಕಂಬೋಡಿಯಾ ದೇಶಗಳಲ್ಲಿ ಐಟಿ, ಗ್ರಾಹಕ ಸೇವೆ, ಡೇಟಾ ಎಂಟ್ರಿ ಅಥವಾ ಆನ್‌ಲೈನ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಬಳದ ಉದ್ಯೋಗದ ಆಮಿಷ ಒಡ್ಡುವ ಆಫರ್‌ಗಳನ್ನು ಪರಿಶೀಲಿಸದೇ ಒಪ್ಪಿಕೊಳ್ಳಬಾರದು ಎಂದು ಸೂಚಿಸಿದೆ.

ಉದ್ಯೋಗ ವಂಚನೆಗಳಲ್ಲಿ ಈ ರೀತಿಯ ಈ ಲಕ್ಷಣಗಳು ಕಂಡು ಬಂದರೆ ಎಚ್ಚರ..

  • ಸಾಮಾಜಿಕ ಜಾಲತಾಣ, ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ಅನಿರೀಕ್ಷಿತ ಉದ್ಯೋಗದ ಆಫರ್ ಬರುವುದು.

  • ತಕ್ಷಣವೇ ವಿದೇಶಕ್ಕೆ ತೆರಳುವಂತೆ ಒತ್ತಾಯಿಸುವುದು ಮತ್ತು ಪ್ರಯಾಣದ ಟಿಕೆಟ್ ವ್ಯವಸ್ಥೆಯನ್ನು ನೇಮಕಾತಿದಾರರೇ ಮಾಡುವುದು.

  • ಕಂಪನಿಯ ಬಗ್ಗೆ ಯಾವುದೇ ದೃಢೀಕರಣವಿಲ್ಲದೆ ಹೆಚ್ಚಿನ ಸಂಬಳ ಹಾಗೂ ಉಚಿತ ವಸತಿ ಸೌಲಭ್ಯದ ಭರವಸೆ ನೀಡುವುದು.

  • ವಿದೇಶ ತಲುಪಿದ ಬಳಿಕ ಪಾಸ್‌ಪೋರ್ಟ್ ಒಪ್ಪಿಸುವಂತೆ ಸೂಚಿಸುವುದು ಅಥವಾ ಅಕ್ರಮವಾಗಿ ಭೂಗಡಿ ದಾಟುವಂತೆ ಹೇಳುವುದು.

ವಿದೇಶಕ್ಕೆ ಹೋಗುವ ಮುನ್ನ ಈ ಮುನ್ನೆಚ್ಚರಿಕೆ ಅಗತ್ಯ

ವಿದೇಶದಲ್ಲಿ ಉದ್ಯೋಗಕ್ಕೆ ತೆರಳುವ ಮುನ್ನ ಸಂಬಂಧಿತ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಅಧಿಕೃತ ಮೂಲಗಳ ಮೂಲಕ ಪರಿಶೀಲಿಸಬೇಕು. ಕುಟುಂಬ ಸದಸ್ಯರು ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ವಿದೇಶ ತಲುಪಿದ ಕೂಡಲೇ ಭಾರತೀಯ ರಾಯಭಾರ ಕಚೇರಿ ಅಥವಾ ದೂತಾವಾಸದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸೈಬರ್ ಕಮಾಂಡ್ ಸಲಹೆ ನೀಡಿದೆ.

ಯಾರಾದರೂ ಮಾನವ ಕಳ್ಳಸಾಗಣೆ, ಅಕ್ರಮ ಬಂಧನ ಅಥವಾ ಬೆದರಿಕೆಗೆ ಒಳಗಾದರೆ ಕೂಡಲೇ ಸಮೀಪದ ಸೈಬರ್ ಅಪರಾಧ ಪೊಲೀಸ್ ಠಾಣೆ, ಕರ್ನಾಟಕ ಸೈಬರ್ ಕಮಾಂಡ್, ಸಮೀಪದ ಭಾರತೀಯ ರಾಯಭಾರ ಕಚೇರಿ, I4C ಸಹಾಯವಾಣಿ 1930 ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕ ದೂರು ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com