ಕಾವೇರಿ ಜಲ ವಿವಾದ: ಸಿಎಂ ಡಿ.ಕೆ. ಶಿವಕುಮಾರ್–ತಮಿಳುನಾಡು ಸಿಎಂ ವಿಜಯ್ ನಡುವೆ ಶೀಘ್ರ ಮಾತುಕತೆ?

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಚೇರಿ ಮೂಲಗಳ ಪ್ರಕಾರ, ಸಭೆ ನಡೆಸುವಂತೆ ತಮಿಳುನಾಡು ಸರ್ಕಾರದಿಂದ ಮನವಿ ಬಂದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆಗಸ್ಟ್‌ 3ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಸಲು ಡಿ ಕೆ ಶಿವಕುಮಾರ್ ವಿಜಯ್ ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
CM D K Shivakumar and CM Vijay
ಡಿ ಕೆ ಶಿವಕುಮಾರ್, ಸಿಎಂ ವಿಜಯ್
Updated on

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ದಶಕಗಳಿಂದ ಭಿನ್ನಾಭಿಪ್ರಾಯ ಹೊಂದಿರುವ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಸಂಬಂಧಕ್ಕೆ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆ ಮೂಡಿದೆ. ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ನಡುವೆ ಶೀಘ್ರದಲ್ಲೇ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಚೇರಿ ಮೂಲಗಳ ಪ್ರಕಾರ, ಸಭೆ ನಡೆಸುವಂತೆ ತಮಿಳುನಾಡು ಸರ್ಕಾರದಿಂದ ಮನವಿ ಬಂದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆಗಸ್ಟ್‌ 3ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಸಲು ಡಿ ಕೆ ಶಿವಕುಮಾರ್ ವಿಜಯ್ ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಈ ಆಹ್ವಾನವನ್ನು ವಿಜಯ್ ಸ್ವೀಕರಿಸಿದ್ದಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

CM D K Shivakumar and CM Vijay
ಕಾವೇರಿ ಜಲವಿವಾದ ಸಮಸ್ಯೆ ಚರ್ಚೆಗೆ ಸರ್ವಪಕ್ಷ ಸಭೆ, ಆದೇಶ ಪುನರ್‌ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ: ಡಿ ಕೆ ಶಿವಕುಮಾರ್
CM D K Shivakumar and CM Vijay
'ತಮಿಳುನಾಡಿಗೆ ನೀರು ಬಿಡಲ್ಲ ಎಂದು ಹೇಳಿಲ್ಲ', ನೀರು ಬಿಡುಗಡೆ ವಿಚಾರದಲ್ಲಿ CWMA ನಿರ್ಧಾರವೇ ಅಂತಿಮ: ಸಚಿವ ರಾಮಲಿಂಗಾ ರೆಡ್ಡಿ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಹಲವು ವರ್ಷಗಳಿಂದ ಮುಖಾಮುಖಿಯಾಗಿದ್ದು, ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ ಡಿ ಕೆ ಶಿವಕುಮಾರ್ ಸರ್ಕಾರ ಒತ್ತು ನೀಡುತ್ತಿರುವುದು ನೆರೆಯ ರಾಜ್ಯದ ಆಕ್ಷೇಪಕ್ಕೂ ಕಾರಣವಾಗಿದೆ.

ಈ ಸಭೆ ನಡೆದರೆ, ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳ ನಡುವಿನ ಸಂಬಂಧವನ್ನು ಪುನರುಜ್ಜೀವನಗೊಳಿಸುವ ಹೊಸ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ. ಹಲವು ದಶಕಗಳ ಬಳಿಕ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ದ್ವಿಪಕ್ಷೀಯ ಮಾತುಕತೆ ನಡೆಸಲಿರುವುದು ಇದೇ ಮೊದಲ ಬಾರಿ ಆಗಲಿದೆ.

ಮೂಲಗಳ ಪ್ರಕಾರ, ಸಭೆಯಲ್ಲಿ ಮೇಕೆದಾಟು ಯೋಜನೆ, ಬರಗಾಲದ ವರ್ಷಗಳಲ್ಲಿ ಕಾವೇರಿ ನೀರು ಹಂಚಿಕೆಗೆ ಪರಸ್ಪರ ಒಪ್ಪಿಗೆಯ ಚೌಕಟ್ಟು ರೂಪಿಸುವುದು ಹಾಗೂ ಬೆಂಗಳೂರು–ಹೊಸೂರು ಮೆಟ್ರೋ ರೈಲು ಸಂಪರ್ಕ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ.

2021ರಲ್ಲಿ ಆಗಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದು ಮೇಕೆದಾಟು ಯೋಜನೆ ಕುರಿತು ಮಾತುಕತೆಗೆ ಪ್ರಸ್ತಾಪಿಸಿದ್ದರು. ಆದರೆ ಸ್ಟಾಲಿನ್ ಆ ಪ್ರಸ್ತಾವವನ್ನು ತಿರಸ್ಕರಿಸಿದ್ದರು.

ವಿಜಯ್ ಆಹ್ವಾನವನ್ನು ಸ್ವೀಕರಿಸಿದರೆ, ಕಾವೇರಿ ವಿವಾದದ ವಿಚಾರದಲ್ಲಿ ತಮಿಳುನಾಡು ಇದುವರೆಗೆ ಅನುಸರಿಸಿಕೊಂಡು ಬಂದಿದ್ದ ನಿಲುವಿನಿಂದ ಅದು ಮಹತ್ವದ ಬದಲಾವಣೆಯಾಗಲಿದೆ.

ಕಾವೇರಿ ನೀರು ಹಂಚಿಕೆ ವಿವಾದವನ್ನು ಕಾವೇರಿ ಜಲ ವಿವಾದ ನ್ಯಾಯಮಂಡಳಿ (CWDT) ಹಾಗೂ ಸುಪ್ರೀಂ ಕೋರ್ಟ್ ಈಗಾಗಲೇ ಇತ್ಯರ್ಥಗೊಳಿಸಿವೆ. ಆದ್ದರಿಂದ ಈ ವಿಷಯದಲ್ಲಿ ಕರ್ನಾಟಕದೊಂದಿಗೆ ಪ್ರತ್ಯೇಕ ಮಾತುಕತೆ ನಡೆಸುವುದಿಲ್ಲ ಎಂಬುದು ತಮಿಳುನಾಡಿನ ಅಧಿಕೃತ ನಿಲುವಾಗಿದೆ.

ಈ ಹಿಂದೆ ಡಿಎಂಕೆ ಹಾಗೂ ಎಐಎಡಿಎಂಕೆ ನೇತೃತ್ವದ ಸರ್ಕಾರಗಳು ಕಾವೇರಿ ವಿಚಾರದಲ್ಲಿ ಕರ್ನಾಟಕದೊಂದಿಗೆ ಮಾತುಕತೆ ನಡೆಸಬೇಕೆಂಬ ಬೇಡಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದವು. ಅಲ್ಲದೆ, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದು, ಪ್ರಸ್ತಾವಿತ ಅಣೆಕಟ್ಟಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲು ಪ್ರತ್ಯೇಕ ನ್ಯಾಯಮಂಡಳಿ ರಚಿಸುವಂತೆ ಆಗ್ರಹಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವಿಜಯ್ ಅವರಿಗೆ ಕರ್ನಾಟಕದೊಂದಿಗೆ ಈ ವಿಷಯದಲ್ಲಿ ಮಾತುಕತೆ ನಡೆಸುವುದು ರಾಜಕೀಯವಾಗಿ ಸವಾಲಿನ ವಿಷಯವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com