'ತಮಿಳುನಾಡಿಗೆ ನೀರು ಬಿಡಲ್ಲ ಎಂದು ಹೇಳಿಲ್ಲ', ನೀರು ಬಿಡುಗಡೆ ವಿಚಾರದಲ್ಲಿ CWMA ನಿರ್ಧಾರವೇ ಅಂತಿಮ: ಸಚಿವ ರಾಮಲಿಂಗಾ ರೆಡ್ಡಿ

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಶಿಫಾರಸುಗಳ ಆಧಾರದ ಮೇಲೆ ಮಾತ್ರ ನೀರು ಬಿಡುಗಡೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ.
Ramalinga reddy
ಸಚಿವ ರಾಮಲಿಂಗಾ ರೆಡ್ಡಿ
Updated on

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯ ಬೆನ್ನಲ್ಲೇ, ಕರ್ನಾಟಕದ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ನಾನು ಎಂದಿಗೂ ಹೇಳಿಲ್ಲ. ನೀರು ಬಿಡುಗಡೆ ಕುರಿತು ತೀರ್ಮಾನ ಕೈಗೊಳ್ಳುವುದು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA), ರಾಜ್ಯ ಸರ್ಕಾರವಲ್ಲ" ಎಂದು ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ರಾಮಲಿಂಗಾ ರೆಡ್ಡಿಯವರು ಪ್ರತಿಕ್ರಿಯೆ ನೀಡಿದ್ದಾರೆ.

"ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದಿಲ್ಲ ಎಂಬ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ". ರಾಜ್ಯದ ನಾಲ್ಕು ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಿಗೆ ಅತ್ಯಲ್ಪ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಮತ್ತು ಅವುಗಳಲ್ಲಿ ಸಮರ್ಪಕ ನೀರಿನ ಸಂಗ್ರಹ ಇಲ್ಲದಿರುವುದರಿಂದ ನೀರು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಶಿಫಾರಸುಗಳ ಆಧಾರದ ಮೇಲೆ ಮಾತ್ರ ನೀರು ಬಿಡುಗಡೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Ramalinga reddy
ಮೇಕೆದಾಟು ಯೋಜನೆಗೆ ಬಿಗ್‌ ಬೂಸ್ಟ್‌: ಕಾವೇರಿ ವನ್ಯಜೀವಿ ಧಾಮದಲ್ಲಿ ಬೋರ್‌ವೆಲ್ ಸಮೀಕ್ಷೆಗೆ ಸಿಎಂ ಡಿಕೆ.ಶಿವಕುಮಾರ್ ಗ್ರೀನ್ ಸಿಗ್ನಲ್!

ಜೂನ್ 30, 2026ರ ವೇಳೆಗೆ ನಾಲ್ಕು ಜಲಾಶಯಗಳಲ್ಲಿ ಒಟ್ಟು 15.761 ಟಿಎಂಸಿ ಜೀವಂತ ನೀರಿನ ಸಂಗ್ರಹವಿದ್ದು, ಮುಂದಿನ ಮೂರು ತಿಂಗಳ ರಾಜ್ಯದ ಕುಡಿಯುವ ನೀರಿನ ಅಗತ್ಯಕ್ಕೆ ಇದು ಸಾಕಾಗುವುದಿಲ್ಲ.

ಜೂನ್ 30ರಂದು ನಡೆದ ಸಿಡಬ್ಲ್ಯುಆರ್‌ಸಿ ಸಭೆಯವರೆಗೆ ನಾಲ್ಕು ಜಲಾಶಯಗಳಿಗೆ ಒಟ್ಟು 4.05 ಟಿಎಂಸಿ ನೀರು ಹರಿದು ಬಂದಿದ್ದು, ಬಿಳಿಗುಂಡ್ಲುವಿನಲ್ಲಿ 2.915 ಟಿಎಂಸಿ ಹರಿವು ದಾಖಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಜೂನ್ 16 ಮತ್ತು 30ರಂದು ನಡೆದ ಸಿಡಬ್ಲ್ಯುಆರ್‌ಸಿ ಸಭೆ ಹಾಗೂ ಜೂನ್ 23ರಂದು ನಡೆದ ಸಿಡಬ್ಲ್ಯುಎಂಎ ಸಭೆಗಳಲ್ಲಿ, ಬೆಂಗಳೂರು ಮಹಾನಗರ ಪ್ರದೇಶ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಜಲಾಶಯಗಳಲ್ಲಿರುವ ನೀರನ್ನು ಸಂರಕ್ಷಿಸಬೇಕು ಎಂಬ ಕರ್ನಾಟಕದ ವಾದವನ್ನು ಮಂಡಿಸಲಾಗಿತ್ತು.

ಈ ವಾದವನ್ನು ಪರಿಗಣಿಸಿದ ಸಿಡಬ್ಲ್ಯುಎಂಎ ಮತ್ತು ಸಿಡಬ್ಲ್ಯುಆರ್‌ಸಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಸದ್ಯ ನೀರಿನ ಕೊರತೆ ಇರುವುದರಿಂದ ಎಲ್ಲ ಪಾಲುದಾರ ರಾಜ್ಯಗಳು ತಮ್ಮ ಜಲಾಶಯಗಳಲ್ಲಿರುವ ನೀರನ್ನು ಸಾಧ್ಯವಾದಷ್ಟು ಮಿತವಾಗಿ ಬಳಸಬೇಕು ಹಾಗೂ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ತೀರ್ಮಾನಿಸಿವೆ.

ಅಲ್ಲದೆ, ಎಲ್-ನಿನೋ ಪರಿಣಾಮದಿಂದ ಮುಂಗಾರು ತಡವಾಗಿದ್ದು, ಮಳೆ ಕೊರತೆ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮೇ ತಿಂಗಳ ಮಧ್ಯಭಾಗದಿಂದಲೇ ಎಚ್ಚರಿಕೆ ನೀಡಿತ್ತು. ಮುಂದಿನ ದಿನಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡು ಕರ್ನಾಟಕ ಹಾಗೂ ತಮಿಳುನಾಡಿನ ಜಲಾಶಯಗಳಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ಹರಿದು ಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com