ಮಕ್ಕಳಿಗೆ ಹೊರೆಯಾಗಬಾರದೆಂದು ವೃದ್ಧ ದಂಪತಿ ಆತ್ಮಹತ್ಯೆ: ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ

ಈಶ್ವರಾಚಾರ್ ಅವರು ಹಿಂದೆ ಚಿನ್ನದ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಉದ್ಯೋಗವಿಲ್ಲದೆ ಇದ್ದರು. ವಿಷ ಬೆರೆಸಿದ ಜ್ಯೂಸ್ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಬುಧವಾರ ರಾತ್ರಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
Eshwarachar (L) and his wife Gowri
ಈಶ್ವರಾಚಾರ್ (ಎಡ) ಮತ್ತು ಅವರ ಪತ್ನಿ ಗೌರಿ
Updated on

ಬೆಂಗಳೂರು: ವಯೋಸಹಜ ಅನಾರೋಗ್ಯವಿದ್ದು ತಮ್ಮ ಪುತ್ರಿಯರಿಗೆ ತಾವು ಹೊರೆಯಾಗುತ್ತಿದ್ದೇವೆ ಎಂಬ ಆತಂಕದಿಂದ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥನಗರದ ಬಾಡಿಗೆ ಮನೆಯಲ್ಲಿ ನಡೆದಿದೆ.

ಮೃತರನ್ನು ಈಶ್ವರಾಚಾರ್ (73ವ) ಹಾಗೂ ಅವರ ಪತ್ನಿ ಗೌರಿ (66ವ) ಎಂದು ಗುರುತಿಸಲಾಗಿದೆ. ನಿನ್ನೆ ಗುರುವಾರ ಬೆಳಗ್ಗೆ ಮಕ್ಕಳು ಪೋಷಕರಿಗೆ ಹಲವು ಬಾರಿ ಕರೆ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಆತಂಕದಿಂದ ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈಶ್ವರಾಚಾರ್ ಅವರು ಹಿಂದೆ ಚಿನ್ನದ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಉದ್ಯೋಗವಿಲ್ಲದೆ ಇದ್ದರು. ವಿಷ ಬೆರೆಸಿದ ಜ್ಯೂಸ್ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಬುಧವಾರ ರಾತ್ರಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ದಂಪತಿಗೆ ಇಬ್ಬರು ಪುತ್ರಿಯರಿದ್ದು, ಇಬ್ಬರೂ ವಿವಾಹಿತರಾಗಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಪುತ್ರಿಯರೇ ತಮ್ಮ ವಯೋವೃದ್ಧ ಪೋಷಕರ ಆರೈಕೆ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಗೌರಿ ಅವರ ಸೊಂಟದ ಮೂಳೆ ಜಾರಿದ್ದರಿಂದ ಅವರು ಹಾಸಿಗೆ ಹಿಡಿದಿದ್ದರು. ಅಲ್ಲದೆ, ದಂಪತಿ ಇಬ್ಬರೂ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಆಸ್ತಮಾ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ತಮ್ಮ ಪುತ್ರಿಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವುದು ದಂಪತಿಗೆ ಮಾನಸಿಕವಾಗಿ ಬೇಸರ ಉಂಟುಮಾಡಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಪೋಷಕರ ಆರೈಕೆ ಮಾಡುವುದಕ್ಕೆ ಮಕ್ಕಳಿಗೆ ಯಾವುದೇ ಸಮಸ್ಯೆಯಿರಲಿಲ್ಲ ಎಂದು ವಿಚಾರಿಸಿದಾಗ ಗೊತ್ತಾಯಿತು.

ದಂಪತಿಯ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಅನಾರೋಗ್ಯ ಒಂದು ಕಾರಣವಾಗಿರಬಹುದು ಎಂಬ ಶಂಕೆ ಇದ್ದರೂ, ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಆದ್ದರಿಂದ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ. ಬಸವೇಶ್ವರನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ನಿಮಗೆ ಅಥವಾ ನಿಮ್ಮ ಪರಿಚಯದ ಯಾರಿಗಾದರೂ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ ಅಥವಾ ತೀವ್ರ ಮಾನಸಿಕ ಸಂಕಷ್ಟದಲ್ಲಿದ್ದರೆ, ವಿಶ್ವಾಸಾರ್ಹ ವ್ಯಕ್ತಿ, ಕುಟುಂಬದವರು ಅಥವಾ ಮಾನಸಿಕ ಆರೋಗ್ಯ ತಜ್ಞರೊಂದಿಗೆ ತಕ್ಷಣ ಮಾತನಾಡುವುದು ಮುಖ್ಯ. ಭಾರತದಲ್ಲಿ 24x7 ಲಭ್ಯವಿರುವ ಟೆಲಿ-ಮಾನಸ್ ಸಹಾಯವಾಣಿ 14416 ಅಥವಾ 1-800-89-14416 ಗೆ ಕರೆ ಮಾಡಿ ಉಚಿತ ನೆರವು ಪಡೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com