

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜಾರಿಗೊಂಡಿರುವ ವಿಬಿ-ಜಿ-ರಾಮ್ ಜಿ (VB-G RAM G) ಯೋಜನೆ ಅನುಷ್ಠಾನಕ್ಕೆ ಯಾವುದೇ ಹಣದ ಕೊರತೆಯಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 1ರಿಂದ ಯೋಜನೆ ಜಾರಿಯಲ್ಲಿದ್ದು, ಮೊದಲ ತ್ರೈಮಾಸಿಕಕ್ಕೆ ಒಟ್ಟು 2,900 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಪೈಕಿ ಕೇಂದ್ರ ಸರ್ಕಾರವು 60:40 ಅನುದಾನ ಅನುಪಾತದಡಿ ರೂ.1,700 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರ ರೂ.1,200 ಕೋಟಿ ನೀಡಿದೆ. ಈ ಅನುದಾನದಿಂದ ಪ್ರತಿ ತಿಂಗಳು 5 ಲಕ್ಷ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಿ, 1.5 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಯೋಜನೆಯಡಿ ಕೃಷಿ ಬಾವಿ ನಿರ್ಮಾಣ, ಹನಿ ನೀರಾವರಿ, ಕೆರೆ ಕಾಲುವೆಗಳ ಅಭಿವೃದ್ಧಿ, ಚೆಕ್‌ಡ್ಯಾಂ ನಿರ್ಮಾಣ ಸೇರಿದಂತೆ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಕೆಲಸ ಕೇಳುವ ಪ್ರತಿಯೊಬ್ಬರಿಗೂ ಉದ್ಯೋಗ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ) ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿಗೆ ರೂ.341 ಕೋಟಿ ಲಭ್ಯ
ರಾಜ್ಯದಲ್ಲಿ ಕುಡಿಯುವ ನೀರಿನ ಪೂರೈಕೆಗೆ ರೂ.341 ಕೋಟಿ ಲಭ್ಯವಿದ್ದು, ಅದರಲ್ಲಿ ರೂ.117 ಕೋಟಿ ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇದರ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ.1 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದು, ಗ್ರಾಮೀಣ ಪ್ರದೇಶಗಳ ನೀರು ಪೂರೈಕೆಗೆ ಹಣದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಪರ್ಯಾಯ ನೀರಿನ ಮೂಲ ಗುರುತಿಸಲು ಸೂಚನೆ
ಸಾಂಪ್ರದಾಯಿಕ ನೀರಿನ ಮೂಲಗಳು ಬತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ಪರ್ಯಾಯ ನೀರಿನ ಮೂಲಗಳನ್ನು ಗುರುತಿಸುವುದು, ಖಾಸಗಿ ಕೊಳವೆಬಾವಿ ಅಥವಾ ತೆರೆದ ಬಾವಿಗಳನ್ನು ಬಾಡಿಗೆಗೆ ಪಡೆಯುವುದು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸುವ ಮೊದಲು ನೀರಿನ ಗುಣಮಟ್ಟ ಪರೀಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಜನರ ಸಂಕಷ್ಟವನ್ನು ಅಧಿಕಾರಿಗಳು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಅಗತ್ಯವಿದ್ದಾಗ ಮಾತ್ರ ಹೊಸ ಕೊಳವೆಬಾವಿಗಳನ್ನು ಕೊರೆಸಬೇಕು ಎಂದು ನಿರ್ದೇಶನ ನೀಡಿದರು.