

ಬೆಂಗಳೂರು: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತೆರಳುತ್ತಿದ್ದ ವೇಳೆ ಝೀರೋ ಟ್ರಾಫಿಕ್ ಅಳವಡಿಕೆ ವಿರೋಧಿಸಿ ರಸ್ತೆ ಮಧ್ಯೆ ಗರ್ಭಿಣಿ ಮಹಿಳೆಯ ಪತಿ ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿನ್ನೆ ರಾಜ್ಯಪಾಲರ ಸಂಚಾರದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ವ್ಯಾಪಕ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಮೊದಲೇ ಕಿರಿದಾಗಿದ್ದ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿತ್ತು.
ಈ ಸಂಚಾರ ದಟ್ಟಣೆಯ ನಡುವೆ ತನ್ನ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದು, ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ತಲುಪಿಸಲಾಗದೆ ಆ ವ್ಯಕ್ತಿ ನಡುರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಕಾರಲ್ಲಿ ಗರ್ಭಿಣಿ ಇದ್ದಾಳೆ, ಸರ್ಕಾರಕ್ಕೆ ನಾವೇನೂ ಅಲ್ವ
ಈ ಪರಿಸ್ಥಿತಿಯಿಂದ ತೀವ್ರ ಆತಂಕಗೊಂಡ ಮಹಿಳೆಯ ಪತಿ, ಅಧಿಕಾರಿಗಳ ಕ್ರಮದ ವಿರುದ್ಧ ರಸ್ತೆಯಲ್ಲೇ ಕುಳಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಪತ್ನಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ವಿಐಪಿ ಸಂಚಾರಕ್ಕಾಗಿ ಸಾಮಾನ್ಯ ನಾಗರಿಕರ ತುರ್ತು ಅಗತ್ಯಗಳನ್ನು ಕಡೆಗಣಿಸುವುದು ಸರಿಯಲ್ಲ. ಕಾರಲ್ಲಿ ಗರ್ಭಿಣಿ ಇದ್ದಾಳೆ.
ಸರ್ಕಾರಕ್ಕೆ ನಾವೇನೂ ಅಲ್ವಾ.. ? ನಮ್ಮ ಪ್ರಾಣಕ್ಕಿಂತ ಝೀರೋ ಟ್ರಾಫಿಕ್ ಮುಖ್ಯಾನಾ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ವೇಳೆ ಅವರು ರಸ್ತೆ ಮಧ್ಯದಲ್ಲೇ ನಿಂತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಸ್ಥಳದಲ್ಲಿದ್ದ ಕೆಲವರು ಅವರ ಆಕ್ರೋಶಕ್ಕೆ ಬೆಂಬಲ ಸೂಚಿಸಿದರು. ಘಟನೆಯ ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಐಪಿ ಸಂಚಾರದ ಸಂದರ್ಭದಲ್ಲಿ ಸಾಮಾನ್ಯ ಜನರು ಎದುರಿಸುವ ತೊಂದರೆಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.
ವ್ಯಾಪಕ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣ ಬಳಕೆದಾರರು ಈ ಘಟನೆಯ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಕ್ತಿಯ ನೋವನ್ನು ಅರ್ಥಮಾಡಿಕೊಂಡು ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಭದ್ರತಾ ಕಾರಣಗಳಿಂದ ಇಂತಹ ಸಂಚಾರ ನಿಯಂತ್ರಣ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೊತೆಗೆ ಅಂಡರ್‌ಪಾಸ್ ನಿರ್ಮಾಣ ಹಂತದಲ್ಲಿರುವ ಇಂತಹ ಸೂಕ್ಷ್ಮ ರಸ್ತೆಗಳಲ್ಲಿ ಗಣ್ಯರ ಸಂಚಾರಕ್ಕೆ ಗಂಟೆಗಟ್ಟಲೆ ಸಾರ್ವಜನಿಕರನ್ನು ತಡೆಯುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಬೆಂಗಳೂರು ಟ್ರಾಫಿಕ್ ಪೊಲೀಸ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
Advertisement