ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ; ಸರ್ಕಾರದ ಪ್ರಸ್ತಾವನೆಗೆ ಮಿಶ್ರ ಪ್ರತಿಕ್ರಿಯೆ, ವೆಚ್ಚ-ಭದ್ರತೆ ಕುರಿತು ಭಾರೀ ಚರ್ಚೆ..!

ಇದೂವರೆಗೆ ಚಳಿಗಾಲದ ಅಧಿವೇಶನ ಮಾತ್ರ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಬಜೆಟ್ ಹಾಗೂ ಮುಂಗಾರು ಅಧಿವೇಶನಗಳನ್ನು ಬೆಂಗಳೂರಿನ ವಿಧಾನಸೌಧದಲ್ಲೇ ನಡೆಸಲಾಗುತ್ತಿತ್ತು. ಇದೀಗ ಮೊದಲ ಬಾರಿಗೆ ಮುಂಗಾರು ಅಧಿವೇಶನವನ್ನೂ ಬೆಳಗಾವಿಯಲ್ಲಿ ನಡೆಸುವ ಕುರಿತು ಸರ್ಕಾರ ಚಿಂತನೆ ನಡೆಯುತ್ತಿದೆ.
suvarna soudha
ಬೆಳಗಾವಿ ಸುವರ್ಣ ಸೌಧ
Updated on

ಬೆಳಗಾವಿ: ಜುಲೈ ಎರಡನೇ ವಾರದಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಮುಂಗಾರು ಅಧಿವೇಶನ ನಡೆಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಸರ್ಕಾರದ ಪ್ರಸ್ತಾವನೆ ಚರ್ಚೆಗೆ ಗ್ರಾಸವಾಗಿದೆ.

ಇದೂವರೆಗೆ ಚಳಿಗಾಲದ ಅಧಿವೇಶನ ಮಾತ್ರ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಬಜೆಟ್ ಹಾಗೂ ಮುಂಗಾರು ಅಧಿವೇಶನಗಳನ್ನು ಬೆಂಗಳೂರಿನ ವಿಧಾನಸೌಧದಲ್ಲೇ ನಡೆಸಲಾಗುತ್ತಿತ್ತು. ಇದೀಗ ಮೊದಲ ಬಾರಿಗೆ ಮುಂಗಾರು ಅಧಿವೇಶನವನ್ನೂ ಬೆಳಗಾವಿಯಲ್ಲಿ ನಡೆಸುವ ಕುರಿತು ಸರ್ಕಾರ ಚಿಂತನೆ ನಡೆಯುತ್ತಿದೆ.

ಮೂಲಗಳ ಪ್ರಕಾರ, ಜುಲೈ 13ರಿಂದ ಸುಮಾರು 10 ದಿನಗಳ ಕಾಲ ಅಧಿವೇಶನ ನಡೆಸುವ ಪ್ರಸ್ತಾವನೆ ಸರ್ಕಾರದ ಮುಂದಿಟ್ಟಿದೆ ಎನ್ನಲಾಗುತ್ತಿದೆ.

ಸರ್ಕಾರದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಈಗಾಗಲೇ ಪ್ರಾಥಮಿಕ ಮಟ್ಟದಲ್ಲಿ ಸಭೆ ನಡೆಸಿ ಅಗತ್ಯ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದೆ. ಆದರೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮುಂಗಾರು ಅಧಿವೇಶನದ ಸಿದ್ಧತೆ ಕುರಿತು ಅಧಿಕೃತ ನಿರ್ದೇಶನಗಳು ಇನ್ನೂ ಬಂದಿಲ್ಲ ಎಂದು ತಿಳಿಸಿದ್ದಾರೆ.

ಈ ಪ್ರಸ್ತಾವನೆ ಚರ್ಚೆಗೆ ಕಾರಣವಾಗಿರುವ ಪ್ರಮುಖ ಅಂಶವೆಂದರೆ ವೆಚ್ಚದ ಹೊರೆ. ಹಿಂದಿನ ಅಧಿವೇಶನಗಳಿಗೆ ಸಂಬಂಧಿಸಿದಂತೆ ಸರ್ಕಾರ ಇನ್ನೂ 45 ಲಕ್ಷ ರೂಪಾಯಿಗೂ ಅಧಿಕ ಹೋಟೆಲ್ ಬಿಲ್‌ಗಳನ್ನು ಪಾವತಿಸಬೇಕಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಸಂಚಾರ ನಿರ್ವಹಣೆ, ಭದ್ರತೆ ಮತ್ತು ಪ್ರತಿಭಟನೆಗಳನ್ನು ನಿಯಂತ್ರಿಸಲು ನಿರ್ಮಿಸಿದ್ದ ತಾತ್ಕಾಲಿಕ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಕೆಲವು ಪಾವತಿಗಳೂ ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.

ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಲಭ್ಯವಾದ ಮಾಹಿತಿಯ ಪ್ರಕಾರ, ಇತ್ತೀಚಿನ ಅಧಿವೇಶನಗಳ ಪ್ರತಿ ಅವಧಿಗೆ ಸರ್ಕಾರವು 14 ಕೋಟಿ ರೂಪಾಯಿಯಿಂದ 28 ಕೋಟಿ ರೂಪಾಯಿವರೆಗೆ ವೆಚ್ಚ ಮಾಡಿದೆ. ಶಾಸಕರು, ಅಧಿಕಾರಿಗಳ ವಸತಿ, ಭದ್ರತೆ, ಸಾರಿಗೆ ಹಾಗೂ ತಾತ್ಕಾಲಿಕ ಆಡಳಿತಾತ್ಮಕ ವ್ಯವಸ್ಥೆಗಳಿಗಾಗಿ ಈ ಹಣ ವ್ಯಯವಾಗಿತ್ತು.

suvarna soudha
ಜನವರಿ 24 ರಂದು ಹಾಸನದಲ್ಲಿ 'ಜೆಡಿಎಸ್' ಬೃಹತ್ ಸಮಾವೇಶ: ಸುಮಾರು 2 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ!

2012ರಲ್ಲಿ ಸುವರ್ಣಸೌಧ ಉದ್ಘಾಟನೆಯಾದ ನಂತರ ಬೆಳಗಾವಿಯಲ್ಲಿ ನಡೆದ ಅಧಿವೇಶನಗಳಿಗೆ ಸರ್ಕಾರ ಇದೂವರೆಗೆ 170 ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಿರುವುದಾಗಿ ಅಂದಾಜಿಸಲಾಗಿದೆ.

ಚಳಿಗಾಲದ ಅಧಿವೇಶನಗಳ ವೇಳೆ 6,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿತ್ತು. ನಗರದ ವಿವಿಧ ಭಾಗಗಳಲ್ಲಿ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು, ಬ್ಯಾರಿಕೇಡ್‌ಗಳನ್ನು ನಿರ್ಮಿಸುವುದು ಸೇರಿದಂತೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು.

ಮತ್ತೊಂದು ಪ್ರಮುಖ ಸವಾಲು ಎಂದರೆ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಗಳು ಹಾಗೂ ವಿವಿಧ ಹೋರಾಟಗಾರರಿಂದ ನಡೆಯುವ ಪ್ರತಿಭಟನೆಗಳು. ಅಧಿವೇಶನದ ಅವಧಿಯಲ್ಲಿ ಇಂತಹ ಪ್ರತಿಭಟನೆಗಳನ್ನು ನಿರ್ವಹಿಸುವುದು ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ.

ಆದಾಗ್ಯೂ, ಅಧಿವೇಶನದ ವೇಳೆ ಹೋಟೆಲ್‌ಗಳು, ಸಾರಿಗೆ, ರೆಸ್ಟೋರೆಂಟ್‌ಗಳು ಸೇರಿದಂತೆ ಸ್ಥಳೀಯ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ದೊರೆಯುತ್ತದೆ.

ಆದರೆ, ಕೆಲವರು ಅಲ್ಪಾವಧಿಯ ಆರ್ಥಿಕ ಲಾಭಕ್ಕಾಗಿ ಸರ್ಕಾರ ಇಷ್ಟು ದೊಡ್ಡ ಪ್ರಮಾಣದ ವೆಚ್ಚ ಹಾಗೂ ಆಡಳಿತಾತ್ಮಕ ಯಂತ್ರವನ್ನು ಬಳಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಗಳೂ ಮೂಡತೊಡಗಿವೆ.

ಒಟ್ಟಾರೆ, ಬೆಳಗಾವಿಯಲ್ಲಿ ಮಳೆಗಾಲ ಅಧಿವೇಶನ ನಡೆಸುವ ಸರ್ಕಾರದ ಪ್ರಸ್ತಾವನೆ ಪ್ರಾದೇಶಿಕ ಸಮತೋಲನದ ದೃಷ್ಟಿಯಿಂದ ಮಹತ್ವದ್ದಾಗಿದ್ದರೂ, ಅದರ ವೆಚ್ಚ ಮತ್ತು ಆಡಳಿತಾತ್ಮಕ ಸವಾಲುಗಳು ಈಗ ಚರ್ಚೆಯ ಕೇಂದ್ರಬಿಂದುವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com