ಕಾಂಗ್ರೆಸ್ ಪವರ್ ಶಿಫ್ಟ್ ಎಫೆಕ್ಟ್: ವಿಧಾನಮಂಡಲದಲ್ಲೂ ಮಹತ್ವದ ಬದಲಾವಣೆ, ಸ್ಪೀಕರ್ ಹುದ್ದೆಗೂ ಕತ್ತರಿ ಸಾಧ್ಯತೆ..!

2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಖಾದರ್ ಅವರಿಗೆ ಕೊನೆ ಕ್ಷಣದಲ್ಲಿ ಸ್ಪೀಕರ್ ಹುದ್ದೆ ನೀಡಲಾಗಿತ್ತು. ಆಗಲೇ ಭವಿಷ್ಯದಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗುತ್ತಿದೆ.
Speaker Khader
ಸ್ಪೀಕರ್ ಯುಟಿ ಖಾದರ್
Updated on

ಬೆಂಗಳೂರು: ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಆಗಿ ಡಿಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಬೆನ್ನಲ್ಲೇ ಸಚಿವ ಸಂಪುಟ ರಚನೆ ಮಾತ್ರವಲ್ಲ, ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ ಹುದ್ದೆಗಳಲ್ಲೂ ಬದಲಾವಣೆಯಾಗುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ.

ಕಾಂಗ್ರೆಸ್ ಸರ್ಕಾರದ ಅಧಿಕಾರದ ಸಮೀಕರಣ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ಪ್ರಮುಖ ಸಂವಿಧಾನಿಕ ಹುದ್ದೆಗಳ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಾಗತೊಡಗಿದೆ.

ವಿಧಾನಸಭೆ ಸ್ಪೀಕರ್ ಆಗಿರುವ ಯು.ಟಿ.ಖಾದರ್ ಅವರ ಹೆಸರು ಡಿ.ಕೆ. ಶಿವಕುಮಾರ್ ಸಚಿವ ಸಂಪುಟಕ್ಕೆ ಸೇರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.

2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಖಾದರ್ ಅವರಿಗೆ ಕೊನೆ ಕ್ಷಣದಲ್ಲಿ ಸ್ಪೀಕರ್ ಹುದ್ದೆ ನೀಡಲಾಗಿತ್ತು. ಆಗಲೇ ಭವಿಷ್ಯದಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗುತ್ತಿದೆ.

ಆದರೆ, ಕಳೆದ ಮೂರು ವರ್ಷಗಳಲ್ಲಿ ಸಚಿವ ಸಂಪುಟ ಪುನಾರಚನೆ ನಡೆದಿರಲಿಲ್ಲ. ಇದೀಗ ಸಿದ್ದರಾಮಯ್ಯ ರಾಜೀನಾಮೆ ನೀಡಿ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿರುವ ಕಾರಣ ಸಂಪೂರ್ಣ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಖಾದರ್ ಮತ್ತೆ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಖಾದರ್ ಕಳೆದ ಬಜೆಟ್ ಅಧಿವೇಶನದ ಸಂದರ್ಭದಿಂದಲೇ ಸಚಿವ ಸಂಪುಟ ಸೇರುವ ತಯಾರಿ ನಡೆಸುತ್ತಿದ್ದು, ಶಾಸಕರೊಂದಿಗೆ ವಿಶೇಷ ಫೋಟೋ ಸೆಷನ್ ನಡೆಸಿದ್ದನ್ನೂ ಹಲವು ನಾಯಕರು ಉಲ್ಲೇಖಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

Speaker Khader
ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ: ದೆಹಲಿಯಲ್ಲಿ ಶಕ್ತಿ ಪ್ರದರ್ಶನ, ವರಿಷ್ಠರ ಭೇಟಿಗೆ ಹಾತೊರೆಯುತ್ತಿರುವ ನಾಯಕರು..!

ಖಾದರ್ ಸಚಿವ ಸಂಪುಟ ಸೇರಿದರೆ ವಿಧಾನಸಭೆಗೆ ಹೊಸ ಸ್ಪೀಕರ್ ಆಯ್ಕೆ ಅನಿವಾರ್ಯವಾಗಲಿದೆ. ಈ ಹುದ್ದೆಗೆ ಹಿರಿಯ ಕಾಂಗ್ರೆಸ್ ನಾಯಕರಾದ ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ ಹಾಗೂ ಎಚ್.ಕೆ.ಪಾಟೀಲ್ ಅವರ ಹೆಸರುಗಳು ಕೇಳಿಬಂದಿದ್ದರೂ, ಈವರೆಗೆ ಯಾರೂ ಸ್ಪಷ್ಟ ಆಸಕ್ತಿ ತೋರಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ ವಿಧಾನ ಪರಿಷತ್‌ನಲ್ಲೂ ಮಹತ್ವದ ಬದಲಾವಣೆಯ ಸಾಧ್ಯತೆ ಇದೆ. ಪ್ರಸ್ತುತ ಪರಿಷತ್ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಅವರ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರೊಬ್ಬರನ್ನು ನೇಮಿಸುವ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ.

ಜೂನ್ 18ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ಬಳಿಕ 75 ಸದಸ್ಯರ ಸದನದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಇರುವುದರಿಂದ ಸಭಾಪತಿ ಹುದ್ದೆಯ ಮೇಲೂ ಪಕ್ಷ ಹಕ್ಕು ಮಂಡಿಸುವ ನಿರೀಕ್ಷೆಯಿದೆ.

ಹಿರಿಯ ಕಾಂಗ್ರೆಸ್ ಎಂಎಲ್‌ಸಿ ಒಬ್ಬರು ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟಕ್ಕೆ ಸೇರುವವರ ಪಟ್ಟಿಯನ್ನು ಅಂತಿಮಗೊಳಿಸುವ ಕೆಲಸಕ್ಕೆ ಪಕ್ಷದ ವರಿಷ್ಠರು ಆದ್ಯತೆ ನೀಡುತ್ತಿದ್ದು, ಸಚಿವ ಸಂಪುಟ ರಚನೆ ಪೂರ್ಣಗೊಂಡ ಬಳಿಕ ಪರಿಷತ್ ಸಭಾಪತಿ ಹುದ್ದೆ ಕುರಿತು ಚರ್ಚೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಜೂನ್ 18ರ ಚುನಾವಣೆಯ ನಂತರ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಿ ಸಭಾಪತಿ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಕಾಂಗ್ರೆಸ್ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ಹೀಗಾಗಿ, ಮುಖ್ಯಮಂತ್ರಿ ಬದಲಾವಣೆಯ ಜೊತೆಗೆ ರಾಜ್ಯ ವಿಧಾನಮಂಡಲದ ಎರಡು ಪ್ರಮುಖ ಹುದ್ದೆಗಳಲ್ಲೂ ಬದಲಾವಣೆ ಆಗುವ ಕುರಿತು ಕುತೂಹಲಗಳು ಹೆಚ್ಚಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com