'ವೈದ್ಯರ ನಿರ್ಲಕ್ಷ್ಯದಿಂದ ಸಾವು ಎಂಬುದು ಸತ್ಯಕ್ಕೆ ದೂರವಾದ ಮಾತು, ಚಿಕಿತ್ಸೆಯಲ್ಲಿ ಅಸಡ್ಡೆ ಮಾಡಿಲ್ಲ: ಮೈಸೂರು ಜಯದೇವ ಆಸ್ಪತ್ರೆ; Video

ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟು 11 ರೋಗಿಗಳು ಕೇವಲ 24 ಗಂಟೆಗಳ ಅವಧಿಯಲ್ಲಿ ಮೃತಪಟ್ಟಿರುವುದು ತೀವ್ರ ಆತಂಕವನ್ನು ಹೆಚ್ಚಿಸಿದೆ.
Jayadeva hospital Medical Superintendent Dr Sadananda
ಮೈಸೂರು ಜಯದೇವ ಆಸ್ಪತ್ರೆ ಅಧೀಕ್ಷಕ ಡಾ ಸದಾನಂದ
Updated on

ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಂಭವಿಸಿದ ಸರಣಿ ಸಾವುಗಳು ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ಭೀತಿಯನ್ನು ಉಂಟುಮಾಡಿದ್ದು, ತುರ್ತು ಸಂದರ್ಭಗಳಲ್ಲಿ ಸಮರ್ಪಕ ವೈದ್ಯಕೀಯ ಪ್ರತಿಕ್ರಿಯೆ ಹಾಗೂ ಮಾಹಿತಿ ನೀಡಲಾಗಿಲ್ಲ ಎಂದು ಕುಟುಂಬಗಳು ಆರೋಪಿಸಿವೆ.

ಹೃದಯ ಸಂಬಂಧಿತ ಕಾಯಿಲೆಗಳ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟು 11 ರೋಗಿಗಳು ಕೇವಲ 24 ಗಂಟೆಗಳ ಅವಧಿಯಲ್ಲಿ ಮೃತಪಟ್ಟಿರುವುದು ತೀವ್ರ ಆತಂಕವನ್ನು ಹೆಚ್ಚಿಸಿದೆ.

ಲಭ್ಯ ಮಾಹಿತಿಯ ಪ್ರಕಾರ, ಮೃತಪಟ್ಟ ಎಲ್ಲರೂ ತೀವ್ರ ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಾವುಗಳು ಕಳೆದ 24 ಗಂಟೆಗಳ ವಿವಿಧ ಅವಧಿಗಳಲ್ಲಿ ಸಂಭವಿಸಿವೆ. ಸೋಮವಾರ ಬೆಳಗ್ಗೆ ನಾಲ್ಕು ರೋಗಿಗಳು ಮೃತಪಟ್ಟಿದ್ದು, ನಂತರ ರಾತ್ರಿ ಇನ್ನೂ ಆರು ಮಂದಿ ಮೃತಪಟ್ಟು. ನಿನ್ನೆ ಮಂಗಳವಾರ ಹೊತ್ತಿಗೆ ಇನ್ನೂ ಎರಡು ಸಾವುಗಳು ದಾಖಲಾಗಿದ್ದು, ಒಟ್ಟು ಸಾವಿನ ಸಂಖ್ಯೆ ಒಂದೇ ದಿನದಲ್ಲಿ 11ಕ್ಕೆ ಏರಿಕೆಯಾಗಿದೆ.

ರೋಗಿಗಳ ಸಂಬಂಧಿಕರ ತೀವ್ರ ಆಕ್ರೋಶ ನಂತರ ಇಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ವೈದ್ಯಕೀಯ ಅಧೀಕ್ಷಕ ಡಾ. ಸದಾನಂದ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ನಾವೆಲ್ಲಾ ವೈದ್ಯರು ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದೇವೆ. ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಶಕ್ತಿ ಮೀರಿ ರೋಗಿಗಳ ಉಪಚಾರ ಮಾಡುತ್ತಿದ್ದೇವೆ. ಜೂನ್ ತಿಂಗಳಲ್ಲಿ ಕೆಲವು ದಿನ ಶೂನ್ಯ ಸಾವು, ಇನ್ನು ಕೆಲವು ದಿನ 2, 4 ಸಾವುಗಳು ಸಂಭವಿಸಿವೆ. ನಿನ್ನೆ ಒಂದು ದಿನ ಮಾತ್ರ 11 ಮಂದಿ ರೋಗಿಗಳು ನಿಧನರಾಗಿದ್ದಾರೆ ಎಂದು ಹೇಳಿದರು.

ದುರದೃಷ್ಟಕ್ಕೆ ನಿನ್ನೆ ಮಾತ್ರ ಇಷ್ಟೊಂದು ಸಾವು ಸಂಭವಿಸಿದೆ, ವೈದ್ಯರು ಡ್ಯೂಟಿಯಲ್ಲಿದ್ದರು. ಹಿರಿಯ ವೈದ್ಯರು ಕೂಡ ಉಪಚಾರಕ್ಕೆ ಇದ್ದರು. ನಿನ್ನೆ ರಾತ್ರಿ ವೈದ್ಯರು ಡ್ಯೂಟಿಯಲ್ಲಿದ್ದು ರೋಗಿಗಳ ಮನೆಯವರ ಜೊತೆ ಮಾತನಾಡಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದ ಸಾವುಗಳಾಗಿವೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ನಿಜ, ಆದರೆ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರೋಗಿಗಳಿರುವ ಪಕ್ಕದ ರೂಮಿನಲ್ಲಿ ವೈದ್ಯರಿಗೆ ವಿಶ್ರಾಂತಿಗೆ ಕೊಠಡಿ ನೀಡಿರುತ್ತೇವೆ, ಅಲ್ಲಿ ಕೆಲ ಹೊತ್ತು ಯಾರೂ ಇಲ್ಲದಾಗ ಫೋಟೋ ತೆಗೆದು, ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಆದರೆ ನಮ್ಮ ವೈದ್ಯರು 24 ಗಂಟೆ ಕೂಡ ಅಲರ್ಟ್ ಆಗಿರುತ್ತಾರೆ ಎಂದರು.

ಆಸ್ಪತ್ರೆಯ ಸ್ಥಿತಿಗತಿಯ ಬಗ್ಗೆ ವಿವರಿಸಿದ ಡಾ. ಸದಾನಂದ, ನಮ್ಮ ಆಸ್ಪತ್ರೆಗೆ ಕೇವಲ ಮೈಸೂರಷ್ಟೇ ಅಲ್ಲದೆ ಸುತ್ತಮುತ್ತಲಿನ ಐದು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಸಾಮಾನ್ಯ ಹೃದ್ರೋಗ ಪ್ರಕರಣಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತದೆ. ಆದರೆ, ಪರಿಸ್ಥಿತಿ ಅತ್ಯಂತ ಗಂಭೀರವಾದಾಗ ಮಾತ್ರ ರೋಗಿಗಳನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗುತ್ತದೆ. ನಿನ್ನೆ ಮೃತಪಟ್ಟ 11 ರೋಗಿಗಳು ಕೂಡ ಆಸ್ಪತ್ರೆಗೆ ದಾಖಲಾಗುವ ವೇಳೆಯಲ್ಲೇ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದರು ಎಂದು ತಿಳಿಸಿದ್ದಾರೆ.

Jayadeva hospital Medical Superintendent Dr Sadananda
ಆಯುಷ್ಮಾನ್ ಭಾರತ್ ಫಲಾನುಭವಿಗಳಿಂದ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ: ಸಚಿವ ಯು.ಟಿ ಖಾದರ್ ಎಚ್ಚರಿಕೆ; Video

24 ಗಂಟೆಯೂ ಕೆಲಸ ಮಾಡಿದ ವೈದ್ಯರು; ವಿಶ್ರಾಂತಿ ವೇಳೆ ವಿಡಿಯೋ ಮಾಡಿ ಅಪಪ್ರಚಾರ

ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಅಧೀಕ್ಷಕರು, ನಿನ್ನೆ ಇಡೀ 24 ಗಂಟೆಯೂ ವೈದ್ಯರು ನಿರಂತರವಾಗಿ ಕೆಲಸ ಮಾಡಿದ್ದಾರೆ. ಇಬ್ಬರು ಡಿಎಎಂ (DM) ವೈದ್ಯರು ಕರ್ತವ್ಯದಲ್ಲಿದ್ದು, ರೋಗಿಗಳ ಸಂಬಂಧಿಕರ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದರು. ವೈದ್ಯರು ಸತತ ಕೆಲಸದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದಾಗ ಸಂಬಂಧಿಕರು ಅದನ್ನು ಚಿತ್ರೀಕರಿಸಿ ವಿಡಿಯೋ ಹರಿಬಿಟ್ಟಿದ್ದಾರೆ. ಸತ್ಯ ತಿಳಿಯಲು ಬೇಕಿದ್ದರೆ ಆಸ್ಪತ್ರೆಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಬಹುದು ಎಂದರು.

ಮೃತರ ವಿವರಗಳು

ಮೃತಪಟ್ಟವರನ್ನು ಸೈಯದ್ ಆರಿಫ್ ಪಾಶಾ (80), ಹರೀಶ್ ಬಿ.ಆರ್. (40), ಬಾಲಶಂಕರ್ (65), ಸಮ್ಶುನ್ನೀಶ್ (70), ರಾಜು (54), ನಿಂಗೇಗೌಡ (70), ಮಸೀನಾ ಬಾನು (58), ಗೋಪಾಲರಾಜು (55), ಬೈರೋಜಿ ರಾವ್ (80), ಸುಹಾಲ್ ಖಾನ್ (43) ಮತ್ತು ನೀಲಿ (79) ಎಂದು ಗುರುತಿಸಲಾಗಿದೆ.

ಆಸ್ಪತ್ರೆ ದಾಖಲೆಗಳ ಪ್ರಕಾರ, ಪರಿಶೀಲನೆಯ ಅವಧಿಯಲ್ಲಿ ಒಟ್ಟು 12 ರೋಗಿಗಳು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com