ಕೇಂದ್ರದ ನೆರವು ಪಡೆಯಲು ರಾಜ್ಯ ಸರ್ಕಾರ ಮಾಸ್ಟರ್‌ಪ್ಲಾನ್‌: ದೆಹಲಿಯಲ್ಲಿ ವಿಶೇಷ ತಂಡ ರಚನೆಗೆ ಒಪ್ಪಿಗೆ..!

ರಾಜ್ಯಕ್ಕೆ ಹೆಚ್ಚು ಕೇಂದ್ರ ನೆರವು ದೊರಕುವಂತೆ ಮಾಡಲು, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳು ಕೇಂದ್ರ ಸರ್ಕಾರದ ಯಾವ ಯಾವ ಯೋಜನೆಗಳಿಂದ ಎಷ್ಟು ಅನುದಾನ ಪಡೆಯುತ್ತಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ.
DK Shivkumar
ಡಿಕೆ.ಶಿವಕುಮಾರ್
Updated on

ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಅನುದಾನಗಳು ಮತ್ತು ನೆರವುಗಳನ್ನು ಹೆಚ್ಚು ಪ್ರಮಾಣದಲ್ಲಿ ತರಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ವಿಶೇಷ ಅಧಿಕಾರಿಗಳ ತಂಡ ರಚಿಸಲು ಮುಂದಾಗಿದೆ. ಈ ಸಂಬಂಧ ರಾಜ್ಯ ಸಚಿವ ಸಂಪುಟ ಶನಿವಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಅಧ್ಯಯನ ಮಾಡಿ, ಕರ್ನಾಟಕಕ್ಕೆ ಅನ್ವಯಿಸಬಹುದಾದ ಯೋಜನೆಗಳು ಮತ್ತು ಅನುದಾನಾವಕಾಶಗಳನ್ನು ಗುರುತಿಸಲು ದೆಹಲಿಯಲ್ಲಿ ಪ್ರತ್ಯೇಕ ಘಟಕವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯಕ್ಕೆ ಹೆಚ್ಚು ಕೇಂದ್ರ ನೆರವು ದೊರಕುವಂತೆ ಮಾಡಲು, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳು ಕೇಂದ್ರ ಸರ್ಕಾರದ ಯಾವ ಯಾವ ಯೋಜನೆಗಳಿಂದ ಎಷ್ಟು ಅನುದಾನ ಪಡೆಯುತ್ತಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಆ ರಾಜ್ಯಗಳ ಮಾದರಿಯನ್ನು ಆಧರಿಸಿ ಕರ್ನಾಟಕಕ್ಕೂ ಹೆಚ್ಚಿನ ಅನುದಾನ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿ ಕರ್ನಾಟಕ ಭವನದಲ್ಲಿನ ರೆಸಿಡೆಂಟ್ ಕಮಿಷನರ್ ಕಚೇರಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಸಮಾಧಾನವ ವ್ಯಕ್ತಪಡಿಸಿದ ಸಿಎಂ, ಅದನ್ನು ಮರುಸಂರಚನೆ ಮಾಡುವುದಾಗಿ ತಿಳಿಸಿದ್ದಾರೆ.

ದೆಹಲಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಅನುದಾನಗಳು, ಕೇಂದ್ರ ಪ್ರಾಯೋಜಿತ ಯೋಜನೆಗಳ ಮಾಹಿತಿ ಸಂಗ್ರಹಿಸಲು ಹೊಸ ತಂಡವೊಂದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

DK Shivkumar
ನೂತನ 'ಪ್ರಜಾ ಸೇವೆ ಇಲಾಖೆ' ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ!

ಈ ಉದ್ದೇಶಕ್ಕಾಗಿ ಐದು ಅಥವಾ ಆರು ಮಂದಿ ನಿವೃತ್ತ ಸಿವಿಲ್ ಸರ್ವಿಸ್ ಅಧಿಕಾರಿಗಳನ್ನು ಕೂಡ ನೇಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಈ ಅಧಿಕಾರಿಗಳು ದೆಹಲಿಯಲ್ಲಿ ಲಭ್ಯವಿರುವ ಯೋಜನೆಗಳು, ಅನುದಾನ ಅವಕಾಶಗಳು ಹಾಗೂ ರಾಜ್ಯಕ್ಕೆ ಪ್ರಯೋಜನಕಾರಿಯಾಗುವ ಕೇಂದ್ರ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೆರವಾಗಲಿದ್ದಾರೆ.

ಇದರ ಜೊತೆಗೆ, ರಾಜ್ಯಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮತ್ತು ಇತರೆ ಕಾನೂನು ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಲು ದೆಹಲಿಯಲ್ಲಿ ಪ್ರತ್ಯೇಕ ಕಾನೂನು ಘಟಕ ಸ್ಥಾಪಿಸಲು ಕೂಡ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇನ್ನೊಂದೆಡೆ, UPSC ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನವದೆಹಲಿಯಲ್ಲಿ ‘ಕರ್ನಾಟಕ ಭವನ-4’ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಭವನ ನಿರ್ಮಾಣಕ್ಕೆ ಸುಮಾರು 80 ಕೋಟಿ ರೂ. ವೆಚ್ಚವಾಗಲಿದೆ.

ಈ ಭವನದಲ್ಲಿನ ಸೌಲಭ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 50 ಶೇಕಡಾ ಮೀಸಲಾತಿ ನೀಡಲಾಗುತ್ತದೆ. ಉಳಿದ 50 ಶೇಕಡಾ ಸೌಲಭ್ಯಗಳನ್ನು ಇತರೆ ಸಮುದಾಯಗಳ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com