Namma Metro: ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ; ಮೆಟ್ರೋ ಸಂಚಾರಕ್ಕೆ ವ್ಯತ್ಯಯ ಇಲ್ಲ

ಈ ಘಟನೆ ಗ್ರೀನ್ ಲೈನ್‌ನ ಮಾದಾವರ ಮೆಟ್ರೊ ನಿಲ್ದಾಣ–ಸಿಲ್ಕ್ ಇನ್ಸ್ಯುಟ್ಯೂಟ್ ಮೆಟ್ರೊ ನಿಲ್ದಾಣ ಮಾರ್ಗದಲ್ಲಿರುವ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
Fire at Nagasandra Metro station
ನಾಗಸಂದ್ರ ಮೆಟ್ರೊ ನಿಲ್ದಾಣದಲ್ಲಿ ಅಗ್ನಿ ಅವಘಡ
Updated on

ಇಂದು ಭಾನುವಾರ ಮಧ್ಯಾಹ್ನ ಬೆಂಗಳೂರಿನ ನಮ್ಮ ಮೆಟ್ರೊ ಜಾಲದ ನಾಗಸಂದ್ರ ಮೆಟ್ರೊ ನಿಲ್ದಾಣದಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ನಿಲ್ದಾಣದ ಆವರಣದಿಂದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು.

ಈ ಘಟನೆ ಗ್ರೀನ್ ಲೈನ್‌ನ ಮಾದಾವರ ಮೆಟ್ರೊ ನಿಲ್ದಾಣ–ಸಿಲ್ಕ್ ಇನ್ಸ್ಯುಟ್ಯೂಟ್ ಮೆಟ್ರೊ ನಿಲ್ದಾಣ ಮಾರ್ಗದಲ್ಲಿರುವ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ನೀಡಿದ ಮಾಹಿತಿಯ ಪ್ರಕಾರ, ಮಧ್ಯಾಹ್ನ ಸುಮಾರು 1.30 ಗಂಟೆಗೆ ನಿಲ್ದಾಣದ ತುರ್ತು ನಿರ್ಗಮನ (Emergency Exit) ಪ್ರದೇಶದ ಸಮೀಪದ ಒಂದು ಸೂಚನಾ ಫಲಕಕ್ಕೆ (Signboard) ಬೆಂಕಿ ತಗುಲಿತ್ತು.

ಘಟನಾ ಸ್ಥಳದ ದೃಶ್ಯಗಳಲ್ಲಿ ನಿಲ್ದಾಣದ ಒಂದು ಭಾಗದಿಂದ ದಟ್ಟ ಹೊಗೆ ಮತ್ತು ಜ್ವಾಲೆಗಳು ಎದ್ದಿರುವುದು ಕಂಡುಬಂದಿದ್ದು, ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪ್ರಯಾಣಿಕರ ಗಮನ ಸೆಳೆಯಿತು. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ ಕಾರಣ ಸುರಕ್ಷತೆ ಕುರಿತು ಕೆಲ ಆತಂಕಗಳು ವ್ಯಕ್ತವಾಗಿದ್ದವು.

ಆದರೆ, ಮಾಹಿತಿ ಸಿಕ್ಕ ತಕ್ಷಣವೇ ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ಅಗ್ನಿಶಾಮಕ ಪ್ರತಿಕ್ರಿಯಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ತ್ವರಿತವಾಗಿ ನಂದಿಸಿವೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.

ಅಧಿಕಾರಿಗಳ ಪ್ರಕಾರ, ಇದು ಸಣ್ಣ ಪ್ರಮಾಣದ ಬೆಂಕಿ ಅವಘಡವಾಗಿದ್ದು, ಹೆಚ್ಚಿನ ಹಾನಿಯಾಗುವ ಮೊದಲು ನಿಯಂತ್ರಣಕ್ಕೆ ತರಲಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ ಹಾಗೂ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡಿದ್ದರೂ ಮೆಟ್ರೋ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಗ್ರೀನ್ ಲೈನ್ ಮಾರ್ಗದಲ್ಲಿ ರೈಲು ಸೇವೆಗಳು ಎಂದಿನಂತೆ ಮುಂದುವರಿದಿವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

Fire at Nagasandra Metro station
ಸುರಂಗ ರಸ್ತೆಗೆ ಜಾಗ ಮಾಡಲು Namma metro ವಿನ್ಯಾಸವನ್ನೇ ಬದಲಿಸಿದ BMRCL: Red Line ನಿಂದ Veterinary ಕಾಲೇಜು ನಿಲ್ದಾಣ ರದ್ದು..!

ಸಾರ್ವಜನಿಕರು ಆತಂಕ ಪಡಬಾರದು ಎಂದು ಮನವಿ ಮಾಡಿರುವ ಮೆಟ್ರೋ ನಿಗಮ, ಅಗತ್ಯವಿದ್ದಲ್ಲಿ ಮುಂದಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ತುರ್ತು ನಿರ್ಗಮನ ಪ್ರದೇಶದ ಬಳಿಯಿದ್ದ ಸೂಚನಾ ಫಲಕಕ್ಕೆ ಬೆಂಕಿ ತಗುಲಲು ಕಾರಣವಾದ ಅಂಶಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಹೊರಗಿನಿಂದಲೇ ಹೊಗೆ ಮತ್ತು ಜ್ವಾಲೆಗಳು ಗೋಚರಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ, ತುರ್ತು ಸೇವಾ ಸಿಬ್ಬಂದಿಯ ತ್ವರಿತ ಕ್ರಮದಿಂದ ಬೆಂಕಿಯನ್ನು ಶೀಘ್ರವಾಗಿ ನಂದಿಸಲಾಗಿದ್ದು, ಮೆಟ್ರೋ ಸೇವೆಗಳು ಯಾವುದೇ ಅಡಚಣೆ ಇಲ್ಲದೆ ಮುಂದುವರಿದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com