

ಬೆಂಗಳೂರು: ನಗರದ ಸಂಪಿಗೆಹಳ್ಳಿ ಪ್ರದೇಶದಲ್ಲಿ ವೃದ್ಧ ದಂಪತಿ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ 85 ವರ್ಷದ ಪತಿ ತನ್ನ 77 ವರ್ಷದ ಪತ್ನಿಯನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಆದರೆ, ಇದೀಗ ವೃದ್ಧ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದು, ಆಕೆಯ ಸಾವಿನಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಮೃತರನ್ನು ಶಿವಾನಂದ ಪ್ರಸಾದ್ ಮತ್ತು ಅವರ ಪತ್ನಿ ಸುಮಿತ್ರಾ ದೇವಿ ಎಂದು ಗುರುತಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸುಮಿತ್ರಾ ದೇವಿ ಅವರ ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಂ) ವರದಿ ಇನ್ನೂ ಬಂದಿಲ್ಲ. ವರದಿ ಬಂದ ಬಳಿಕವೇ ಅವರ ಸಾವಿನ ನಿಖರ ಕಾರಣವನ್ನು ದೃಢಪಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ದಂಪತಿ ತಮ್ಮ ಪುತ್ರ ಕಿರಣ್ ಕುಮಾರ್ ಕಶ್ಯಪ್ ಅವರ ಸಂಪಿಗೆಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಕಿರಣ್ ಕುಮಾರ್ ಕಶ್ಯಪ್ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಹಿರಿಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ನಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದರು.
ಇತ್ತೀಚೆಗೆ ಸಂಬಂಧಿಕರ ಮದುವೆ ಹಿನ್ನೆಲೆಯಲ್ಲಿ ಕಿರಣ್ ಅವರ ಪತ್ನಿ ಮತ್ತು ಪುತ್ರ ಊರಿಗೆ ತೆರಳಿದ್ದರು. ಈ ನಡುವೆ ಮಂಗಳವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಕಿರಣ್ ಅವರು ತಮ್ಮ ಪೋಷಕರಿದ್ದ ಕೊಠಡಿಗೆ ಹೋದಾಗ ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪ್ರಾಥಮಿಕ ತನಿಖೆಯಲ್ಲಿ, ಶಿವಾನಂದ ಪ್ರಸಾದ್ ಅವರು ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಕಿಟಕಿಯ ಗ್ರಿಲ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಮೂಡಿತ್ತು.
ಆದರೆ, ತನಿಖೆಯ ವೇಳೆ ದೊರೆತ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಣ್ಣು ಮತ್ತು ಕಿವಿ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸುಮಿತ್ರಾ ದೇವಿ ಅವರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದು, ಪತ್ನಿಯ ಹಠಾತ್ ಸಾವಿನಿಂದ ಆಘಾತಕ್ಕೊಳಗಾದ ಶಿವಾನಂದ ಪ್ರಸಾದ್, ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಿವಾನಂದ ಪ್ರಸಾದ್ ಅವರ ಮಾನಸಿಕ ಸ್ಥಿತಿಯ ಕುರಿತಂತೆಯೂ ಇದೀಗ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಪ್ರಸ್ತುತ ದಂಪತಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬೀಳುವ ನಿರೀಕ್ಷೆಯಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.