

ಬೆಂಗಳೂರು: ಗುತ್ತಿಗೆದಾರರು ಕೇವಲ ಕಾಮಗಾರಿ ನಿರ್ವಹಿಸುವವರಾಗಿರದೆ, ನಗರದ ಅಭಿವೃದ್ಧಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡುವವರಾಗಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇರಬಾರದು ಹಾಗೂ ಗುತ್ತಿಗೆದಾರರಿಗೂ ಹೊಣೆಗಾರಿಕೆ ಇರಬೇಕು ಎಂದು ಒತ್ತಿ ಹೇಳಿದ್ದಾರೆ.
ಅಭಿವೃದ್ಧಿ ಕಾರ್ಯಗಳಲ್ಲಿ ಗುತ್ತಿಗೆದಾರರು ಪ್ರಮುಖರು. ಆದ್ದರಿಂದ ಅವರಿಗೂ ಹೊಣೆಗಾರಿಕೆ ಇರಬೇಕು. ಅವರು ನಗರದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುವಂತೆ ಮನವರಿಕೆ ಮಾಡಿಕೊಳ್ಳಬೇಕು. ಇದರಿಂದ ಉತ್ತಮ ಆಡಳಿತ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸುತ್ತೇನೆ. ಕೇವಲ ಪರಿಶೀಲನೆ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಆದರೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಇದು ಅಗತ್ಯವಾದ ಕ್ರಮವಾಗಿದೆ ಎಂದು ಸಚಿವರು ಹೇಳಿದರು.
ವ್ಯವಸ್ಥೆಯಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುವ ಅಗತ್ಯವಿದ್ದು, ಉತ್ತಮ ಬೆಂಗಳೂರಿನ ನಿರ್ಮಾಣಕ್ಕಾಗಿ ಎಲ್ಲರಿಂದಲೂ ಸಲಹೆಗಳನ್ನು ಸ್ವಾಗತಿಸುತ್ತೇವೆ. ಎಲ್ಲಾ ಭಾಗಿದಾರರ ಸಹಕಾರದೊಂದಿಗೆ ನಗರದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ರಸ್ತೆ ದುರಸ್ತಿ ಕಾಮಗಾರಿಗಳಿಗೆ ಕಳೆದ ಮೂರು ವರ್ಷಗಳಲ್ಲಿ ಖರ್ಚು ಮಾಡಿರುವ ಹಣದ ಕುರಿತು 30 ದಿನಗಳಲ್ಲಿ ಶ್ವೇತಪತ್ರ ಬಿಡುಗಡೆ ಮಾಡಬೇಕು ಹಾಗೂ ಮುಂದಿನ ರೂ.2,000 ಕೋಟಿ ರಸ್ತೆ ಕಾಮಗಾರಿಗೆ ಅನುಮೋದನೆ ನೀಡುವ ಮೊದಲು ಕಾಮಗಾರಿಗಳ ವಿವರ, ಗುತ್ತಿಗೆದಾರರ ಮಾಹಿತಿ, ವೆಚ್ಚ ಮತ್ತು ಕಾಲಮಿತಿಯನ್ನು ಒಳಗೊಂಡ ಲೈವ್ ಇನ್‌ಫ್ರಾಸ್ಟ್ರಕ್ಚರ್ ಡ್ಯಾಶ್‌ಬೋರ್ಡ್ ರೂಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, "ಎಲ್ಲರ ಸಲಹೆಗಳಿಗೂ ಸರ್ಕಾರ ಮುಕ್ತವಾಗಿದೆ" ಎಂದು ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ರೂ.2,000 ಕೋಟಿ ಅನುದಾನ ಘೋಷಿಸಿದ್ದು, ವಾರ್ಡ್ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಲಹೆಗಳ ಆಧಾರದ ಮೇಲೆ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಸಂಪಂಗಿರಾಮನಗರದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ವೇಳೆ ಡಾಂಬರೀಕರಣದ ಗುಣಮಟ್ಟ ಕಳಪೆಯಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ನಗರ ನಿಗಮದ (BCCC) ಸಹಾಯಕ ಎಂಜಿನಿಯರ್ ಪೂಜಾರಪ್ಪ ಅವರನ್ನು ಅಮಾನತುಗೊಳಿಸುವಂತೆ ಸೂಚನೆ ನೀಡಿದ್ದರು.
ಡಾಂಬರು ಮಿಶ್ರಣವನ್ನು ನಿಗದಿತ ಪ್ರಮಾಣದಲ್ಲಿ ಬಳಸದೇ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರೊಂದಿಗೆ ಸಹಾಯಕ ಎಂಜಿನಿಯರ್ ಕೈಜೋಡಿಸಿದ್ದ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ (ಬ್ಲ್ಯಾಕ್‌ಲಿಸ್ಟ್) ಸೇರಿಸಲಾಗಿದೆ.