

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಬಡ್ತಿ ಪಡೆಯಲು ನಕಲಿ ಪ್ರಮಾಣಪತ್ರ ನೀಡಲಾಗಿದೆ ಎಂಬ ಆರೋಪಗಳ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಯುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಟಿಎ.ಶರವಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಲ್ಲಿ ಸಾರಿಗೆ ಇಲಾಖೆ ಮಾತ್ರವಲ್ಲ, ತಾಂತ್ರಿಕ ಶಿಕ್ಷಣ ಇಲಾಖೆಯೂ ಅಕ್ರಮದಲ್ಲಿ ಭಾಗಿಯಾಗಿರುವುದು ಗೊತ್ತಾಗುತ್ತಿದೆ. ಹೀಗಾಗಿ, ನಿವೃತ್ತ ನ್ಯಾಯಾಧೀಶರಾದ ನಾರಾಯಣ ಎಂಬವರನ್ನು ಈಗಾಗಲೇ ನೇಮಿಸಿ ಗೆಜೆಟ್ ನೋಟಿಫಿಕೇಶನ್ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಶರವಣ ಮಾತನಾಡಿ, ಕೆಸಿಎಸ್ಆರ್ ಕಾಯ್ದೆಯಂತೆ ನಕಲಿ ಪ್ರಮಾಣಪತ್ರ ನೀಡಿದವರ ಮೇಲೂ ಕ್ರಮವಾಗಬೇಕು. ಮೈಸೂರು, ಬೆಳಗಾವಿಯಲ್ಲಿ ಪರೀಕ್ಷೆ ಬರೆದು ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯಲು ಹೇಗೆ ಸಾಧ್ಯ? ಇವರಿಗೆ ಹೇಗೆ ಪ್ರಮಾಣ ಪತ್ರ ಕೊಡಲಾಯಿತು? ಇದರ ಬಗ್ಗೆಯೂ ತನಿಖೆಯಾಗಿ ಕ್ರಮ ಆಗಬೇಕು. ಏಕೆಂದರೆ ಇಂದು ಉದ್ಯೋಗ ಸಮಸ್ಯೆಯಿಂದ ಸಾಕಷ್ಟು ಜನರಿಗೆ ತೊಂದರೆ ಆಗಿದೆ. ಸಾಕಷ್ಟು ಜನ ನೇಮಕಾತಿಗಾಗಿ ಕಾಯುತ್ತಿದ್ದಾರೆ. ಅವರಿಗೆಲ್ಲ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
Advertisement