

ರಾಯಚೂರು: ಯುಗಾದಿ ಹಬ್ಬದ ನಂತರ ನಡೆದ ಬಣ್ಣಗಳ ಹಬ್ಬ ಹೋಳಿ ಸಂಭ್ರಮದ ಬಳಿಕ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಗೋವಿನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕರನ್ನು ಗೋವಿಂದರಾಜ್ (30) ಹಾಗೂ ಗಂಗಾಧರ್ (20) ಎಂದು ಗುರ್ತಿಸಲಾಗಿದೆ. ಹೋಳಿ ಆಚರಣೆ ಬಳಿಕ ಕೆರೆಯಲ್ಲಿ ಸ್ನಾನ ಮಾಡಲು ತೆರಳಿದ ಗೋವಿಂದರಾಜ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಘಟನೆ ದೇವದುರ್ಗ ತಾಲ್ಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ನಡೆದಿದೆ. ಹೋಳಿ ಸಂಭ್ರಮದ ನಂತರ ಸ್ನಾನಕ್ಕೆ ತೆರಳಿದ ಗಂಗಾಧರ್ ಎಂಬ ಯುವಕ ಎನ್‌ಆರ್‌ಬಿಸಿ (NRBC) ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ನಂತರ ನಾಗೋಳಿ ಗ್ರಾಮದ ಸಮೀಪದಲ್ಲಿ ಅವನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement