

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಸಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಸಿಲಿನಿಂದ ಮನುಷ್ಯರಷ್ಟೇ ಅಲ್ಲದೆ, ಪ್ರಾಣಿ ಪಕ್ಷಿಗಳೂ ಕೂಡ ಹೈರಾಣಾಗುತ್ತಿವೆ. ದಾಹದಿಂದ ಪ್ರಾಣಿ-ಪಕ್ಷಿಗಳು ಸಂಕಷ್ಟಕ್ಕೆ ಸಿಲುಕ್ಕಿರುವ ಹಿನ್ನೆಲೆಯಲ್ಲಿ ರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆ ಆಪರೇಷನ್ ಕ್ವೆಂಚ್ ಥರ್ಸ್ಟ್” ಎಂಬ ವಿಶೇಷ ಅಭಿಯಾನವನ್ನು ಆರಂಭಿಸಿದೆ.
ಸ್ವಯಂಸೇವಾ ಸಂಸ್ಥೆ People for Animals ಮತ್ತು ಕರ್ನಾಟಕ ಅರಣ್ಯ ಇಲಾಖೆ ಕೈಜೋಡಿಸಿ ತುರುಹಳ್ಳಿ ಅರಣ್ಯ ಪ್ರದೇಶದಲ್ಲಿ ಈ ಅಭಿಯಾನವನ್ನು ಜಾರಿಗೆ ತಂದಿವೆ. ಈ ಯೋಜನೆಯ ಉದ್ದೇಶ ವನ್ಯಜೀವಿಗಳಿಗೆ ನೀರಿನ ಲಭ್ಯತೆ ಹೆಚ್ಚಿಸುವುದಾಗಿದೆ.
ತೀವ್ರ ಬಿಸಿಲಿನಿಂದಾಗಿ ಪಕ್ಷಿಗಳು ಮತ್ತು ಪ್ರಾಣಿಗಳು ನೀರಿಲ್ಲದೆ ಕುಸಿದು ಬೀಳುತ್ತಿರುವ ಘಟನೆಗಳು ಹೆಚ್ಚಾಗಿವೆ. ಪಿಎಫ್‌ಎ ಕಾರ್ಯಕರ್ತರು ಪ್ರತಿದಿನ 5 ರಿಂದ 7 ರಕ್ಷಣೆ ಕರೆಗಳನ್ನು ಸ್ವೀಕರಿಸುತ್ತಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ತಿಳಿಸಿದ್ದಾರೆ.
2025ರಲ್ಲಿ ಪಿಎಫ್‌ಎ ಸಂಸ್ಥೆ ಹಲವಾರು ಪ್ರಾಣಿಗಳನ್ನು ರಕ್ಷಿಸಿದೆ. ಇದರಲ್ಲಿ 153 ಕಪ್ಪು ಗಿಡುಗ, 33 ಗೂಬೆ, 12 ಗಿಳಿ, 10 ಕಾಗೆ, ಐದು ಕೋಗಿಲೆ, 4 ಹಾವು, 2 ನವಿಲು, ಮೂರು ಅಳಿಲು ಮತ್ತು ಒಂದು ನರಿಯನ್ನು ರಕ್ಷಣೆ ಮಾಡಲಾಗಿದೆ.
"ಪಕ್ಷಿಗಳಲ್ಲದೆ, ಏಳು ಜಿಂಕೆಗಳನ್ನು ಅರಣ್ಯದ ಗಡಿ ಪ್ರದೇಶಗಳಲ್ಲಿ ರಕ್ಷಣೆ ಮಾಡಲಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಜಿಂಕೆಗಳು ಕಾಡಿನಿಂದ ಹೊರಬಂದು ರಸ್ತೆ ಅಪಘಾತಗಳಿಗೆ ಒಳಗಾಗುತ್ತಿವೆ ಅಥವಾ ಬೀದಿ ನಾಯಿಗಳ ದಾಳಿಗೆ ಗುರಿಯಾಗುತ್ತಿವೆ. ಬೇಸಿಗೆ ಸಮಯದಲ್ಲಿ ಈ ಪ್ರಕರಣ ಸಂಖ್ಯೆ ಹೆಚ್ಚಾಗುತ್ತದೆ ಎಂದು ಎನ್‌ಜಿಒದ ಮುಖ್ಯ ವನ್ಯಜೀವಿ ಪಶುವೈದ್ಯ ಕರ್ನಲ್ ಡಾ. ನವಾಜ್ ಷರೀಫ್ ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ತುರಹಳ್ಳಿ ಹಾಗೂ ಕೆ.ಬಿ. ಕಾವಲ್ ಅರಣ್ಯ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್‌ಗಳ ಮೂಲಕ ಪ್ರತಿದಿನ ನೀರು ತುಂಬುವ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೆ, ಹಲವು ಕಡೆ ನೀರಿನ ತೊಟ್ಟಿಗಳನ್ನು (water troughs) ಸ್ಥಾಪಿಸಲಾಗಿದ್ದು, ವನ್ಯಜೀವಿಗಳಿಗೆ ಸಹಜ ವಾತಾವರಣದಲ್ಲೇ ನೀರು ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ.
ಈ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳು, ಜಿಂಕೆಗಳು, ಕಾಡುಹಂದಿಗಳು, ನರಿ, ಮುಂಗುಸಿ, ಮೊಲಗಳು ಹಾಗೂ ನವಿಲುಗಳಂತಹ ವಿವಿಧ ಪ್ರಾಣಿಗಳು ವಾಸಿಸುತ್ತಿದ್ದು, ಈ ಅಭಿಯಾನವು ಅವುಗಳ ಜೀವ ಉಳಿಸಲು ಮಹತ್ವದ ಪಾತ್ರವಹಿಸುತ್ತಿದೆ ಎಂದು ತಿಳಿಸಿದ್ದಾರೆ.
Advertisement