ಬೆಂಗಳೂರು ನನಗೆ ಎಲ್ಲವನ್ನು ಕೊಟ್ಟಿದೆ: ತೀರ್ಮಾನ ಟೀಕಿಸುತ್ತಿರುವವರು ಮುಂದೆ ಸ್ಮರಿಸುತ್ತಾರೆ; ಡಿ.ಕೆ. ಶಿವಕುಮಾರ್

ಮೋದಿಯವರು ಏಕೆ ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದು ಕರೆದರು. ಭವಿಷ್ಯದ ಎಲ್ಲಾ ಸವಾಲುಗಳಿಗೆ ಬೆಂಗಳೂರನ್ನು ಸಿದ್ದತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರು ಮೂಲಕ ಭಾರತವನ್ನು ನೋಡಲಾಗುತ್ತದೆ ಎಂದು ಹೇಳಿದ್ದರು
Dk Shivakumar
ಡಿ.ಕೆ. ಶಿವಕುಮಾರ್
Updated on

ಬೆಂಗಳೂರು: ನಗರದ ಹಿತಕ್ಕೆ ನಾವು ಕೈಗೊಂಡಿರುವ ಅನೇಕ ತೀರ್ಮಾನಗಳ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡಬಹುದು, ಮಾಡಲಿ. ಆದರೆ ಮುಂದಿನ ಐದು ವರ್ಷಗಳ ನಂತರ ಡಿ.ಕೆ. ಶಿವಕುಮಾರ್ ಉತ್ತಮ ನಿರ್ಧಾರ ಕೈಗೊಂಡರು ಎಂದು ಹೇಳುತ್ತಾರೆ. ನನಗೆ ಅಷ್ಟೇ ಸಾಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗುರುವಾರ ಉತ್ತರಿಸಿದರು.

ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಚಾರವಾಗಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು ಈಗ ನಾನು ಬೇರೆಯವರಿಗೆ ಒಪ್ಪಿಸಲು ಆಗದೇ ಇರಬಹುದು. ಆದರೆ ಸಮಯ ಬಂದಾಗ ಅವರು ಒಪ್ಪುತ್ತಾರೆ. ಜಿಬಿಎ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಅನೇಕ ಚರ್ಚೆ ನಡೆಸಿದ್ದಾರೆ. ಅರ್. ಅಶೋಕ್, ಅಶ್ವಥ್ ನಾರಾಯಣ್ ಅನೇಕ ಸಲಹೆ ನೀಡಿದ್ದಾರೆ. ಇವರ ಸಲಹೆಗಳನ್ನು ನಾನು ಒಪ್ಪುತ್ತೇನೆ. ಜತೆಗೆ ಟೀಕೆಯನ್ನೂ ಸಹ ಮಾಡಿದ್ದಾರೆ. ನಾನು ಟೀಕೆಯನ್ನು ಯಾವಾಗಲೂ ಸ್ವೀಕಾರ ಮಾಡುವವನು.

ಟೀಕೆ ಇಲ್ಲದೇ ಹೋದರೆ ಯಾವುದೇ ಮನುಷ್ಯನನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಚಿನ್ನ ಪರೀಕ್ಷೆ ಮಾಡುವಾಗ ಬೆಂಕಿಗೆ ಹಾಕುತ್ತಾರೆ. ಮನುಷ್ಯನನ್ನು ಪರೀಕ್ಷೆ ಮಾಡುವಾಗ ಟೀಕೆಗಳು, ಆಪಾದ‌ನೆ ಮಾಡುತ್ತಾರೆ. ಇದನ್ನು ನಾವು ಯಾವ ರೀತಿ ತಿದ್ದಿಕೊಳ್ಳಬೇಕು ಎಂಬುದು ಇಲ್ಲಿ ಮುಖ್ಯವಾದುದು. ಟೀಕೆ ಮಾಡಿದರು ಎಂದ ತಕ್ಷಣ ನಾನು ಸಿಟ್ಟು ಮಾಡಿಕೊಳ್ಳುವುದು ಮಾಡುವುದಿಲ್ಲ ಎಂದರು.

ಈ ಸದನದಲ್ಲಿ ಈ ಹಿಂದೆ ಇದ್ದ ನಾಯಕರಾದ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಲಕ್ಕಪ್ಪ, ಮೇಲ್ಮನೆಯಲ್ಲಿ ನಾಣಯ್ಯ, ಎ.ಕೆ. ಸುಬ್ಬಯ್ಯ, ಎಂ.ಸಿ. ನಾಣಯ್ಯ ಸೇರಿ ಅನೇಕರು ಚೆನ್ನಾಗಿ ಚರ್ಚೆ ಮಾಡುತ್ತಿದ್ದರು. ಆಗಿನ ಚರ್ಚೆ ಸಕಾರಾತ್ಮಕವಾಗಿ ನಡೆಯುತ್ತಿತ್ತು. ಚರ್ಚೆ ಈಗ ನಕರಾತ್ಮಕವಾಗಿ ಹೋಗುತ್ತಿದೆ. Positive thinkers always have a solution for every problem. Negative thinker always have problem for every solution. ಧನಾತ್ಮಕ ಎಂಬುದು ಯಾವಾಗಲೂ ಇರಬೇಕು.

Dk Shivakumar
'ಜೀವ ಬಾಯಿಗೆ ಬಂದಿತ್ತು': ಡಿ.ಕೆ ಶಿವಕುಮಾರ್, ರೇವಣ್ಣ ಪ್ರಯಾಣಿಸುತ್ತಿದ್ದ ವಿಮಾನ ಆಗಸದಲ್ಲೇ ಗಿರಕಿ; ಕೆಲಕಾಲ ಆತಂಕ! ಆಗಿದ್ದೇನು?

ಆಸಕ್ತಿ ಪಟ್ಟು ಬೆಂಗಳೂರು ಅಭಿವೃದ್ದಿ ಖಾತೆಯನ್ನು ವಹಿಸಿಕೊಂಡಿದ್ದೇನೆ. ನಾನು ಈ ಹಿಂದೆ ನಗರಾಭಿವೃದ್ದಿ ಸಚಿವನಾಗಿದ್ದೆ, ಇಂಧನ ಸಚಿವನಾಗಿದ್ದೆ, ನನಗೆ ಈಗ ಸಾಕಷ್ಟು ಅನುಭವ ಹೊಂದಿದ್ದು ಬೆಂಗಳೂರಿನಲ್ಲೂ ಬದಲಾವಣೆ ಮಾಡಬೇಕು ಎಂದು ಹೊರಟಿದ್ದೇನೆ. ಆದರೂ ಒಂದಷ್ಟು ಜನ ತಪ್ಪು ಕಂಡುಹಿಡಿದರು. ಇದು ವಿರೋಧ ಪಕ್ಷದ ಕರ್ತವ್ಯವೂ ಹೌದು ಎಂದರು. ‌

ನಾನು ಬೆಂಗಳೂರು ಅಭಿವೃದ್ಧಿ ಇಲಾಖೆ ಜವಾಬ್ದಾರಿ ಹೊತ್ತುಕೊಂಡ ಮೇಲೆ ಸಾಕಷ್ಟು ಅಧ್ಯಯನ ನಡೆಸಿದ್ದೇನೆ. ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೇನೆ. ಆಗ 70 ಲಕ್ಷ ಇದ್ದ ಜನಸಂಖ್ಯೆ ಈಗ 1.40 ಕೋಟಿ ಆಗಿದೆ. 1.30 ಲಕ್ಷ ವಾಹನಗಳಿವೆ. ಬೇರೆ ನಗರಗಳಲ್ಲಿ ದೊಡ್ಡ ರಸ್ತೆಗಳು ಶೇ. 16ರಷ್ಟಿವೆ. ನಮ್ಮಲ್ಲಿ ಶೇ. 8ರಷ್ಟು ಮಾತ್ರ ಇದೆ. ಈ ಹಿಂದೆ ನೈಸ್ ರಸ್ತೆ ಮಾಡಿದರೂ ಪೂರ್ಣಗೊಳಿಸಲಿಲ್ಲ. ಫೆರಿಫೆರಲ್ ರಿಂಗ್ ರಸ್ತೆ ಅಂದು ಮಾಡಿದ್ದರೆ 3 ಸಾವಿರ ಕೋಟಿ ರುಪಾಯಿಗೆ ಮುಗಿದು ಹೋಗುತ್ತಾ ಇತ್ತು. ಈ ಎಲ್ಲ ಕಾರಣಗಳಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದರು.

ಬೆಂಗಳೂರು ನಗರದ ಆಡಳಿತ ಸುಧಾರಣೆಗಾಗಿ 2025 ಮೇ 15ರಂದು ಹೊಸ ನೋಟಿಫಿಕೇಶನ್ ಮಾಡಿ ಪ್ರಸ್ತುತ ಇರುವ ಪ್ರದೇಶಗಳನ್ನು ಸೇರಿ ಐದು ಪಾಲಿಕೆಗಳನ್ನು ಮಾಡಲಾಯಿತು. ಸೆಪ್ಟೆಂಬರ್ 2ರಂದು 74ನೇ ತಿದ್ದುಪಡಿ ತರಬೇಕು ಎಂದು ಹೊರಡಲಾಯಿತು. ಏಕಾಏಕಿ ತೀರ್ಮಾನ ಮಾಡಲಿಲ್ಲ. ವಿರೋಧ ಪಕ್ಷದ ನಾಯಕರ ಮಾತಿನಂತೆ ಸದನ ಸಮಿತಿ ರಚನೆ ಮಾಡಿ ಅವರು ನೀಡಿದ ಸಲಹೆಗಳನ್ನು ತೆಗೆದುಕೊಳ್ಳಲಾಯಿತು. ಇದರಲ್ಲಿ ತಪ್ಪುಗಳಿದ್ದರೆ ಅದನ್ನೂ ಸಹ ತಿದ್ದುಪಡಿ ಮಾಡಲಾಗುವುದು. ಈಗ 369 ವಾರ್ಡ್‌ಗಳನ್ನು ಮಾಡಲಾಗಿದೆ. ಬೆಂಗಳೂರನ್ನು ಯಾವುದೇ ಕಾರಣಕ್ಕೂ ಒಡೆಯುತ್ತಿಲ್ಲ. ಇದು ಆಡಳಿತದ ವಿಕೇಂದ್ರಿಕರಣ. ಬೆಂಗಳೂರಿನಲ್ಲಿ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಅದಕ್ಕೆ ಸರ್ಕಾರ ಸಹಾಯ ಬೇಕಾಗುತ್ತದೆ ಅದಕ್ಕೆ ಜಿಬಿಎಗೆ ಮುಖ್ಯಮಂತ್ರಿಯವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಬೆಂಗಳೂರಿಗೆ ಪ್ಲಾನಿಂಗ್ ಅಥಾರಿಟಿ ಇರಲಿಲ್ಲ ಅದನ್ನು ಸಹ ಬಗೆಹರಿಸಲಾಗಿದೆ. ಜಿಬಿಎ ಇದರ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

ಮೋದಿಯವರು ಏಕೆ ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದು ಕರೆದರು. ಭವಿಷ್ಯದ ಎಲ್ಲಾ ಸವಾಲುಗಳಿಗೆ ಬೆಂಗಳೂರನ್ನು ಸಿದ್ದತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರು ಮೂಲಕ ಭಾರತವನ್ನು ನೋಡಲಾಗುತ್ತದೆ ಎಂದು ಹೇಳಿದ್ದರು. ಜಾಗತಿಕ ನಾಯಕರು ಮೊದಲು ದೆಹಲಿಗೆ ಬರುತ್ತಿದ್ದರು ಈಗ ಸಮಯ ಬದಲಾಗಿದೆ ಮೊದಲು ಬೆಂಗಳೂರಿಗೆ ಬರುತ್ತಾರೆ ಎಂದಿದ್ದರು. ಇದು ಕೇವಲ ನಮ್ಮಿಂದ ಮಾತ್ರವಲ್ಲ, ಪ್ರತಿಭಾವಂತ ಯುವಕರು, ನಾಗರೀಕರು ಎಲ್ಲಾ ಸರ್ಕಾರಗಳಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.

Dk Shivakumar
ಹಣಕಾಸು ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರದಿಂದ ನೆರವು: ಡಿ.ಕೆ ಶಿವಕುಮಾರ್

ನಾನು ಬೆಂಗಳೂರಿನ ಶಾಸಕರಿಗೆ ಸಭೆಗಳಲ್ಲಿ ಒಂದು ಮಾತು ಹೇಳುತ್ತೇನೆ. ನಾನು ಬೇರೆ ಕಡೆಯಿಂದ ಬಂದವನು ಎಂದು ಭಾವಿಸಬೇಡಿ. ಬೆಂಗಳೂರು ಕರ್ನಾಟಕ ರಾಜ್ಯದ ಹೃದಯ ಎಂದು ಹೇಳಿದ್ದೇನೆ. ನಾನು ಬೆಂಗಳೂರಿನಲ್ಲಿ ಹುಟ್ಟಿಲ್ಲದಿರಬಹುದು. ಕನಕಪುರದಲ್ಲಿ ಹುಟ್ಟಿದರೂ ಅದು ಬೆಂಗಳೂರಿನ ಭಾಗ. ನನ್ನ 6ನೇ ವಯಸ್ಸಿಗೆ ಬೆಂಗಳೂರಿಗೆ ಬಂದವನು ಇಲ್ಲಿಯವರೆಗೂ ಇಲ್ಲೇ ನೆಲೆಸಿದ್ದೇನೆ. ಬೆಂಗಳೂರು ನನಗೆ ಎಲ್ಲವನ್ನು ಕೊಟ್ಟಿದ್ದು, ಬೆಂಗಳೂರಿಗೆ ನಾನು ಸ್ವಲ್ಪವಾದರೂ ಕೊಡುಗೆ ನೀಡಬೇಕು. ನಾನು ಇಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ನಾನು ಹೆಚ್ಚು 10-15 ವರ್ಷ ರಾಜಕೀಯ ಮಾಡಬಹುದು. ನಮಗೆ ಸಿಕ್ಕ ಅವಕಾಶದಲ್ಲಿ ಏನಾದರೂ ಕೊಡುಗೆ ನೀಡಬೇಕು ಎಂದು ಪ್ರಯತ್ನಿಸುತ್ತಿದ್ದೇನೆ. ನಾನೊಬ್ಬನೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ನನ್ನ ಜತೆಗೆ ನೀವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.

ಸಂಚಾರ ದಟ್ಟಣೆ ಬಗ್ಗೆ ನಮ್ಮ ಬಗ್ಗೆಯೇ ಹೆಚ್ಚು ಸುದ್ದಿ. ಮುಂಬೈ, ಹೈದರಾಬಾದ್, ದೆಹಲಿಯಲ್ಲಿ ನಮಗಿಂತ ಕೆಟ್ಟದಾಗಿ ಇದ್ದರೂ ನಮ್ಮ ಬಗ್ಗೆಯೇ ಹೆಚ್ಚು ಸುದ್ದಿ. ಟ್ರಾಫಿಕ್ ವಿಚಾರದಲ್ಲಿ ಅನೇಕ ಕ್ರಮ ಕೈಗೊಂಡಿದ್ದೇವೆ. ಬೆಂಗಳೂರಿನಲ್ಲಿ ಇರುವ ರಸ್ತೆ ಪ್ರಮಾಣ ಕೇವಲ 8% ಮಾತ್ರ. ರಸ್ತೆ ಅಗಲೀಕರಣ ಮಾಡಬೇಕು, 2013ರಲ್ಲಿ ಪರಿಹಾರ ವಿಚಾರವಾಗಿ ಬಂದ ಕಾಯ್ದೆ ಬಂದ ನಂತರ ಪರಿಹಾರ 2 ಪಟ್ಟು ನೀಡಬೇಕು. ಹೀಗಾಗಿ ರಸ್ತೆ ಅಗಲೀಕರಣ ಅಸಾಧ್ಯ. ಹೀಗಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ಮುಂದಾಗಿದ್ದೇವೆ. ಈ ಯೋಜನೆಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಕೈಬಿಡಲು ಆಗುವುದಿಲ್ಲ.

ಅಲ್ಲಿನ ಭೂ ಮಾಲೀಕರಿಗೆ 2013ರ ಕಾಯ್ದೆ ಅನ್ವಯ ಪರಿಹಾರ ನೀಡಿದ್ದೇವೆ. ಪರಿಹಾರಕ್ಕೆ 5 ಅವಕಾಶಗಳನ್ನು ನೀಡಿದ್ದೇವೆ. ಮೊದಲ ಹಂತದ ಯೋಜನೆ ಜಾರಿಗೆ 80% ಭೂಸ್ವಾಧೀನ ಪ್ರಕ್ರಿಯೆಗೆ ಅನುಮತಿ ನೀಡಲಾಗಿದೆ. ಸಧ್ಯದಲ್ಲೇ ಟೆಂಡರ್ ಕರೆಯಲಾಗುವುದು. ಈ ರಸ್ತೆ ಆದರೆ ಬೆಂಗಳೂರಿನಲ್ಲಿ ಅರ್ಧ ಸಂಚಾರಿ ದಟ್ಟಣೆ ನಿವಾರಣೆಯಾಲಿದೆ. ಈ ಯೋಜನೆಗೆ ಒಂದೇ ದಿನದಲ್ಲಿ 26 ಸಾವಿರ ಕೋಟಿ ಸಾಲ ನೀಡಲು ಮುಂದಾದ ಹುಡ್ಕೋಗೆ ಧನ್ಯವಾದಗಳು ಎಂದು ತಿಳಿಸಿದರು.

ನಗರದ ಒಳಗೆ ರಸ್ತೆ ಅಗಲೀಕರಣ ಅಸಾಧ್ಯವಾಗಿರುವುದರಿಂದ ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿ, ಪ್ರಧಾನಮಂತ್ರಿಯನ್ನು ಭೇಟಿ ಮಾಡಿ, ಟನಲ್ ರಸ್ತೆ ಮಾಡಲು ಮುಂದಾಗಿದ್ದೇವೆ. ಮುಂಬೈಯಲ್ಲಿ 6-7 ಟನಲ್ ರಸ್ತೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಇದರ ಹೊರತಾಗಿ ಬೇರೆ ಆಯ್ಕೆಗಳಿಲ್ಲ. ಟನಲ್ ರಸ್ತೆಯಲ್ಲಿ ಕೆಲವು ಪಾಯಿಂಟ್‌ಗಳಲ್ಲಿ 2-3 ಸಾವಿರ ಕೋಟಿ ಭೂಸ್ವಾಧೀನಕ್ಕೆ ಬೇಕಾಗುತ್ತದೆ. ಅದರ ಹೊರತಾಗಿ 17 ಸಾವಿರ ಕೋಟಿ ರಸ್ತೆ ನಿರ್ಮಾಣಕ್ಕೆ ಬೇಕಾಗುತ್ತದೆ. ಬೇರೆ ರಾಜ್ಯಗಳಲ್ಲಿ ಟನಲ್ ರಸ್ತೆಗೆ ಆಗಿರುವ ಟೆಂಡರ್‌ಗೂ ನಮ್ಮ ಟೆಂಡರ್‌ಗೂ ಬಹಳ ವ್ಯತ್ಯಾಸವಿದೆ. ನಮ್ಮಲ್ಲಿ 700-800 ಕೋಟಿ ರುಪಾಯಿ ಪ್ರತಿ ಕಿ.ಮೀ.ಗೆ ವೆಚ್ಚವಾಗಲಿದ್ದು, ಬೇರೆ ರಾಜ್ಯಗಳಲ್ಲಿ 1300-1400 ಕೋಟಿ ವೆಚ್ಚವಾಗಿದೆ ಎಂದು ವಿವರಿಸಿದರು.

Dk Shivakumar
ಡಿ.ಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆಯವರಂತೆ ನಮಗೂ ಮಂತ್ರಿ ಪದವಿ ನೀಡಿ: ಶಾಸಕ ಇಕ್ಬಾಲ್ ಹುಸೇನ್

ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಭೂಮಿ ಯೋಜನೆ ತಂದು ಪಹಣಿಗಳನ್ನು ಸರಿಪಡಿಸುವ ಯೋಜನೆ ಮಾಡಿದೆವು. ನಗರ ಪ್ರದೇಶದಲ್ಲಿ ಇದನ್ನು ಮಾಡಲು ಆಗಿರಲಿಲ್ಲ. ನಾನು ಅಧಿಕಾರ ವಹಿಸಿಕೊಂಡ ಬಳಿಕ ನೋಡಿದಾಗ ಬಿಡಿಎ ಹಾಗೂ ಪಾಲಿಕೆಗಳಲ್ಲಿ ದಾಖಲೆ ತಿದ್ದುವುದೇ ಕೆಲಸವಾಗಿದೆ. ಇದರಲ್ಲಿ ರಾಜಕೀಯದವರು, ಅಧಿಕಾರಿಗಳು ಸೇರಿಕೊಂಡಿದ್ದಾರೆ. ಹೀಗಾಗಿ ಆಸ್ತಿ ದಾಖಲೆ ಡಿಜಿಟಲ್ ಗೊಳಿಸಲು ಕೋಟ್ಯಂತರ ಪುಟಗಳ ದಾಖಲೆಯನ್ನು ಸ್ಕ್ಯಾನ್ ಮಾಡಿಸಲಾಗಿದೆ. ಇದಕ್ಕಾಗಿ ಇ ಖಾತೆ ತಂದಿದ್ದೇವೆ. ತೆರಿಗೆ ಸೋರಿಕೆ ತಡೆಗಟ್ಟಲು, ವಂಚನೆ ತಪ್ಪಿಸಲು ನಾವು ಆಸ್ತಿ ದಾಖಲೆಗಳಿಗೆ ಆಧಾರ್ ಕಾರ್ಡ್ ಜೋಡಿಸುತ್ತಿದ್ದೇವೆ. ಈ ವಿಚಾರವಾಗಿ ವಿರೋಧ ಪಕ್ಷದವರು ನಮ್ಮನ್ನು ಟೀಕೆ ಮಾಡುತ್ತಿದ್ದಾರೆ. ಮಾಡಲಿ, ಟೀಕೆ ಮಾಡುವುದು ತಪ್ಪಲ್ಲ. ನಾವು ಕೈಗೊಂಡಿರುವ ಕ್ರಮ ನೋಡಿ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ ಎಂದು ತಿಳಿಸಿದ್ದಾರೆ.

25 ಲಕ್ಷ ಆಸ್ತಿಗಳು ಬೆಂಗಳೂರು ನಗರದಲ್ಲಿವೆ. ಅದರಲ್ಲಿ 9 ಲಕ್ಷ ಎ ಖಾತಾಗಳನ್ನು ನೀಡಿದ್ದೇವೆ. ಡ್ರೋನ್ ಸರ್ವೆ ಬಗ್ಗೆ ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದವರ ಸಲಹೆಗಳನ್ನು ಸ್ವೀಕರಿಸಿ, ಡ್ರೋನ್ ಸರ್ವೆಯಲ್ಲಿ ತಪ್ಪಿದ್ದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಅವಕಾಶ ಕಲ್ಪಿಸುತ್ತೇವೆ. ನಾವು ಆಸ್ತಿ ದಾಖಲೆಗಳನ್ನು ಹಾಗೂ ಆ ಜಾಗವನ್ನು ಮಾತ್ರ ಸರಿಪಡಿಸುತ್ತಿದ್ದು, ಅದರಲ್ಲಿ ಕಟ್ಟಿರುವ ಕಟ್ಟಡವನ್ನು ರೆಗ್ಯುಲರೈಸ್ ಮಾಡುತ್ತಿಲ್ಲ. ಇನ್ನು ಈ ಹಿಂದೆ ಮಾಡಿದ ಬಡಾವಣೆಗಳಲ್ಲಿ ರಸ್ತೆ ಜಾಗದ ಪಹಣಿಯಲ್ಲಿ ಹಳೇ ಮಾಲೀಕರ ಹೆಸರು ಇದ್ದವು. ಇದಕ್ಕೆ ಕಾನೂನು ತಂದು ನಗರದ ಎಲ್ಲಾ ರಸ್ತೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರಲಾಗಿದೆ. 1.20 ಲಕ್ಷ ಅರ್ಜಿಗಳು ಬಿಯಿಂದ ಎ ಖಾತಾ ಪರಿವರ್ತನೆಗೆ ಅರ್ಜಿ ಬಂದಿದ್ದು, 60 ಸಾವಿರ ಅರ್ಜಿಗಳು ವಿಲೇವಾರಿಯಾಗಿವೆ. 45 ಸಾವಿರ ವಜಾಗೊಂಡಿದ್ದು, 15 ಸಾವಿರ ಅರ್ಜಿಗಳು ವಿಲೇವಾರಿ ಪ್ರಕ್ರಿಯೆಯಲ್ಲಿವೆ. ಇನ್ನು ವಿರೋಧ ಪಕ್ಷದ ನಾಯಕ ಅಶೋಕ್ ಅವರು ಹೇಳಿದಂತೆ ಕೆಲವು ಅಧಿಕಾರಿಗಳು ಲಂಚ ಪಡೆಯುತ್ತಿರಬಹುದು. ಈ ಬಗ್ಗೆ ಅವರು ಗಮನ ಸೆಳೆದ ತಕ್ಷಣವೇ ನಮ್ಮ ಅಧಿಕಾರಿಗಳು ಪರಿಶೀಲಿಸಲಾಗಿದ್ದು, ಲಂಚ ಪಡೆದ ಅಧಿಕಾರಿಗಳನ್ನು ಈಗಾಗಲೇ ವಜಾಗೊಳಿಸಲಾಗಿದೆ ಎಂದರು.

ಇನ್ನು ಕಟ್ಟಡ ನಕ್ಷೆ ಅನುಮೋದನೆ ವಿಚಾರದಲ್ಲೂ ಸಾರ್ವಜನಿಕರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿತ್ತು. ಹೀಗಾಗಿ 50X80 ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಲಾಗುವ ಕಟ್ಟಡ ನಕ್ಷೆಗಳನ್ನು ನಂಬಿಕೆ ನಕ್ಷೆ ಯೋಜನೆ ಮೂಲಕ ಅಧಿಕೃತ ವಾಸ್ತುಶಿಲ್ಪಿ ಹಾಗೂ ಇಂಜಿನಿಯರ್‌ಗಳಿಂದ ಅನುಮತಿ ನೀಡುವ ವ್ಯವಸ್ಥೆ ತರಲಾಗಿದೆ. ಇದರಿಂದ ಜನರಿಗೆ ವೇಗವಾಗಿ ನಕ್ಷೆ ಅನುಮೋದನೆ ದೊರೆಯುತ್ತಿದೆ. ಇನ್ನು ತೆರಿಗೆ ಬಾಕಿ ಉಳಿಸಿಕೊಂಡಿದ್ದವರಿಗೆ ಒಟಿಎಸ್ ಜಾರಿ ಮಾಡಿ ಅವಕಾಶ ನೀಡಿ ಅವರಿಗೆ ಬಡ್ಡಿ ಮನ್ನಾ ಮಾಡಲಾಗಿದೆ. ಇದರಿಂದ ಬೆಂಗಳೂರಿನಲ್ಲಿ 2.60 ಲಕ್ಷ ಆಸ್ತಿ ಮಾಲೀಕರಿಗೆ ಇದರಿಂದ ಪ್ರಯೋಜನವಾಗಿದೆ. ಟಿಡಿಆರ್ ವಿಚಾರದಲ್ಲೂ ಐತಿಹಾಸಿಕ ನಿರ್ಧಾರ ಮಾಡಿ ನಾವು ಏಕರೂಪತೆ ತಂದಿದ್ದೇವೆ. ಸರ್ಕಾರವೇ ಈ ಟಿಡಿಆರ್ ವಿನಿಮಯ ಮಾಡಿಕೊಳ್ಳಲು ನಾವು ಆಲೋಚಿಸುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com