ಮಹಿಳೆಯರಿಗೆ ಮುಟ್ಟಿನ ರಜೆ: ಸರ್ಕಾರದ ನೀತಿ ವಿರುದ್ಧ ಹೈಕೋರ್ಟ್ ಗೆ 15 ಮಹಿಳೆಯರು ಅರ್ಜಿ; ಕಾರಣವೇನು?

18ರಿಂದ 52 ವರ್ಷದೊಳಗಿನ ಖಾಯಂ, ಗುತ್ತಿಗೆ ಆಧಾರಿತ ಹಾಗೂ ಹೊರಗುತ್ತಿಗೆ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ವೇತನದ ರಜೆ (ವರ್ಷಕ್ಕೆ 12 ದಿನಗಳ ಮಿತಿಯೊಂದಿಗೆ) ನೀಡುವಂತೆ ಕೈಗಾರಿಕಾ ಸಂಸ್ಥೆಗಳಿಗೆ ಕಡ್ಡಾಯ ಮಾಡಲಾಗಿದೆ.
High court
ಹೈಕೋರ್ಟ್
Updated on

ಬೆಂಗಳೂರು: ವಿವಿಧ ಕೈಗಾರಿಕಾ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ 15 ಮಹಿಳೆಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ರಾಜ್ಯದಲ್ಲಿ ಹೆಣ್ಣುಮಕ್ಕಳ ಮಾಸಿಕ ರಜೆ (menstrual leave) ನೀತಿಯ ಕಾನೂನುಬದ್ದತೆಯನ್ನು ಪ್ರಶ್ನಿಸಿದ್ದಾರೆ.

ಅರ್ಜಿದಾರರು ಹೇಳುವಂತೆ, 2025ರ ನವೆಂಬರ್ 20ರಂದು ಹೊರಡಿಸಲಾದ ಸರ್ಕಾರದ ಅಧಿಸೂಚನೆಯ ಪ್ರಕಾರ, 18ರಿಂದ 52 ವರ್ಷದೊಳಗಿನ ಖಾಯಂ, ಗುತ್ತಿಗೆ ಆಧಾರಿತ ಹಾಗೂ ಹೊರಗುತ್ತಿಗೆ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ವೇತನದ ರಜೆ (ವರ್ಷಕ್ಕೆ 12 ದಿನಗಳ ಮಿತಿಯೊಂದಿಗೆ) ನೀಡುವಂತೆ ಕೈಗಾರಿಕಾ ಸಂಸ್ಥೆಗಳಿಗೆ ಕಡ್ಡಾಯ ಮಾಡಲಾಗಿದೆ. ಇದರಿಂದ ಉದ್ಯೋಗದಾರರು ಮಹಿಳೆಯರನ್ನು ನೇಮಕಾತಿ ಅಥವಾ ಉನ್ನತ ಹುದ್ದೆಗಳಿಗೆ ಪ್ರೋತ್ಸಾಹಿಸುವಲ್ಲಿ ಹಿಂಜರಿಯುವ ಸಾಧ್ಯತೆ ಇದೆ ಎಂದು ಅವರು ವಾದಿಸಿದ್ದಾರೆ.

ಈ ನೀತಿ ಮಹಿಳೆಯರ ಗೌಪ್ಯತೆ ಮತ್ತು ಗೌರವ ಹಕ್ಕಿಗೆ ಧಕ್ಕೆಯಾಗುತ್ತದೆ, ಇದು ಸಂವಿಧಾನದ ವಿಧಿ 21ರ ಅಡಿಯಲ್ಲಿ ಬರುವ ಜೀವಿಸುವ ಹಕ್ಕಿನ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ. ಮಾಸಿಕ ಋತುಚಕ್ರದಂತಹ ಖಾಸಗಿ ವಿಷಯವನ್ನು ಉದ್ಯೋಗದಾರರಿಗೆ ತಿಳಿಸಲು ಈ ನೀತಿ ಮಹಿಳೆಯರನ್ನು ಬಲವಂತಪಡಿಸುತ್ತದೆ. ಇದರಿಂದ ಸಾಮಾಜಿಕ ಕಳಂಕ, ಮುಜುಗರಕ್ಕೀಡುಮಾಡುವ ಪ್ರಶ್ನೆಗಳು ಮತ್ತು ವೈಮನಸ್ಯಪೂರ್ಣ ಕೆಲಸದ ವಾತಾವರಣ ಉಂಟಾಗಬಹುದು ಎಂದು ಆರೋಪಿಸಿದ್ದಾರೆ.

ನೀತಿ ಒಳ್ಳೆಯ ಉದ್ದೇಶದಿಂದ ರೂಪಿತವಾದಂತೆ ಕಂಡರೂ, ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಗೆ ಇದು ಹಿನ್ನಡೆಯಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಇದು ಮಹಿಳೆಯರನ್ನು ಸಮಾನ ಪಾಲುದಾರರಾಗಿ ಉದ್ಯೋಗ ಕ್ಷೇತ್ರದಲ್ಲಿ ಒಳಗೊಳ್ಳಲು ನಡೆದ ದಶಕಗಳ ಪ್ರಗತಿಗೆ ಧಕ್ಕೆಯಾಗಿದೆ ಎಂದು ಅವರು ವಾದಿಸಿದ್ದಾರೆ.

High court
ಕಡ್ಡಾಯ ಮುಟ್ಟಿನ ರಜೆ: 'ಹೀಗಾದ್ರೆ.. ಯಾವುದೇ ಕಂಪನಿಗಳೂ ಮಹಿಳೆಯರನ್ನ ಕೆಲಸಕ್ಕೆ ಸೇರಿಸಿಕೊಳ್ಳಲ್ಲ'; ಬೇಡಿಕೆ ತಿರಸ್ಕರಿಸಿದ Supreme Court

ಇದೇ ವೇಳೆ, ಈ ಕ್ರಮವು ಸಂವಿಧಾನದ ವಿಧಿಗಳು 14, 15, 16 ಮತ್ತು 21ಕ್ಕೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಮಹಿಳೆಯರಿಗೆ ಮಾತ್ರ ಈ ವಿಶೇಷ ರಜೆ ನೀಡುವ ಮೂಲಕ ಮಾಡಲಾದ ವರ್ಗೀಕರಣವು ಕಾರ್ಯಸ್ಥಳ ಸಮಾನತೆಯನ್ನು ಸಾಧಿಸುವ ಉದ್ದೇಶಕ್ಕೆ ಹೊಂದಿಕೆಯಾಗುವುದಿಲ್ಲ. ಬದಲಾಗಿ, ಮಹಿಳೆಯರು ದೈಹಿಕವಾಗಿ ದುರ್ಬಲರು ಎಂಬ ಸಾರ್ವಜನಿಕ ಅಭಿಪ್ರಾಯವನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

ಈ ಅಧಿಸೂಚನೆ ಮಹಿಳೆಯರನ್ನು ವಿಶೇಷ ಜೈವಿಕ ಪ್ರಕ್ರಿಯೆಯ ಆಧಾರದ ಮೇಲೆ ಗುರುತಿಸಿ ರಜೆ ಕಡ್ಡಾಯಗೊಳಿಸುವುದರಿಂದ, ಅವರು ಕೆಲಸದ ಸ್ಥಳದಲ್ಲಿ ಅಸಮರ್ಥರು ಅಥವಾ ಹೆಚ್ಚು ಗೈರುಹಾಜರಾಗುವವರು ಎಂಬ ಅಭಿಪ್ರಾಯ ಮೂಡಿಸುತ್ತದೆ. ಇದರಿಂದ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯರ ಅವಕಾಶಗಳು ಹಾನಿಗೊಳಗಾಗುತ್ತವೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಈ ನೀತಿ ‘ದಯಾಳು ಲಿಂಗಭೇದ’ (benevolent sexism) ಎಂಬುದಕ್ಕೆ ಉದಾಹರಣೆಯಾಗಿದ್ದು, ರಕ್ಷಣೆಯ ಹೆಸರಿನಲ್ಲಿ ಲಿಂಗ ರೂಢಿಕಲ್ಪನೆಯನ್ನು ಮುಂದುವರಿಸುತ್ತದೆ ಮತ್ತು ಪಿತೃತ್ವ ಮನೋಭಾವವನ್ನು ಬಲಪಡಿಸುತ್ತದೆ ಎಂದು ಅವರು ವಾದಿಸಿದ್ದಾರೆ. ಮಹಿಳೆಯರು ಮಾಸಿಕದ ಸಮಯದಲ್ಲಿ ಕೆಲಸ ಮಾಡಲು ಅಸಮರ್ಥರಾಗುತ್ತಾರೆ ಎಂಬ ಹಳೆಯ ಕಲ್ಪನೆಯ ಆಧಾರದ ಮೇಲೆ ಈ ನೀತಿಯನ್ನು ಪರಿಚಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ನೌಕರರ ಅಸೋಸಿಯೇಶನ್ ಮತ್ತು ಬೆಂಗಳೂರು ಹೊಟೇಲ್ಸ್ ಅಸೋಸಿಯೇಶನ್ ಸಲ್ಲಿಸಿದ ಎರಡು ಪ್ರತ್ಯೇಕ ಅರ್ಜಿಗಳು ಈಗಾಗಲೇ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com