

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಬರುವ ಮತ್ತು 72 ವಾರ್ಡ್‌ಗಳನ್ನು ಒಳಗೊಂಡಿರುವ ಬೆಂಗಳೂರು ಉತ್ತರ ನಗರ ಪಾಲಿಕೆ(BNCC)ಯ ಬಜೆಟ್ ಅನ್ನು ಶನಿವಾರ ಮಂಡಿಸಲಾಗಿದ್ದು, ಒಟ್ಟು 4,344 ಕೋಟಿ ರೂ.ಗಳ ಬಜೆಟ್ ನಲ್ಲಿ ಮೂಲಸೌಕರ್ಯ, ಘನತ್ಯಾಜ್ಯ ನಿರ್ವಹಣೆ, ಪರಿಸರ ನಿರ್ವಹಣೆ, ಹವಾಮಾನ ಕ್ರಮ ಮತ್ತು ಕೆರೆ ಪುನರುಜ್ಜೀವನಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ಇಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಡಳಿತಗಾರರಾದ ಮಹೇಶ್ವರ್‌ರಾವ್ ಅಧ್ಯಕ್ಷತೆಯಲ್ಲಿ, ಯಲಹಂಕ ಎನ್.ಇ.ಎಸ್ ಬಳಿಯಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ 2026-27ನೇ ಸಾಲಿನ ಚೊಚ್ಚಲ ಬಜೆಟ್ ಅನ್ನು ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಮಂಡಿಸಿದರು.
ಈ ಬಜೆಟ್ ನಲ್ಲಿ ಆಸ್ತಿ ತೆರಿಗೆ ಮತ್ತು ಇತರ ಮೂಲಗಳಿಂದ 826.25 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ತೆರಿಗೆಯೇತರ ಆದಾಯ ಮತ್ತು ನಗರ ಯೋಜನಾ ಅನುಮೋದನೆಗಳು ಇದಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುವ ನಿರೀಕ್ಷೆಯಿದೆ.
ಕಟ್ಟಡ ಅನುಮೋದನೆ, ಅಭಿವೃದ್ಧಿ ಶುಲ್ಕಗಳು ಮತ್ತು ಸಂಬಂಧಿತ ಮೂಲಗಳಿಂದ 817.37 ಕೋಟಿ ರೂ. ಆದಾಯ ಬರಬಹುದೆಂದು ಅಂದಾಜಿಸಲಾಗಿದೆ. ಎ-ಖಾತಾ ಪರಿವರ್ತನೆ ಮತ್ತು ಜಾಹೀರಾತು ನೀತಿಗಳ ಮೂಲಕ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
ವೆಚ್ಚದ ಪ್ರಮುಖ ಪಾಲನ್ನು - ಶೇ. 61ಕ್ಕಿಂತ ಹೆಚ್ಚು ರಸ್ತೆಗಳು, ಚರಂಡಿಗಳು ಮತ್ತು ಮೂಲಸೌಕರ್ಯ ಯೋಜನೆಗಳು ಸೇರಿದಂತೆ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗಿದೆ. ರಾಜ್ಯ ಯೋಜನೆಗಳ ಅಡಿಯಲ್ಲಿ ಮೂಲಸೌಕರ್ಯ ಯೋಜನೆಗಳಿಗೆ 935.56 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಕ್ಷೇತ್ರ ಮಟ್ಟದ ಅಭಿವೃದ್ಧಿಗೆ 120 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ರಸ್ತೆ ವಿಸ್ತರಣೆ, ಪಾದಚಾರಿ ಮಾರ್ಗ ಮತ್ತು ಮಳೆನೀರು ಚರಂಡಿ ದುರಸ್ತಿಗೆ ಆದ್ಯತೆ ನೀಡಲಾಗಿದೆ.
ಗಮನಾರ್ಹ ವಿಚಾರವೆಂದರೆ 72 ವಾರ್ಡ್ ಗಳಿಗೆ ಪ್ರತಿ ವಾರ್ಡ್‌ಗೆ 25 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿದ್ದು, ಪಾದಚಾರಿ ಮಾರ್ಗ ದುರಸ್ತಿ ಮತ್ತು ಪುನರ್ನಿರ್ಮಾಣಕ್ಕಾಗಿ ಒಟ್ಟು 18 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
ಬಜೆಟ್ ನೈರ್ಮಲ್ಯ ಮತ್ತು ಪರಿಸರ ನಿರ್ವಹಣೆಗೆ ಒತ್ತು ನೀಡುತ್ತದೆ. ಘನತ್ಯಾಜ್ಯ ನಿರ್ವಹಣೆ, ಡಂಪಿಂಗ್ ಅನ್ನು ತಡೆಯಲು ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಯಾಂತ್ರಿಕೃತ ಶುಚಿಗೊಳಿಸುವ ವ್ಯವಸ್ಥೆಗಳಿಗೆ ಹೆಚ್ಚು ಹಣ ಹಂಚಿಕೆ ಮಾಡಲಾಗಿದೆ. ಮರ ನೆಡುವಿಕೆ ಮತ್ತು ಸಂರಕ್ಷಣೆ ಸೇರಿದಂತೆ ನಗರ ಅರಣ್ಯ ಉಪಕ್ರಮಗಳಿಗೆ 10 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ನೀಡಲಾಗಿದೆ.
ಆರೋಗ್ಯ ಕ್ಷೇತ್ರಕ್ಕೂ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು, 1ಸರ್ವಜ್ಞನಗರ, ಬ್ಯಾಟರಾಯನಪುರದಲ್ಲಿ100 ಹಾಸಿಗೆ ಆಸ್ಪತ್ರೆಗಳು ಮತ್ತು ಉಚಿತ ಡಯಾಲಿಸಿಸ್ ಸೇವೆಗಳ ವಿಸ್ತರಣೆ ಮಾಡಲಾಗಿದೆ. ಡಿ.ಜೆ ಹಳ್ಳಿ, ಮುನಿರೆಡ್ಡಿಪಾಳ್ಯ ಆಸ್ಪತ್ರೆಗಳ ಮೇಲ್ದರ್ಜೆಗೇರಿಕೆ ಮಾಡಲಾಗಿದೆ.
ಇನ್ನೂ ಇಂದಿರಾ ಕ್ಯಾಂಟೀನ್‌ಗಳಿಗೆ 11.15 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
Advertisement