

ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 993 ರೂಪಾಯಿಗಳಷ್ಟು ಹೆಚ್ಚಾಗಿದ್ದು, ದರದಲ್ಲಿ ಭಾರೀ ಏರಿಕೆಯ ಹಿನ್ನೆಲೆಯಲ್ಲಿ, ಮೆಟ್ರೊ ಸಿಟಿ ಬೆಂಗಳೂರಿನ ಹೊಟೇಲ್ ಗಳು ಆಹಾರ ದರಗಳನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದರಿಂದ, ಗ್ರಾಹಕರ ಜೇಬಿಗೆ ಹೆಚ್ಚಿನ ಭಾರ ಬೀಳಲಿದೆ.
ಈ ಬೆಲೆ ಹೆಚ್ಚಳ ಪರಿಣಾಮವಾಗಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವು ಈ ತಿಂಗಳ ಆರಂಭದಲ್ಲಿ 2,162 ಇದ್ದದ್ದು ಈಗ 3,152 ರೂಪಾಯಿಗೆ ಏರಿಕೆಯಾಗಿದೆ. ಕೆಲವೇ ತಿಂಗಳುಗಳ ಹಿಂದೆ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,844 ರೂಪಾಯಿ ಇದ್ದಿದ್ದು, ಈಗ ಬೆಲೆ ಹೆಚ್ಚಳ ಹೊಟೇಲ್ ಮಾಲೀಕರಲ್ಲಿ ಆತಂಕ ಉಂಟಾಗಿದೆ.
ಬೃಹತ್ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ. ರಾವ್, ಎಲ್‌ಪಿಜಿ ದರ ಏರಿಕೆ ಸಣ್ಣ ಮತ್ತು ಮಧ್ಯಮ ಗಾತ್ರದ ಹೊಟೇಲ್ ಮಾಲೀಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿದರು. ಕಡಿಮೆ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯಮ ಮತ್ತು ಸಣ್ಣ ಗಾತ್ರದ ಹೊಟೇಲ್ ಗಳು, ದಿನಗೂಲಿ ಕಾರ್ಮಿಕರು, ಆಟೋ ಚಾಲಕರು ಮತ್ತು ಮಧ್ಯಮ ವರ್ಗದ ಗ್ರಾಹಕರಿಗೆ ಸೇವೆ ನೀಡುವುದು ಹೆಚ್ಚು ಎಂದರು.
ಸ್ಟಾರ್ ಹೊಟೇಲ್ ಗಳಿಗೆ ಹೋಲಿಸಿದರೆ, ಇಂತಹ ಸಣ್ಣ ಹೊಟೇಲ್ ಗಳು ಕಾರ್ಯಾಚರಣಾ ವೆಚ್ಚದ ಏರಿಕೆಯನ್ನು ಸಹಿಸಿಕೊಳ್ಳಲು ಹೆಚ್ಚಿನ ಸಾಮರ್ಥ್ಯ ಹೊಂದಿಲ್ಲ. ಹೀಗೆ ಏಕಾಏಕಿ ಸಿಲಿಂಡರ್ ದರ ಏರಿಕೆಯನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಇಂಧನ ವೆಚ್ಚದಲ್ಲಿ ಭಾರೀ ಏರಿಕೆ ಸಂಭವಿಸಿರುವುದರಿಂದ, ಆಹಾರ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರವು ಸ್ವಚ್ಛ ಮತ್ತು ಕೈಗೆಟುಕುವ ಆಹಾರ ನೀಡುವ ಹೊಟೇಲ್ ಗಳಿಗೆ ಖ್ಯಾತಿ ಪಡೆದಿದೆ. ಆದರೆ, ಎಲ್‌ಪಿಜಿ ಮತ್ತು ವಿದ್ಯುತ್ ದರ ಏರಿಕೆಯಿಂದ ಈ ಮಾನದಂಡವನ್ನು ಕಾಪಾಡಿಕೊಳ್ಳುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ಹೊಟೇಲ್ ಗಳು ನಷ್ಟವನ್ನು ನಿರಂತರವಾಗಿ ಹೊರುವ ಸಾಧ್ಯತೆ ಇಲ್ಲದ ಕಾರಣ, ಇದರ ಭಾರ ಅಂತಿಮವಾಗಿ ಗ್ರಾಹಕರ ಮೇಲೆಯೇ ಬೀಳುತ್ತದೆ ಎಂದು ಪಿ ಸಿ ರಾವ್ ಎಚ್ಚರಿಸಿದರು.
ಬೇರೆ ಆಯ್ಕೆಗಳಿಲ್ಲ
ಅಸೋಸಿಯೇಷನ್ ಕೇಂದ್ರ ಸರ್ಕಾರವನ್ನು ವಾಣಿಜ್ಯ ಎಲ್‌ಪಿಜಿಯ ಮೇಲಿನ ಜಿಎಸ್ಟಿಯನ್ನು 18 ಶೇಕಡಾದಿಂದ 5 ಶೇಕಡಾಕ್ಕೆ ಇಳಿಸಲು, ಗೃಹ ಬಳಕೆಯ ಎಲ್‌ಪಿಜಿಯಂತೆ, ಹಾಗೂ ದರಗಳನ್ನು ಸಮನ್ವಯಗೊಳಿಸಲು ಮನವಿ ಮಾಡಿದೆ. ಇದರಿಂದ ಹೊಟೇಲ್ ಉದ್ಯಮ ಕ್ಷೇತ್ರಕ್ಕೆ ನೆರವು ದೊರೆಯುತ್ತದೆ ಎಂದು ಹೇಳಿದರು. ಹೊಟೇಲ್ ಗಳು ಎಲ್‌ಪಿಜಿಯ ಅವಲಂಬನೆಯನ್ನು ಕಡಿಮೆ ಮಾಡಲು ಪಿಎನ್‌ಜಿ, ಸೌದೆ ಹಾಗೂ ಬಯೋಗ್ಯಾಸ್ ಪರ್ಯಾಯಗಳನ್ನೂ ಪರಿಶೀಲಿಸುತ್ತಿವೆ.
ಕರ್ನಾಟಕ ರಾಜ್ಯ ಹೊಟೇಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಎಲ್‌ಪಿಜಿ ದರ ಏರಿಕೆಯ ಕಾರಣದಿಂದ ಹೊಟೇಲ್ ಗಳಿಗೆ ದರ ಪರಿಷ್ಕರಣೆ ಮಾಡುವುದನ್ನು ಹೊರತುಪಡಿಸಿ ಬೇರೆ ಮಾರ್ಗವಿಲ್ಲ ಎಂದು ಹೇಳಿದರು. ಆದರೆ, ಈ ಹೊರೆಯನ್ನು ಸಂಪೂರ್ಣವಾಗಿ ಗ್ರಾಹಕರ ಮೇಲೆ ಹಾಕಲು ಸಾಧ್ಯವಿಲ್ಲ, ಏಕೆಂದರೆ ಹಲವರು ಪ್ರತಿದಿನದ ಊಟಕ್ಕಾಗಿ ಹೊಟೇಲ್ ಮೇಲೆ ಅವಲಂಬಿತರಿದ್ದಾರೆ ಎಂದು ಹೇಳಿದರು.
ಸಾಮಾನ್ಯ ಜನರು ಹೆಚ್ಚು ಸೇವಿಸುವ ಇಡ್ಲಿ, ವಡೆ, ದೋಸೆ, ಅನ್ನ ಮತ್ತು ಸಾಂಬಾರ್ ನಂತಹ ಪ್ರಮುಖ ಆಹಾರ ಪದಾರ್ಥಗಳ ದರದಲ್ಲಿ ಭಾರೀ ಏರಿಕೆ ಆಗಬಾರದು. ಹೊಟೇಲ್ ಗಳು ಈಗ ಯಾವ ಮೆನು ಐಟಂಗಳ ದರವನ್ನು ಹೆಚ್ಚಿಸಬಹುದು ಎಂದು ಪರಿಶೀಲಿಸುತ್ತಿದ್ದು, ಅಗತ್ಯ ಆಹಾರವು ಕೈಗೆಟುಕುವಂತೆ ಉಳಿಯಲು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.
ಎಲ್‌ಪಿಜಿ ವೆಚ್ಚ ಏರಿಕೆಯನ್ನು ಎದುರಿಸಲು ಅನೇಕ ಹೊಟೇಲ್ ಗಳು ಈಗ ಸೌದೆಯನ್ನು ಸಂಗ್ರಹಿಸಿ ಪರ್ಯಾಯವಾಗಿ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.
Advertisement