

ಬೆಂಗಳೂರು: NEET-UG 2026 ಪೇಪರ್ ಲೀಕ್ ನಲ್ಲಿ ಆರ್‌ಎಸ್‌ಎಸ್, ಬಿಜೆಪಿ ಕೈವಾಡವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ಬಹಳ ದೊಡ್ಡ ದುರಂತ. ಇದರಲ್ಲಿ ಬಿಜೆಪಿ, ಆರ್‌ಎಸ್‌ಎಸ್ ನವರು ಇದ್ದಾರೆ. ಅವರಿಗೆ ಇದರ ಪಾಲು ಹೋಗ್ತಿದೆ ಎಂದು ಆರೋಪಿಸಿದರು. ಅಕ್ರಮ ಪೇಪರ್ ಲೀಕ್ ವಿಚಾರದಲ್ಲಿ ಯಾಕೆ ಇನ್ನೂ ಒಬ್ಬರೂ ರಾಜೀನಾಮೆ ಕೊಡ್ತಿಲ್ಲ? ಹಗಲಿರುಳು ಓದಿದ ಮಕ್ಕಳ ಭವಿಷ್ಯ ಏನಾಗಬೇಕು? ಎಂದು ಪ್ರಶ್ನಿಸಿದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದರು.
ಝೆನ್-ಝೀ ಅಂತಾ ಮೋದಿ ಹೇಳ್ತಾರೆ, ಪರೀಕ್ಷೆ ಮೇಲೆ ಚರ್ಚೆ ಮಾಡ್ತಾರೆ. ಈಗ, ನೀಟ್ ಬಗ್ಗೆ ಚರ್ಚೆ ಯಾವಾಗ ಮಾಡ್ತಾರೆ ಮೋದಿ? ದತ್ತಾತ್ರೇಯ ಹೊಸಬಾಳೆ ಈಗ ಎಲ್ಲಿದ್ದಾರೆ? ಆರ್‌ಎಸ್‌ಎಸ್ ನವರು, ಪ್ರಚಾರಕರು ಮಕ್ಕಳ ಭವಿಷ್ಯ ಹಾಳು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ ʻಎಸ್‌ಐಆರ್ʼ ಅನ್ನೋದು ಬಿಜೆಪಿ ಗೆಲ್ಲಿಲಿಸಲೆಂದೇ ಮಾಡಿರುವ ಡಿಸೈನ್. ಹೊಸ ರೂಲ್ಸ್ ತಂದು ತಯಾರನ್ನ ಬೇಕಿದ್ರೂ ಮತದಾರರ ಪಟ್ಟಿಯಿಂದ ತೆಗೆಯಬಹುದು. ಇದು ಸಂಪೂರ್ಣ ಅಸಾಂವಿಧಾನಿಕ. ಹಾಗೆಂದ ಮಾತ್ರಕ್ಕೆ ಸರ್ ಮಾಡಬೇಡಿ ಅನ್ನುತ್ತಿಲ್ಲ. ಆದ್ರೆ ಸರಿಯಾದ ರೀತಿಯಲ್ಲಿ ಮಾಡಿ ಎಂದು ಒತ್ತಾಯಿಸಿದ್ದಾರೆ.
ಒಬ್ಬ ನಾಗರೀಕನಿಗೂ ತೊಂದರೆಯಾಗದಂತೆ ಸಂವಿಧಾನದ ಹಕ್ಕನ್ನ ಕೊಡಬೇಕು. ಉದಾಹರಣೆ ನನ್ನ ಹೆಸರು ಪ್ರಿಯಾಂಕ್ ಈ ಹೆಸರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ವೋಟ್ ಡಿಲೀಟ್ ಆಗಲಿದೆ. ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಯ ಹೆಸರನ್ನೇ ವೋಟರ್ ಲಿಸ್ಟ್ ನಿಂದ ತೆಗೆದಿದ್ದಾರೆ. ಇನ್ನೊಬ್ಬರು 17 ವರ್ಷ ಡಿಪ್ಲೊಮೆಟಿಕ್ ಪಾಸ್ ಪೋರ್ಟ್ ಹೋಲ್ಡರ್ ಅವರನ್ನ ಲಿಸ್ಟ್ ನಿಂದ ತೆಗೆದಿದ್ದಾರೆ. ಮಹಾರಾಷ್ಟ್ರದಲ್ಲಿ ವೈಸ್ ಅಡ್ಮಿರಲ್ ಅವರ ವೋಟ್ ಡಿಲೀಟ್ ಆಗಿದೆ. ಬಹುತೇಕ ಜನರನ್ನ ವೋಟ್ ನಿಂದ ದೂರ ಇಟ್ಟಿದ್ದಾರೆ. ಇದು ಕೇವಲ ಮುಸ್ಲೀಮರ ವಿಷಯವಲ್ಲ, ಎಲ್ಲ ವರ್ಗಕ್ಕೂ ಎಸ್ಐಆರ್ ತೊಂದರೆ ಮಾಡುತ್ತಿದೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕರಿಂದ ಮೆಟ್ರೋ ಪ್ರಯಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇದೆಲ್ಲ ಅವರ ಬರೀ ನಾಟಕ. ದಿನ ಮೆಟ್ರೋ ಹತ್ತಿದ್ರೆ ನಾವೂ ಒಪ್ತೀವಿ. ಸುಮ್ಮನೆ ಇದೆಲ್ಲ ಒಂದು ದಿನದ ನಾಟಕ ಅಷ್ಟೇ ಬಿಜೆಪಿಯವರದ್ದು. ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು. ಪ್ರತಿದಿನ ಬಿಎಂಟಿಸಿ ಬಸ್ ಹತ್ತಲಿ ಅವರು ಎಂದು ಸವಾಲು ಹಾಕಿದರು.
Advertisement