ದುಬಾರಿ ದುನಿಯಾ: ಮೇ.20ರಿಂದ ಖಾಸಗಿ ಬಸ್ ದರ ಶೇ.20ರಷ್ಟು ಹೆಚ್ಚಳ, ಪ್ರಯಾಣಿಕರ ಜೇಬಿಗೆ ಕತ್ತರಿ

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ನೀಡಲಾಗುವ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್‌ (AITP) ಹೊಂದಿರುವ ಸಂಚಾಲಕರೇ ದರ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.
Private bus fare hike
ಖಾಸಗಿ ಬಸ್ ದರ ಏರಿಕೆ
Updated on

ಬೆಂಗಳೂರು: ಡೀಸೆಲ್ ಬೆಲೆ ಏರಿಕೆಯ ಹಿನ್ನೆಲೆ ಕರ್ನಾಟಕದ ಖಾಸಗಿ ಬಸ್ ಸಂಚಾಲಕರು ಮೇ 20ರಿಂದ ಪ್ರಯಾಣ ದರವನ್ನು 10 ರಿಂದ 20 ಶೇಕಡಾ ಹೆಚ್ಚಿಸಲು ಸಿದ್ಧರಾಗಿದ್ದಾರೆ. ಕೆಲ ಸಂಚಾಲಕರು ಈಗಾಗಲೇ ಪರಿಷ್ಕೃತ ದರಗಳನ್ನು ಜಾರಿಗೊಳಿಸಿದ್ದಾರೆ. ಉದಾಹರಣೆಗೆ, ಜನಪ್ರಿಯ ಬುಕ್ಕಿಂಗ್ ವೆಬ್‌ಸೈಟ್‌ನಲ್ಲಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ 899 ರೂಪಾಯಿ ದರವು 1,100 ರೂಪಾಯಿಯಿಂದ 1,200 ರೂಪಾಯಿಗೆ ಏರಿಕೆಯಾಗಿದೆ. ಆದರೆ, ಈ ದರ ಏರಿಕೆ ಈ ವಾರದ ಕೊನೆಯೊಳಗೆ ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿಗೆ ಬರಲಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ನೀಡಲಾಗುವ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್‌ (AITP) ಹೊಂದಿರುವ ಸಂಚಾಲಕರೇ ದರ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು. ರಾಜ್ಯ ಸಾರಿಗೆ ಇಲಾಖೆಯ ಅಧೀನದಲ್ಲಿರುವ ಸ್ಟೇಜ್ ಕ್ಯಾರೇಜ್ ಪರ್ಮಿಟ್ ಹೊಂದಿರುವವರು ದರ ಹೆಚ್ಚಿಸಲು ಸಾಧ್ಯವಿಲ್ಲ ಎಂದರು.

ಸ್ಟೇಜ್ ಕ್ಯಾರೇಜ್ ಪರ್ಮಿಟ್ ಹೊಂದಿರುವವರಿಗೆ ದರ ಹೆಚ್ಚಿಸಲು ನಾವು ಅವಕಾಶ ನೀಡುವುದಿಲ್ಲ. ನಾವು ಅವರ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರವು ಎಐಟಿಪಿ ಸಂಚಾಲಕರನ್ನು ನಿಯಂತ್ರಿಸಬೇಕು ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಸರ್ಕಾರಿ ಬಸ್ ದರ ಹೆಚ್ಚಳ ಇಲ್ಲ

ಸರ್ಕಾರಿ ಬಸ್ ದರಗಳನ್ನು ಹೆಚ್ಚಿಸುವುದಿಲ್ಲ. ನಾವು ನಷ್ಟ ಅನುಭವಿಸಬೇಕಾದರೂ ಜನರ ಮೇಲೆ ಭಾರ ಹಾಕುವುದಿಲ್ಲ ಎಂದರು.

ಕರ್ನಾಟಕ ರಾಜ್ಯ ಖಾಸಗಿ ಬಸ್ ಸಂಘಗಳ ಒಕ್ಕೂಟ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಹಳೆಯ ದರ ವ್ಯವಸ್ಥೆಯಲ್ಲಿ ಬಸ್ ನಿರ್ವಹಣೆ ಮತ್ತು ಕಾರ್ಯಾಚರಣೆ ಈಗ ಆರ್ಥಿಕವಾಗಿ ಸಾಧ್ಯವಿಲ್ಲ ಎಂದು ತಿಳಿಸಿದೆ.

ಕರ್ನಾಟಕ ರಾಜ್ಯ ಬಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಟಿ.ಜಿ. ಚಂದ್ರಶೇಖರ್, ಮುಂದಿನ ದಿನಗಳ ಮಾರುಕಟ್ಟೆ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

300ರಿಂದ 400 ಕಿಮೀ ಪ್ರಯಾಣಗಳಿಗೆ 150 ರಿಂದ 200 ರೂಪಾಯಿ ಹೆಚ್ಚಿಸಲು ನಾವು ತೀರ್ಮಾನಿಸಿದ್ದೇವೆ. ಮುಂದಿನ ವಾರವೂ ಡೀಸೆಲ್ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಹೆಚ್ಚು ಇದೆ. ಆದ್ದರಿಂದ ಟಿಕೆಟ್ ದರಗಳನ್ನು ಅದಕ್ಕೆ ಅನುಗುಣವಾಗಿ ಹೊಂದಿಸಬೇಕಾಗಿದೆ ಎಂದು ಶೇಖರ್ ಹೇಳಿದರು.

ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘದ (KSBOA) ಅಧ್ಯಕ್ಷ ಎಸ್. ನಟರಾಜ್ ಶರ್ಮ, ಸಮಸ್ಯೆ ಕೇವಲ ಇಂಧನ ಬೆಲೆ ಏರಿಕೆಗೆ ಮಾತ್ರ ಸೀಮಿತವಲ್ಲ ಎಂದು ಹೇಳಿದರು. ನಿಯಂತ್ರಣ ಸಂಸ್ಥೆಗಳಿಂದ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವೆಚ್ಚಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ ಎಂದು ಅವರು ಹೇಳಿದರು.

ದರ ಏರಿಕೆ ಕೇವಲ ಡೀಸೆಲ್ ಬೆಲೆ ಏರಿಕೆಯಿಂದಲ್ಲ. ಇತ್ತೀಚಿನ 5 ಶೇಕಡಾ ಟೋಲ್ ಶುಲ್ಕ ಏರಿಕೆ ನಮ್ಮ ಲಾಭಾಂಶಕ್ಕೆ ಹೊಡೆತ ನೀಡುತ್ತಿದೆ. ಜೊತೆಗೆ 1 ಲಕ್ಷ ರೂಪಾಯಿಗಳಿಂದ1.9 ಲಕ್ಷ ರೂಪಾಯಿಗಳವರೆಗೆ ತ್ರೈಮಾಸಿಕ ರಸ್ತೆ ತೆರಿಗೆ ಪಾವತಿಸುತ್ತಿದ್ದೇವೆ. ಆದರೂ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಸಡಿಲಿಕೆ ಅಥವಾ ಅನುದಾನ ಸಿಕ್ಕಿಲ್ಲ ಎಂದು ಹೇಳಿದರು.

ಖಾಸಗಿ ಸಾರಿಗೆ ಕ್ಷೇತ್ರವು ಹೆಚ್ಚುತ್ತಿರುವ ವೆಚ್ಚ ಮತ್ತು ಸ್ಪರ್ಧಾತ್ಮಕ ಒತ್ತಡಗಳಿಂದ ನಿಧಾನವಾಗಿ ನಶಿಸಿ ಹೋಗುವ ಸ್ಥಿತಿಯಲ್ಲಿದೆ ಎಂದು ಶರ್ಮ ವಿವರಿಸಿದರು. ಪ್ರತಿ ದೂರ ಪ್ರಯಾಣದ ಬಸ್‌ಗೆ ಒಂದೇ ಟ್ರಿಪ್‌ಗೆ ಸುಮಾರು 150 ಲೀಟರ್ ಡೀಸೆಲ್ ಅಗತ್ಯವಿರುತ್ತದೆ. ಡೀಸೆಲ್ ದರದಲ್ಲಿ 3 ರೂಪಾಯಿ ಏರಿಕೆಯಿಂದ ಪ್ರತಿ ಟ್ರಿಪ್‌ಗೆ ಹೆಚ್ಚುವರಿ 450 ರೂಪಾಯಿಗಳಿಂದ 1 ಸಾವಿರ ರೂಪಾಯಿ ವೆಚ್ಚವಾಗುತ್ತಿದೆ.

ಜಾಗತಿಕ ಸರಬರಾಜು ಸಮಸ್ಯೆಗಳ ಕಾರಣದಿಂದ ಅನೇಕ ಖಾಸಗಿ ಪೆಟ್ರೋಲ್ ಬಂಕ್‌ಗಳು ಮುಚ್ಚಲ್ಪಟ್ಟಿರುವುದರಿಂದ, ಬಸ್ ಮಾಲೀಕರು ಹಿಂದೆ ಪಡೆಯುತ್ತಿದ್ದ ಪ್ರತಿ ಲೀಟರ್‌ಗೆ 1 ರೂಪಾಯಿ ಕಾರ್ಪೊರೇಟ್ ರಿಯಾಯಿತಿಯನ್ನು ಕಳೆದುಕೊಂಡಿದ್ದಾರೆ. ಈಗ ಕೆಲವು ಖಾಸಗಿ ರಿಟೇಲ್ ಪಂಪ್‌ಗಳಲ್ಲಿ ಇಂಧನ ಖರೀದಿಸಲು ಸರ್ಕಾರದ ಬಂಕ್‌ಗಳಿಗಿಂತ 5 ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತಿದೆ.

ಸಂಘದ ಪ್ರತಿನಿಧಿಗಳ ಪ್ರಕಾರ, ಶಕ್ತಿ ಯೋಜನೆಯ ಪರಿಣಾಮವಾಗಿ ಮಧ್ಯಮ ಮಟ್ಟದ ಸಂಚಾಲಕರೇ ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಈ ದರ ಏರಿಕೆ ಪ್ರಯಾಣಿಕರ ಮೇಲೂ ಭಾರೀ ಪರಿಣಾಮ ಬೀರುತ್ತದೆ.

ದೂರ ಪ್ರಯಾಣಕ್ಕೆ 20 ಶೇಕಡಾ ದರ ಏರಿಕೆ ನಮ್ಮಂತಹ ಕುಟುಂಬಗಳಿಗೆ ದೊಡ್ಡ ಹೊಡೆತ ಎಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಹುಬ್ಬಳ್ಳಿಯ ನಿವಾಸಿ ಕೆ. ಅಥಣಿ ಹೇಳಿದರು. ನಾನು ತಿಂಗಳಿಗೆ ಎರಡು ಬಾರಿ ತಂದೆ-ತಾಯಿಯನ್ನು ಭೇಟಿಯಾಗಲು ಊರಿಗೆ ಹೋಗುತ್ತೇನೆ. ವಾರಾಂತ್ಯದಲ್ಲಿ ಈಗಾಗಲೇ AC ಸ್ಲೀಪರ್ ಟಿಕೆಟ್ 1,200 ರೂಪಾಯಿ ತಲುಪುತ್ತಿದೆ. ಅದಕ್ಕೆ ಇನ್ನೂ 200-300 ರೂಪಾಯಿ ಹೆಚ್ಚಾದರೆ ನನ್ನ ಪ್ರಯಾಣಗಳನ್ನು ಕಡಿಮೆ ಮಾಡಬೇಕಾಗುತ್ತದೆ ಎಂದರು.

ಮತ್ತೊಬ್ಬ ಪ್ರಯಾಣಿಕರು, ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸರ್ಕಾರಿ ಬಸ್‌ಗಳು ವಾರಗಳ ಮುಂಚೆಯೇ ಬುಕ್ ಆಗಿಬಿಡುತ್ತವೆ. ಆದ್ದರಿಂದ ನಾವು ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾಗುತ್ತದೆ, ಈ ರೀತಿ ಟಿಕೆಟ್ ದರ ಏರಿಕೆಯಾದರೆ ನಮಗೆ ಕಷ್ಟ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com