

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ದರೋಡೆ ಪ್ರಕರಣಗಳು ಮುಂದುವರೆದಿದ್ದು, ಹೆದ್ದಾರಿಯಲ್ಲಿ ತೆರಳಲು ಜನರು ಭಯಪಡುವಂತಾಗಿದೆ. ದುಷ್ಕರ್ಮಿಗಳು ಭಾನುವಾರ ಸಂಜೆ ಮದ್ದೂರು ಬಳಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಕಾರನ್ನು ಅಡ್ಡಗಟ್ಟಿ 26 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮೈಸೂರು ಮೂಲದ ಖಾಸಗಿ ಕಂಪನಿ ಉದ್ಯೋಗಿ ಗೋವಿಂದರಾಜು, ಸಂಜೆ 7 ಗಂಟೆ ಸುಮಾರಿಗೆ ಬೇರೆ ಕಂಪನಿಯಿಂದ ಸಂಗ್ರಹಿಸಿದ ಹಣವನ್ನು ತಲುಪಿಸಲು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ, ದರೋಡೆಕೋರರು ಅವರ ಕಾರನ್ನು ಅಡ್ಡಗಟ್ಟಿದ್ದಾರೆ.
ಟೊಯೋಟಾ ಇನ್ನೋವಾದಲ್ಲಿ ಅವರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು, ಮದ್ದೂರಿನ ಹೊರವಲಯದಲ್ಲಿರುವ ಐಶ್ವರ್ಯಾ ಕಾನ್ವೆಂಟ್ ಬಳಿ ಗೋವಿಂದರಾಜು ಅವರ ಹುಂಡೈ ಐ20 ಕಾರನ್ನು ಅಡ್ಡಗಟ್ಟಿ ಕಾರಿನ ಕಿಟಕಿ ಒಡೆದು, ಮಾರಕಾಸ್ತ್ರಗಳಿಂದ ಗೋವಿಂದರಾಜು ಅವರನ್ನು ಬೆದರಿಸಿ, 26 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿದ್ದಾರೆ.
ದರೋಡೆ ನಡೆದ ತಕ್ಷಣ ಗೋವಿಂದರಾಜು ಮದ್ದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೃತ್ತ ನಿರೀಕ್ಷಕ ಎಚ್.ಎಸ್. ನವೀನ್ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದೆ.
ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರ ನಿರ್ದೇಶನದ ಮೇರೆಗೆ, ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ.
Advertisement