ಮಾರ್ತಾಂಡ ಆನೆ ಕೊಂದ ಕಂಜನ್ ದಸರಾದಿಂದ ಶಾಶ್ವತ ನಿಷೇಧ: ಸಚಿವ ಈಶ್ವರ್ ಖಂಡ್ರೆ ಆದೇಶ

ಮುಂಬರುವ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಗಳಿಂದ ಕಂಜನ್ ಆನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
Kanjan elephant permanently banned from Mysuru Dasara
ಕಂಜನ್ ಮತ್ತು ಮಾರ್ತಾಂಡ ಆನೆಗಳ ಕಾಳಗ
Updated on

ಬೆಂಗಳೂರು: ದುಬಾರೆ ಆನೆ ಶಿಬಿರದಲ್ಲಿ ಸಹ ಆನೆ 'ಮಾರ್ತಾಂಡ' ಆನೆ ಸಾವಿಗೆ ಕಾರಣವಾದ 'ಕಂಜನ್' ಆನೆಯನ್ನುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಿಂದ ಶಾಶ್ವತವಾಗಿ ನಿಷೇಧಿಸಲಾಗಿದೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಕಂಜನ್ ಆನೆಯ ಆಕ್ರಮಣಕಾರಿ ನಡವಳಿಕೆಯಿಂದಾಗಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಂಬರುವ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಗಳಿಂದ ಕಂಜನ್ ಆನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಕಂಜನ್ ಆನೆ ಪದೇ ಪದೇ ತೋರುತ್ತಿರುವ ಅತ್ಯಂತ ಆಕ್ರಮಣಕಾರಿ ಮತ್ತು ಮೊಂಡಾಟದ ನಡವಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಉನ್ನತ ಅಧಿಕಾರಿಗಳು ಹಾಗೂ ಸಚಿವರು ಈ ಕಠಿಣ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.

Kanjan elephant permanently banned from Mysuru Dasara
ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟ: ಕಂಜನ್ ದಾಳಿಯಿಂದ ಗಾಯಗೊಂಡಿದ್ದ 'ಮಾರ್ತಾಂಡ' ಸಾವು! Video

ಇದೇ ಮೊದಲೇನಲ್ಲ

ಇನ್ನು ಕಂಜನ್ ಆನೆಯ ಇಂತಹ ಉಗ್ರ ನಡವಳಿಕೆ ಇದೇ ಮೊದಲೇನಲ್ಲ. ಕಳೆದ 2024 ರ ಮೈಸೂರು ದಸರಾ ಮಹೋತ್ಸವದ ತಾಲೀಮಿನ ಅವಧಿಯಲ್ಲೂ ಸಹ ಕಂಜನ್ ಭಾರಿ ಗದ್ದಲ ಸೃಷ್ಟಿಸಿತ್ತು. ಮೈಸೂರು ಅರಮನೆಯ ಆವರಣದಲ್ಲೇ ಮತ್ತೊಂದು ದಸರಾ ಆನೆಯನ್ನು ಕಂಜನ್ ಅತ್ಯಂತ ಆಕ್ರೋಶದಿಂದ ಅಟ್ಟಿಸಿಕೊಂಡು ಹೋಗಿ ಪ್ರವಾಸಿಗರು ಹಾಗೂ ಅಧಿಕಾರಿಗಳಲ್ಲಿ ತೀವ್ರ ಆತಂಕ ಮತ್ತು ಭೀತಿಯ ವಾತಾವರಣ ನಿರ್ಮಿಸಿತ್ತು.

ಇದಾದ ಬಳಿಕ ಸೋಮವಾರ ದುಬಾರೆ ಶಿಬಿರದಲ್ಲಿ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಭೀಕರ ಕಾಳಗ ನಡೆದಿತ್ತು. ಈ ವೇಳೆ ಅತ್ಯಂತ ಆಕ್ರಮಣಕಾರಿಯಾಗಿ ಮುನ್ನುಗ್ಗಿದ್ದ ಕಂಜನ್ ಆನೆ, ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಹಾಗೂ ದೇಹದ ಇತರೆ ಸೂಕ್ಷ್ಮ ಭಾಗಗಳಿಗೆ ತನ್ನ ಬಲವಾದ ದಂತಗಳಿಂದ ತೀವ್ರವಾಗಿ ತಿವಿದು ಗಂಭೀರ ಗಾಯಗೊಳಿಸಿತ್ತು. ಇದೇ ದುರಂತದಲ್ಲಿ ಮಹಿಳೆಯೊಬ್ಬರೂ ಕೂಡ ಧಾರುಣ ಸಾವನ್ನಪ್ಪಿದ್ದರು.

ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಾರ್ತಾಂಡ ಆನೆಗೆ ದುಬಾರೆ ಶಿಬಿರದಲ್ಲೇ ಪಶುವೈದ್ಯರಾದ ಡಾ. ಮುಜಿಭ್ ಹಾಗೂ ಚಿಟ್ಟಿಯಪ್ಪ ಅವರು ನಿರಂತರ ತುರ್ತು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮಾರ್ತಾಂಡ ಆನೆ ಇಂದು ಮೃತಪಟ್ಟಿದೆ.

ನೇತ್ರದಾನ

ಆನೆಗಳ ಕಾದಾಟದ ಸಂದರ್ಭದಲ್ಲಿ ಸಿಲುಕಿ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದ ಮಹಿಳೆಯ ಕುಟುಂಬಸ್ಥರು ತೀವ್ರ ದುಃಖದ ನಡುವೆಯೂ ಹೆಮ್ಮೆಯ ಮಾನವೀಯತೆ ಮೆರೆದಿದ್ದಾರೆ. ಮೃತ ಮಹಿಳೆಯ ಕಣ್ಣುಗಳನ್ನು ದಾನ (ನೇತ್ರದಾನ) ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಸದ್ಯ ನೇತ್ರದಾನ ಪ್ರಕ್ರಿಯೆ ಮುಗಿದ ಬಳಿಕ ಮಹಿಳೆಯ ಮೃತದೇಹವನ್ನು ಅವರ ತವರೂರಾದ ಚೆನ್ನೈಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ದುಬಾರೆ ತಾತ್ಕಾಲಿಕ ಬಂದ್

ಆನೆಗಳ ಸರಣಿ ಆಕ್ರಮಣಕಾರಿ ನಡವಳಿಕೆ ಮತ್ತು ಮಹಿಳೆಯೊಬ್ಬರು ಬಲಿಯಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ಮುನ್ನೆಚ್ಚರಿಕೆ ಕ್ರಮವಾಗಿ ಇಂದು ದುಬಾರೆ ಸಾಕಾನೆ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ. ಮುಂದಿನ ಅಧಿಕೃತ ಆದೇಶ ಬರುವವರೆಗೂ ಪ್ರವಾಸಿಗರಿಗೆ ಶಿಬಿರದ ಒಳಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

Kanjan elephant permanently banned from Mysuru Dasara
ಕೊಡಗು: ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾಳಗ; ಮಹಿಳೆ ಸಾವು! Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com