ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟ: ಕಂಜನ್ ದಾಳಿಯಿಂದ ಗಾಯಗೊಂಡಿದ್ದ 'ಮಾರ್ತಾಂಡ' ಸಾವು!

ಕಾದಾಟದಲ್ಲಿ ಕಂಜನ್ ಆನೆಯು ತನ್ನ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ಆಳವಾಗಿ ಚುಚ್ಚಿತ್ತು. ಇದರಿಂದಾಗಿ ಮಾರ್ತಾಂಡನಿಗೆ ಗಂಭೀರ ಆಂತರಿಕ ಗಾಯಗಳಾಗಿದ್ದವು.
Marthanda elephant injured in kanjan attack
ಕಂಜನ್ ಹಾಗೂ ಮಾರ್ತಾಂಡ ಆನೆಗಳ ನಡುವಿನ ಕಾದಾಟದ ಚಿತ್ರ
Updated on

ಕೊಡಗು: ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಸಾಕಾನೆ ಶಿಬಿರ ದುಬಾರೆಯಲ್ಲಿ ನಿನ್ನೆ ಸಾಕಾನೆಗಳ ನಡುವೆ ನಡೆದ ಭೀಕರ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 'ಮಾರ್ತಾಂಡ' ಆನೆಯು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ದುಬಾರೆ ಶಿಬಿರದ 'ಮಾರ್ತಾಂಡ' ಮತ್ತು 'ಕಂಜನ್' ಎಂಬ ಎರಡು ಆನೆಗಳ ನಡುವೆ ಅನಿರೀಕ್ಷಿತವಾಗಿ ಕಾದಾಟ ಆರಂಭವಾಗಿತ್ತು.

ಈ ಕಾದಾಟದ ರಭಸಕ್ಕೆ ಸಿಲುಕಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜಿನ್ನು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಪ್ರವಾಸಿ ಮಹಿಳೆಯ ಸಾವಿನ ಬೆನ್ನಲ್ಲೇ ಈಗ ಅರಣ್ಯ ಇಲಾಖೆಯ ಸಾಕಾನೆ ಮಾರ್ತಾಂಡ ಕೂಡ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಕಾದಾಟದಲ್ಲಿ ಕಂಜನ್ ಆನೆಯು ತನ್ನ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ಆಳವಾಗಿ ಚುಚ್ಚಿತ್ತು. ಇದರಿಂದಾಗಿ ಮಾರ್ತಾಂಡನಿಗೆ ಗಂಭೀರ ಆಂತರಿಕ ಗಾಯಗಳಾಗಿದ್ದವು.

ಪಶುವೈದ್ಯರಾದ ಡಾ. ಮುಜೀಬ್ ನೇತೃತ್ವದ ತಂಡ ಇಡೀ ರಾತ್ರಿ ಮಾರ್ತಾಂಡನಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹರಸಾಹಸ ಪಟ್ಟಿತ್ತು. ಆದರೆ, ಗಾಯಗಳು ಅತ್ಯಂತ ಆಳವಾಗಿದ್ದರಿಂದ ಮತ್ತು ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದ ಮಾರ್ತಾಂಡ ಇಂದು ಸಾವನ್ನಪ್ಪಿದ್ದಾನೆ. ಮಾರ್ತಾಂಡ ಆನೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವನನ್ನು ಸಾಕಿದ್ದ ಮಾವುತ ಮತ್ತು ಇತರ ಸಿಬ್ಬಂದಿ ತೀವ್ರ ದು:ಖ ವ್ಯಕ್ತಪಡಿಸಿದ್ದಾರೆ.

ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದ ಮಾರ್ತಾಂಡ ಅರಣ್ಯ ಇಲಾಖೆಯ ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದನು. ದುಬಾರೆಯಲ್ಲಿ ಪ್ರವಾಸಿಗರಿಗೆ ಅತ್ಯಂತ ಪ್ರಿಯನಾಗಿದ್ದ ಈ ಆನೆ ಹೀಗೆ ದಾರುಣವಾಗಿ ಅಂತ್ಯ ಕಂಡಿರುವುದು ಶಿಬಿರದಲ್ಲಿ ಮೌನ ಆವರಿಸುವಂತೆ ಮಾಡಿದೆ. ಈ ಘಟನೆಯ ನಂತರ ಅರಣ್ಯ ಇಲಾಖೆಯ ವಿರುದ್ಧ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

Marthanda elephant injured in kanjan attack
ಸಾಕಾನೆ ಕಾದಾಟದಲ್ಲಿ ಸಿಲುಕಿ ಮಹಿಳೆ ಅಪ್ಪಚ್ಚಿ: ಪ್ರವಾಸಿಗರಿಗೆ ದುಬಾರೆ ಕ್ಯಾಂಪ್ ನಿರ್ಬಂಧ!

ಆನೆಗಳಿಗೆ ಸ್ನಾನ ಮಾಡಿಸುವಾಗ ಮಾವುತರ ನಡುವಿನ ಹೊಂದಾಣಿಕೆಯ ಕೊರತೆ ಇತ್ತೇ? ರೊಚ್ಚಿಗೆದ್ದ ಆನೆಗಳನ್ನು ನಿಯಂತ್ರಿಸಲು ಬೇಕಾದ ಸಿದ್ಧತೆ ಇರಲಿಲ್ಲವೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸದ್ಯಕ್ಕೆ ದುಬಾರೆ ಶಿಬಿರವನ್ನು ಪ್ರವಾಸಿಗರಿಗೆ ಬಂದ್ ಮಾಡಲಾಗಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com