

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ದೊರೆಯುತ್ತಿರುವ ಮಾಸಿಕ ಎರಡು ಸಾವಿರ ರುಪಾಯಿ ಸದ್ಬಳಕೆ ಮಾಡಿಕೊಂಡಿರುವ ಕೊಪ್ಪಳ ಜಿಲ್ಲೆಯ ಮೂವರು ಮಹಿಳೆಯರು ರೊಟ್ಟಿ ಕೇಂದ್ರ ಆರಂಭಿಸಿ 'ಗೃಹಲಕ್ಷ್ಮೀ ರೊಟ್ಟಿ ಕೇಂದ್ರ' ಎಂದು ಹೆಸರಿಡುವ ಮೂಲಕ ಗಮನ ಸೆಳೆದಿದ್ದಾರೆ.
ಸ್ವಯಂ ಉದ್ಯೋಗ ಆರಂಭಿಸಿದ ಮಹಿಳೆಯರು
ಕೊಪ್ಪಳದ ಕುಷ್ಠಗಿ ನಿವಾಸಿಗಳಾದ ಮಕ್ತುಮ್ಬಿ ಕೊಪ್ಪದ, ಸಾಜನಬಿ ದಾದಿಬಾಯಿ, ಹುಸೇನಬಿ ಕಮ್ಮಾರ ಎಂಬ ಮೂವರು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ಲಭಿಸಿದ ಆರ್ಥಿಕ ನೆರವನ್ನು ಉಳಿತಾಯ ಮಾಡುವ ಮೂಲಕ ಹುಬ್ಬಳ್ಳಿಯಲ್ಲಿ ರೊಟ್ಟಿ ಮಿಷನ್ ಖರೀದಿಸಿ ಸ್ವಯಂ ಉದ್ಯೋಗ ಆರಂಭಿಸುವಲ್ಲಿ ಮುಂದಾಗಿದ್ದಾರೆ.
ಈ ರೊಟ್ಟಿ ಉದ್ಯಮ ಕಟ್ಟಿಕೊಳ್ಳಲು 29 ಕಂತುಗಳ ಪೈಕಿ ಒಟ್ಟು 58 ಸಾವಿರದಂತೆ ಮೂರು ಜನ ಹಣ ಹೂಡಿಕೆಯ ಜತೆಗೆ ಸ್ವಂತ ಹಣ ಜೋಡಿಸಿಕೊಂಡು 2ಲಕ್ಷ ರೂಪಾಯಿ ಅಧಿಕ ಮೊತ್ತದಲ್ಲಿ ರೊಟ್ಟಿ ತಯಾರಿಕಾ ಮಿಷನ್ ಅಳವಡಿಸಿಕೊಂಡು ಉದ್ಯಮ ಆರಂಭಿಸುವ ಮೂಲಕ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.
ಸ್ವಾವಲಂಬಿ ಬದುಕಿನ ಹೆಜ್ಜೆ
ಈ ರೊಟ್ಟಿ ಮಿಷನ್ ನಿಂದ ಪ್ರತಿನಿತ್ಯವೂ ತಯಾರಾಗುವ ರೊಟ್ಟಿ ಪಟ್ಟಣದಲ್ಲಿರುವ ಹೋಟೆಲ್, ಡಾಬಾ, ಖಾನಾವಳಿ, ಸಭೆ ಸಮಾರಂಭಕ್ಕೆ ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದ್ದು, ಮಹಿಳೆಯರಿಗೆ ಸ್ಥಿರ ಆದಾಯದೊಂದಿಗೆ ಸ್ವಾವಲಂಬಿ ಬದುಕಿನ ಹೆಜ್ಜೆಯಾಗಿದೆ.
ಗಣ್ಯರಿಂದ ಚಾಲನೆ
ಕುಷ್ಟಗಿ ಪಟ್ಟಣದಲ್ಲಿ ಮೂವರು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಹಣದಿಂದ ಸ್ಥಾಪಿಸಿರುವ ಗೃಹಲಕ್ಷ್ಮಿ ರೊಟ್ಟಿ ಕೇಂದ್ರವನ್ನು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಕಾಂಗ್ರೆಸ್ ಯುವಮುಖಂಡ ದೊಡ್ಡಬಸನಗೌಡ ಬಯ್ಯಾಪೂರ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್, ಗ್ಯಾರಂಟಿ ಸಮಿತಿಯ ಸದಸ್ಯರು, ಸಿಡಿಪಿಒ ಇಲಾಖೆ ಅಧಿಕಾರಿಗಳು, ಗಣ್ಯರು ಕೇಂದ್ರ ಉದ್ಘಾಟಿಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬರುವ ಎರಡು ಸಾವಿರ ಹಣ ಉಳಿತಾಯ ಮಾಡುವ ಮೂಲಕ ನಾವು ಮೂವರು ಸೇರಿಕೊಂಡು ಅಂದಾಜು ಎರಡು ಲಕ್ಷಗಳಲ್ಲಿ ರೊಟ್ಟಿ ಕೇಂದ್ರ ಆರಂಭಿಸಿದ್ದು, ಉದ್ಯಮದಲ್ಲಿ ಯಶಸ್ವಿಯಾಗುವ ಭರವಸೆಯಿದೆ ಎನ್ನುತ್ತಾರೆ ಗೃಹಲಕ್ಷ್ಮಿ ರೊಟ್ಟಿ ಕೇಂದ್ರದ ಮಹಿಳೆಯರು.
ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಜತೆಗೆ ಕುಟುಂಬದ ಆರ್ಥಿಕ ಸ್ಥೀತಿ ಸುಧಾರಣೆಯಾಗಲು ಸಹಕಾರಿಯಾಗಿದೆ. ಯೋಜನೆ ನೆರವಿನಿಂದ ಕುಷ್ಟಗಿಯಲ್ಲಿ ರೊಟ್ಟಿ ಕೇಂದ್ರ ಸ್ಥಾಪನೆ ಮಾಡಿರುವದು ಶ್ಲಾಘನೀಯವಾಗಿದೆ ಎಂದು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಉದ್ಯೋಗ ಸೃಷ್ಟಿಗೆ ಬಳಸಿರುವುದು ಮಾದರಿ ಕಾರ್ಯವಾಗಿದ್ದು, ಮಹಿಳೆಯರು ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಂಡರೆ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪುರ ತಿಳಿಸಿದ್ದಾರೆ.
Advertisement