

ಬೆಂಗಳೂರು: ಬಕ್ರೀದ್ ಹಬ್ಬಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ ಉಂಟಾಗಲಿರುವ ಪ್ರಾಣಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ನಾಲ್ಕು ದಿನಗಳ ವಿಶೇಷ ಕಾರ್ಯಯೋಜನೆಯನ್ನು ರೂಪಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ನಿಗಮ ಪ್ರದೇಶಗಳಲ್ಲಿ ಸುಮಾರು 2,000 ಟನ್ ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುವ ನಿರೀಕ್ಷೆಯಿದ್ದು, ಅದರ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಈ ಯೋಜನೆಯಂತೆ ಬಕ್ರೀದ್‌ಗೂ ಒಂದು ದಿನ ಮೊದಲು ನಗರದ ಎಲ್ಲಾ ಮಸೀದಿಗಳಲ್ಲಿ ಸಾರ್ವಜನಿಕ ಘೋಷಣೆಗಳ ಮೂಲಕ ರಸ್ತೆ ಬದಿಗಳು, ಚರಂಡಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ತ್ಯಾಜ್ಯವನ್ನು ಎಸೆಯದಂತೆ ಜನರಿಗೆ ಮನವಿ ಮಾಡಲಾಗುತ್ತದೆ.
ತ್ಯಾಜ್ಯ ಸಂಗ್ರಹಿಸಲು ನಾಗರಿಕರಿಗೆ ಗೋಣಿ ಚೀಲಗಳನ್ನು ವಿತರಿಸಲಾಗುವುದು. ಸಾರ್ವಜನಿಕರು ತ್ಯಾಜ್ಯವನ್ನು ಈ ಚೀಲಗಳಲ್ಲಿ ಸಂಗ್ರಹಿಸಿ ಆಟೋ ಟಿಪ್ಪರ್ ವಾಹನಗಳಿಗೆ ಹಸ್ತಾಂತರಿಸುವಂತೆ ಜಾಗೃತಿ ಮೂಡಿಸಲಾಗುತ್ತದೆ.
ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮಾಮಣಿ ಅವರು ಮಾತನಾಡಿ, ಶಿವಾಜಿನಗರ, ಚಾಮರಾಜಪೇಟೆ, ಪುಲಿಕೇಶಿನಗರ ಹಾಗೂ ಹೆಬ್ಬಾಳ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ವಿಶೇಷ ಸ್ವಚ್ಛತಾ ವ್ಯವಸ್ಥೆ ಮತ್ತು ತ್ಯಾಜ್ಯ ಸಂಗ್ರಹಣೆಗೆ ಹೆಚ್ಚುವರಿ ಸಿಬ್ಬಂದಿ ಹಾಗೂ ವಾಹನಗಳನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸಂಗ್ರಹಿಸಲಾದ ಪ್ರಾಣಿ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡಲಾಗುವುದು. ತ್ಯಾಜ್ಯ ತೆರವುಗೊಳಿಸಿದ ಬಳಿಕ ರಸ್ತೆ ಮೂಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ಹರಡದಂತೆ ಸ್ವಚ್ಛತಾ ಸಿಬ್ಬಂದಿಯಿಂದ ಸೋಂಕುನಿವಾರಕ ದ್ರಾವಣ ಸಿಂಪಡಣೆ ನಡೆಸುತ್ತಾರೆಂದು ತಿಳಿಸಿದ್ದಾರೆ.
ಇದೇ ವೇಳೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಲು ಜಿಬಿಎ ಅಧಿಕಾರಿಗಳು ಧಾರ್ಮಿಕ ಮುಖಂಡರ ಸಹಕಾರವನ್ನೂ ಕೋರಿದ್ದಾರೆ.
ಈ ಸಂಬಂಧ ಕೆಆರ್ ಮಾರುಕಟ್ಟೆಯ ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮಕ್ಸೂದ್ ಇಮ್ರಾನ್ ರಶಾದಿ ಮಾತನಾಡಿ, ಬೆಂಗಳೂರಿನ 800ಕ್ಕೂ ಹೆಚ್ಚು ಮಸೀದಿಗಳಿಗೆ ಸಂದೇಶ ರವಾನಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳನ್ನು ಬಲಿ ನೀಡದಂತೆ, ತ್ಯಾಜ್ಯವನ್ನು ರಸ್ತೆ ಅಥವಾ ಚರಂಡಿಗಳಿಗೆ ಎಸೆಯದಂತೆ ಸಮುದಾಯದ ಸದಸ್ಯರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಆಡಳಿತದ ಮುಖ್ಯ ಉದ್ದೇಶವಾಗಿದ್ದು, ನಾಗರಿಕರು ಸಹ ತ್ಯಾಜ್ಯ ನಿರ್ವಹಣೆಯಲ್ಲಿ ಸಹಕರಿಸುವಂತೆ ಮನವಿ ಮಾಡಲಾಗಿದೆ.
Advertisement