

ಮಂಗಳೂರು: ಖಾಸಗಿ ಬಸ್ ನಲ್ಲಿ ತೆರಳುತ್ತಿದ್ದಾಗ ಆಕಸ್ಮಿಕವಾಗಿ ತಾಯಿ ಮಗು ಕೆಳಗೆ ಬಿದ್ದು ಗಾಯಗೊಂಡಿದ್ದರು. ಇದನ್ನ ಗಮನಿಸಿದ ಮತ್ತೊಂದು ಬಸ್ ಸಿಬ್ಬಂದಿ ಕೂಡಲೇ ತಮ್ಮ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿದರು. ನಂತರ ತಾಯಿ ಮಗುವನ್ನು ಹತ್ತಿಸಿಕೊಂಡು ಬಸ್ ಯೂಟರ್ನ್ ತೆಗೆದುಕೊಂಡು ಕೆಲ ನಿಮಿಷಗಳಲ್ಲಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮರೆದಿದ್ದಾರೆ.
ಕಾವೂರಿನಿಂದ ಕುಂಜತ್‌ಬೈಲ್‌ಗೆ ರೂಟ್ ನಂ. 13B ನಲ್ಲಿ ಪ್ರಯಾಣಿಸುತ್ತಿದ್ದ ಮಾಸ್ಟರ್ ಬಸ್ ಚಾಲಕ ದಯಾನಂದ್ ಮತ್ತು ಕಂಡಕ್ಟರ್ ಸಂದೀಪ್ ಅವರ ಕಾರ್ಯಕ್ಕೆ ಜನರು ಸಲಾಂ ಹೊಡೆಯುತ್ತಿದ್ದಾರೆ. ಮರಕಡ ಜಂಕ್ಷನ್ ಬಳಿ ಮಾಸ್ಟರ್ ಬಸ್ ಮುಂದೆ ತಾಯಿ ಮಗು ಇದ್ದ ಬಸ್ ಹೋಗುತ್ತಿತ್ತು. ಈ ವೇಳೆ ಬಸ್ ಅಡ್ಡಾದಿಡ್ಡಿಯಾಗಿ ಚಲಿಸಿದ್ದರಿಂದ ತಾಯಿ ಮಗು ಇಬ್ಬರು ಆಯಾತಪ್ಪಿ ಕೆಳಗೆ ಬಿದ್ದಿದ್ದರು. ಬಸ್ ನಿಂದ ಬಿದ್ದಿದ್ದರಿಂದ ಮಗು ಪ್ರಜ್ಞೆ ತಪ್ಪಿತ್ತು. ಇದನ್ನು ಗಮನಿಸಿದ ಮಾಸ್ಟರ್ ಬಸ್ ಸಿಬ್ಬಂದಿ ಕೂಡಲೇ ಅವರ ನೆರವಿಗೆ ಧಾವಿಸಿದರು. ಸಿಬ್ಬಂದಿಯ ಸಕಾಲಿಕ ಸಮಯಪ್ರಜ್ಞೆ ಮತ್ತು ಮಾನವೀಯತೆಯನ್ನು ಸಾರ್ವಜನಿಕರು ವ್ಯಾಪಕವಾಗಿ ಮೆಚ್ಚಿಕೊಂಡಿದ್ದಾರೆ.
Advertisement