

ಹಾನಗಲ್ (ಹಾವೇರಿ): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ 151.25 ಅಂಕ ಗಳಿಸಿ ಇಡೀ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಎಲೆಪೇಟೆಯ ನಿವಾಸಿ ಶಂಕರ ಬನ್ನೂರ ಎಂಬ ಅಭ್ಯರ್ಥಿಯ ಅಕ್ರಮ ಸಿಸಿಟಿವಿ ತನಿಖೆಯಿಂದ ಬಯಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಅಕ್ರಮ ಬಯಲಾದದ್ದು ಹೇಗೆ?
ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಪರೀಕ್ಷಾ ಕೇಂದ್ರದಲ್ಲಿ ಅಕ್ಟೋಬರ್ 4 ರಂದು ನಡೆದಿದ್ದ VAO ಪರೀಕ್ಷೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶಂಕರ ಬನ್ನೂರನ ಕಳ್ಳಾಟ ಬಯಲಾಗಿದೆ. ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಕೇವಲ ಆಧಾರ್ ಕಾರ್ಡ್ ಮಾತ್ರ ಪರಿಶೀಲಿಸಿದ್ದರಿಂದ, ಈತ ತನ್ನ ಮೊಬೈಲ್ ಫೋನನ್ನು ಕೊಠಡಿಯೊಳಗೆ ತೆಗೆದುಕೊಂಡು ಹೋಗಿದ್ದನು. ಕೊನೆಯ ಸಾಲಿನಲ್ಲಿ ತನಗೆ ನಿಗದಿಯಾಗಿದ್ದ ಸೀಟಿನಲ್ಲಿ ಕುಳಿತು, ಇನ್ವಿಜಿಲೇಟರ್‌ಗಳ (ಪರೀಕ್ಷಾ ಮೇಲ್ವಿಚಾರಕರು) ಕಣ್ಣು ತಪ್ಪಿಸಿ ರಹಸ್ಯವಾಗಿ ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಸ್ಕ್ಯಾನ್ ಮಾಡಿ 'ಗೂಗಲ್ ಲೆನ್ಸ್' (Google Lens) ಆ್ಯಪ್ ಬಳಸಿ ಉತ್ತರಗಳನ್ನು ಹುಡುಕಿ OMR ಶೀಟ್‌ನಲ್ಲಿ ಗುರುತು ಮಾಡಿದ್ದನು. ಈ ಸಂಪೂರ್ಣ ದೃಶ್ಯ ಪರೀಕ್ಷಾ ಕೊಠಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅನುಮಾನ ಮೂಡಿಸಿದ್ದು ಹೇಗೆ?
ಈ ವಿಎಒ ಪರೀಕ್ಷೆಗಿಂತ ಕೇವಲ 20 ದಿನಗಳ ಮುನ್ನ ನಡೆದಿದ್ದ KSRP ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಈತ ಕೇವಲ 25 ಅಂಕ ಗಳಿಸಿದ್ದನು. ಆದರೆ, ಅದಾದ ಕೆಲವೇ ದಿನಗಳಲ್ಲಿ ನಡೆದ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಯಲ್ಲಿ ಬರೋಬ್ಬರಿ 151.25 ಅಂಕ ಗಳಿಸಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದನು. ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಫೇಲಾಗಿದ್ದವನು ರಾಜ್ಯಕ್ಕೆ ಟಾಪರ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಮತ್ತು ಸಂಶಯಕ್ಕೆ ಕಾರಣವಾಗಿತ್ತು.
ಪೊಲೀಸ್ ವಶಕ್ಕೆ
ಅಭ್ಯರ್ಥಿಯ ಅಂಕಗಳ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹಾವೇರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಶಂಕರ ಬನ್ನೂರು ಪರೀಕ್ಷೆ ಬರೆದ ಶಿಗ್ಗಾವಿ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಗ್ರ ವರದಿ ನೀಡುವಂತೆ ಆದೇಶಿಸಿದ್ದರು. ಅದರಂತೆ, ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ಹಾನಗಲ್ ಪೊಲೀಸರು ಶಂಕರನನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗಾಗಿ ಶಿಗ್ಗಾವಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಮೊಬೈಲ್ ಬಳಸಿ ಅಕ್ರಮ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಮುಂದುವರೆದು, ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದರೂ, ಅಭ್ಯರ್ಥಿ ಮೊಬೈಲ್ ಬಳಸಿ ಇಡೀ ಪರೀಕ್ಷೆ ಬರೆಯುವವರೆಗೆ ಅಲ್ಲಿನ ಪರೀಕ್ಷಾ ಮೇಲ್ವಿಚಾರಕರು ಏನು ಮಾಡುತ್ತಿದ್ದರು? ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಈ ಅಕ್ರಮದಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ಅಥವಾ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಡಿಜಿಟಲ್ ಸಹಾಯ ಒದಗಿಸಿದ ಸಹಚರರು ಯಾರು ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಈತನ ಬಗ್ಗೆ ತನಿಖೆ ನಡೆಸಿದಾಗ ಕೇವಲ ಸ್ಪರ್ಧಾತ್ಮಕ ಪರೀಕ್ಷೆ ಮಾತ್ರವಲ್ಲ, ಈತನ ಶೈಕ್ಷಣಿಕ ಇತಿಹಾಸವೂ ತೀವ್ರ ಅನುಮಾನ ಮೂಡಿಸಿದೆ. ಶಂಕರ ಬನ್ನೂರ ತನಗಿದ್ದ ಶೈಕ್ಷಣಿಕ ಹಿನ್ನಡೆಯಿಂದಾಗಿ ಪಿಯುಸಿ ಮುಗಿಸಲು ಬರೋಬ್ಬರಿ 13 ವರ್ಷಗಳನ್ನು ತಗೆದುಕೊಂಡಿದ್ದ. ಅಲ್ಲದೆ ಇತ್ತೀಚಿನ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಗಳಿಸಿದ್ದ. ಆದರೆ ಇಂತಹ ಹಿನ್ನೆಲೆಯುಳ್ಳ ವ್ಯಕ್ತಿ ಕಠಿಣವಾದ VAO ಪರೀಕ್ಷೆಯಲ್ಲಿ 151.25 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಇಡೀ ಹಗರಣವನ್ನು ಬಹಿರಂಗಪಡಿಸಲು ಮುಖ್ಯ ಕಾರಣವಾಯಿತು.