ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ 25, VAO ಪರೀಕ್ಷೆಯಲ್ಲಿ  151 ಅಂಕ! ಅಂಕಗಳ ವಿವಾದ ಬಗ್ಗೆ ಹಾವೇರಿ ಟಾಪರ್ ಶಂಕರ ಬನ್ನೂರು ಹೇಳಿದ್ದೇನು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ 151 ಅಂಕಗಳನ್ನು ಗಳಿಸಿ ಹಾವೇರಿ ಜಿಲ್ಲಾ ಟಾಪರ್ ಆಗಿ ಹೊರಹೊಮ್ಮಿರುವ ಶಂಕರ ಬನ್ನೂರು, ತಮ್ಮ ಅಂಕಗಳ ಸುತ್ತ ಎದ್ದಿರುವ ವಿವಾದ ಹಾಗೂ ಅನುಮಾನಗಳಿಗೆ ಮಾಧ್ಯಮಗಳ ಮೂಲಕ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Scored 25 In KSRP, 151 In VAO_ Haveri District Topper Shankara Bannuru Clarifies Cheating Allegations
ಹಾವೇರಿ ಟಾಪರ್ ಶಂಕರ ಬನ್ನೂರು
Updated on: 

ಹಾನಗಲ್ (ಹಾವೇರಿ): ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ನಡೆಸಿದ ಪರೀಕ್ಷೆಗಳಲ್ಲಿ ಅಭ್ಯರ್ಥಿಯೊಬ್ಬರ ಅಂಕಗಳ ಭಾರೀ ವ್ಯತ್ಯಾಸವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಹೌದು, ಕೆಇಎ ನಡೆಸಿದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ 151 ಅಂಕಗಳನ್ನು ಗಳಿಸಿ ಹಾವೇರಿ ಜಿಲ್ಲಾ ಟಾಪರ್ ಆಗಿ ಹೊರಹೊಮ್ಮಿರುವ ಶಂಕರ ಬನ್ನೂರು, ತಮ್ಮ ಅಂಕಗಳ ಸುತ್ತ ಎದ್ದಿರುವ ವಿವಾದ ಹಾಗೂ ಅನುಮಾನಗಳಿಗೆ ಮಾಧ್ಯಮಗಳ ಮೂಲಕ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಶಂಕರ ಬನ್ನೂರು ಎಂಬ ಅಭ್ಯರ್ಥಿ ಕೇವಲ 20 ದಿನಗಳ ಅಂತರದಲ್ಲಿ ನಡೆದ ಎರಡು ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಈ ಅನುಮಾನಕ್ಕೆ ದಾರಿ ಮಾಡಿಕೊಟ್ಟಿವೆ. ಅದುವೇ, ಸೆಪ್ಟೆಂಬರ್ 20, 2026ರಂದು ನಡೆದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಶಂಕರ ಬನ್ನೂರು 100ಕ್ಕೆ ಕೇವಲ 25 ಅಂಕಗಳನ್ನು ಪಡೆದಿದ್ದರು. ಆದರೆ, ಇದಾದ ಕೆಲವೇ ದಿನಗಳಲ್ಲಿ ಅಂದರೆ ಅಕ್ಟೋಬರ್ 4, 2026ರಂದು ನಡೆದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ 200ಕ್ಕೆ 151.25 ಅಂಕಗಳನ್ನು (75.5%) ಗಳಿಸಿ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ (ಟಾಪರ್) ಪಡೆದಿದ್ದಾರೆ. ಇದರೊಂದಿಗೆ, ಆದರೆ ಇವರ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಗಳು ಸಾಧಾರಣವಾಗಿದ್ದವು ಅದರಲ್ಲೂ, ದ್ವಿತೀಯ ಪಿಯುಸಿ ಉತ್ತೀರ್ಣರಾಗಲು ಸುಮಾರು 13 ವರ್ಷ ತಗೆದುಕೊಂಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಓಎಂಆರ್ ಪ್ರತಿಯೊಂದಿಗೆ ಹರಿದಾಡಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹಾವೇರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಶಂಕರ ಬನ್ನೂರು ಪರೀಕ್ಷೆ ಬರೆದ ಶಿಗ್ಗಾವಿ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಗ್ರ ವರದಿ ನೀಡುವಂತೆ ಆದೇಶಿಸಿದ್ದರು.

Scored 25 In KSRP, 151 In VAO_ Haveri District Topper Shankara Bannuru Clarifies Cheating Allegations
ಪಿಯುಸಿಗೆ 13 ವರ್ಷ, ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ 25 ಅಂಕ: ಆದ್ರೆ, VAO ಪರೀಕ್ಷೆಯಲ್ಲಿ ಜಿಲ್ಲೆಗೆ ಫಸ್ಟ್! 151 ಅಂಕ ಗಳಿಸಿದ ಅಭ್ಯರ್ಥಿ ವಿರುದ್ಧ ತನಿಖೆಗೆ ಆದೇಶಿಸಿದ KEA

ಮುಂದುವರೆದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಭ್ಯರ್ಥಿ ಶಂಕರ ಬನ್ನೂರು, "ನಾನು ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ನಕಲು ಮಾಡಿಲ್ಲ. ನನ್ನ ಸ್ವಂತ ಪರಿಶ್ರಮ ಮತ್ತು ಕಷ್ಟಪಟ್ಟು ಓದಿದ್ದರಿಂದಲೇ ನನಗೆ ಈ ಅಂಕಗಳು ಬಂದಿವೆ. ನನ್ನ ಯಶಸ್ಸನ್ನು ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, "ಸರ್ಕಾರ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯಾವುದೇ ರೀತಿಯ ತನಿಖೆ ನಡೆಸಿದರೂ ಎದುರಿಸಲು ನಾನು ಸಿದ್ಧನಿದ್ದೇನೆ. ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯ ಏನೆಂಬುದು ಎಲ್ಲರಿಗೂ ತಿಳಿಯಲಿದೆ" ಎಂದು ಸವಾಲು ಹಾಕಿದ್ದಾರೆ. ಜೊತೆಗೆ, "ಕಾನ್‌ಸ್ಟೇಬಲ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಸಿಲಬಸ್ ಬೇರೆಯಾಗಿತ್ತು, ಆ ಪರೀಕ್ಷೆಯನ್ನು ನಾನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಗಾಗಿ ನಾನು ಹಗಲಿರುಳು ಕಷ್ಟಪಟ್ಟು ಸಿದ್ಧತೆ ಮಾಡಿಕೊಂಡಿದ್ದೆ. ಹೀಗಾಗಿ ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬಂದಿವೆ" ಎಂದು ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ, ತಮ್ಮ ಅರ್ಜಿಯಲ್ಲಿನ ಪಿಯುಸಿ ಉತ್ತೀರ್ಣ ವರ್ಷದ ಗೊಂದಲಗಳ ಬಗ್ಗೆಯೂ ಸ್ಪಷ್ಟಪಡಿಸಿದ ಶಂಕರ ಬನ್ನೂರು, ತಾವು ಪಿಯುಸಿ ಪರೀಕ್ಷೆ ಪಾಸಾಗಿದ್ದು 2012ರಲ್ಲಿ. ಆದರೆ ಸೋಷಿಯಲ್ ಮೀಡಿಯಾದಲ್ಲಿ 2026ರಲ್ಲಿ ಪಿಯುಸಿ ಮುಗಿಸಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ದಾಖಲೆಗಳಲ್ಲಿ ಯಾಕೆ ಆ ರೀತಿ ತಪ್ಪಾಗಿ ಮೂಡಿಬಂದಿದೆಯೋ ತಿಳಿದಿಲ್ಲ ಎಂದು ತಿಳಿಸಿ, ತಮ್ಮ ಬಳಿಯಿದ್ದ ಎಲ್ಲಾ ಅಸಲಿ ದಾಖಲೆಗಳನ್ನು ಪೊಲೀಸರು ಮತ್ತು ತಹಶೀಲ್ದಾರ್‌ಗೆ ಹಾಜರುಪಡಿಸಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X