ಕರ್ನಾಟಕದ ವೈಭವೋಪೇತ ಪರಂಪರೆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಿದೆ: ಕನ್ನಡಿಗರಿಗೆ ಕನ್ನಡದಲ್ಲೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಕರ್ನಾಟಕದ ವೈಭವೋಪೇತ ಪರಂಪರೆ ಮತ್ತು ಸಾರ್ವಕಾಲಿಕ ಆಚಾರ-ವಿಚಾರಗಳು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಲ್ಲಿನ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಹಾಗೂ ಭವಿಷ್ಯದ ಕ್ಷೇತ್ರಗಳಲ್ಲಿನ ಕೌಶಲದಿಂದ ವಿಶಿಷ್ಟ ಛಾಪು ಮೂಡಿಸಿದ್ದಾರೆ.
PM Narendra Modi
ಪ್ರಧಾನಿ ನರೇಂದ್ರ ಮೋದಿ
Updated on: 

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ.

ಕರ್ನಾಟಕದ ಶ್ರೀಮಂತ ಪರಂಪರೆ, ಸಾಂಸ್ಕೃತಿಕ ವೈಭವ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಇಬ್ಬರೂ ನಾಯಕರು ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕರ್ನಾಟಕವು ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಹಾಗೂ ಅಪಾರ ಸಾಧ್ಯತೆಗಳನ್ನು ಹೊಂದಿರುವ ನಾಡು ಎಂದು ಬಣ್ಣಿಸಿದ್ದಾರೆ.

ಕರ್ನಾಟಕದ ವೈಭವೋಪೇತ ಪರಂಪರೆ ಮತ್ತು ಸಾರ್ವಕಾಲಿಕ ಆಚಾರ-ವಿಚಾರಗಳು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಲ್ಲಿನ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಹಾಗೂ ಭವಿಷ್ಯದ ಕ್ಷೇತ್ರಗಳಲ್ಲಿನ ಕೌಶಲದಿಂದ ವಿಶಿಷ್ಟ ಛಾಪು ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಮತ್ತು ನವೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕದ ಜನರು ತಮ್ಮ ಪ್ರತಿಭೆ ಹಾಗೂ ನೈಪುಣ್ಯವನ್ನು ಸಾಬೀತುಪಡಿಸಿದ್ದಾರೆ. ಜಾಗತಿಕ ಮಟ್ಟದ ಸಂಕೀರ್ಣ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಶೇಷ ಸಂದರ್ಭವು ಕರ್ನಾಟಕದ ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಮೋದಿ ಹಾರೈಸಿದ್ದಾರೆ.

PM Narendra Modi
ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ, ಆತ್ಮಗೌರವ: ಕನ್ನಡದ ಕಂಪು ಜಗದಗಲ ಪಸರಿಸಲಿ; ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದ ಸಿಎಂ

ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಸಹೋದರ ಮತ್ತು ಸಹೋದರಿಯರಿಗೆ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ.

ವೈಭವೋಪೇತ ಇತಿಹಾಸ ಮತ್ತು ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕರುನಾಡಿನ ಜನರು ತಮ್ಮ ಕಠಿಣ ಪರಿಶ್ರಮ ಹಾಗೂ ಭಾರತದ ಜಾಗತಿಕ ಸ್ಥಾನಮಾನ ಹೆಚ್ಚಿಸುವ ಕೊಡುಗೆಗಳ ಮೂಲಕ ನಾಡಿನ ಪರಂಪರೆಯನ್ನು ಬೆಳಗಿಸಿದ್ದಾರೆ ಎಂದು ಹೇಳಿದ್ದಾರೆ. ಕರ್ನಾಟಕದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X