ಎಐ, ವಿಜ್ಞಾನ, ನವೋದ್ಯಮಗಳ ಭಾಷೆಯಾಗಿ ಕನ್ನಡ ಬೆಳೆಯಬೇಕು: ಸಿಎಂ ಡಿಕೆ.ಶಿವಕುಮಾರ್

ಕನ್ನಡದ ಶಕ್ತಿಯೊಂದಿಗೆ ನಾವು ಜಗತ್ತನ್ನೇ ಗೆಲ್ಲಬೇಕು. ಎಐ, ವಿಜ್ಞಾನ, ನವೋದ್ಯಮಗಳು ಮತ್ತು ಡಿಜಿಟಲ್ ಯುಗದ ಭಾಷೆಯಾಗಿ ಕನ್ನಡ ಬೆಳೆಯಬೇಕು. ಒಂದು ಭಾಷೆ ಉಳಿಯಬೇಕಾದರೆ ಅದನ್ನು ಹೆಚ್ಚು ಹೆಚ್ಚು ಬಳಸಬೇಕು. ಜನರು ಆ ಭಾಷೆಯನ್ನು ಕಲಿಯುವ ಅಗತ್ಯ ಸೃಷ್ಟಿಯಾಗಬೇಕು.
Chief Minister DK Shivakumar and Kannada and Culture Minister Shivaraj Tangadagi with the 71 recipients of the Kannada Rajyotsava Award at Ravindra Kalakshetra.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 71 ಮಂದಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ.
Updated on: 

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ), ವಿಜ್ಞಾನ, ನವೋದ್ಯಮಗಳು ಹಾಗೂ ಡಿಜಿಟಲ್ ಯುಗದ ಭಾಷೆಯಾಗಿ ಕನ್ನಡ ಬೆಳೆಯಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶಯ ವ್ಯಕ್ತಪಡಿಸಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ 71 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮುಖ್ಯಮಂತ್ರಿಗಳು ಮಾತನಾಡಿದರು.

ಕನ್ನಡದ ಶಕ್ತಿಯೊಂದಿಗೆ ನಾವು ಜಗತ್ತನ್ನೇ ಗೆಲ್ಲಬೇಕು. ಎಐ, ವಿಜ್ಞಾನ, ನವೋದ್ಯಮಗಳು ಮತ್ತು ಡಿಜಿಟಲ್ ಯುಗದ ಭಾಷೆಯಾಗಿ ಕನ್ನಡ ಬೆಳೆಯಬೇಕು. ಒಂದು ಭಾಷೆ ಉಳಿಯಬೇಕಾದರೆ ಅದನ್ನು ಹೆಚ್ಚು ಹೆಚ್ಚು ಬಳಸಬೇಕು. ಜನರು ಆ ಭಾಷೆಯನ್ನು ಕಲಿಯುವ ಅಗತ್ಯ ಸೃಷ್ಟಿಯಾಗಬೇಕು ಎಂದು ಹೇಳಿದರು.

ಕರ್ನಾಟಕವನ್ನು ಭಾರತದ ಶಕ್ತಿಯನ್ನಾಗಿ ರೂಪಿಸುವ ದೂರದೃಷ್ಟಿಯೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಇತರ ಭಾಷೆಗಳನ್ನು ಗೌರವಿಸುವುದರ ಜತೆಗೆ ಕನ್ನಡವನ್ನು ಉಳಿಸಿ ಬೆಳೆಸುವುದು ಮುಖ್ಯ ಎಂದು ತಿಳಿಸಿದರು.

ಕನ್ನಡವನ್ನು ಪ್ರೀತಿಸುವುದು ಎಂದರೆ ಇತರ ಭಾಷೆಗಳನ್ನು ದ್ವೇಷಿಸುವುದಲ್ಲ. ಆದರೆ, ಕರ್ನಾಟಕದಲ್ಲಿ ಕನ್ನಡವೇ ಮೊದಲ ಭಾಷೆಯಾಗಿರಬೇಕು. ಕಚೇರಿಗಳು, ವ್ಯಾಪಾರ ವಹಿವಾಟುಗಳು ಹಾಗೂ ಸಾರ್ವಜನಿಕ ಸಂವಹನ ಸೇರಿದಂತೆ ದೈನಂದಿನ ಬದುಕಿನಲ್ಲಿ ಕನ್ನಡ ಬಳಕೆಯಾಗಬೇಕು" ಎಂದು ಪ್ರತಿಪಾದಿಸಿದರು.

ಇದೇ ವೇಳೆ ಕಳೆದ ವಾರ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ, ಬಿಟಿ ಕಂಪನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಮತ್ತು ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಎಚ್ಚರಿಕೆ ನೀಡಿದ್ದೇನೆ ಎಂದೂ ಸಿಎಂ ಹೇಳಿದರು.

ರಾಜ್ಯಾದ್ಯಂತ ಲಕ್ಷಾಂತರ ಸಾಧಕರಿದ್ದಾರೆ. ಆದರೆ ಈ 71 ಮಂದಿಯನ್ನು ಅವರ ಸಾಧನೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕದ ಜನರು ನೀಡುವ ಆಶೀರ್ವಾದವಾಗಿದೆ ಎಂದರು.

71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

Chief Minister DK Shivakumar and Kannada and Culture Minister Shivaraj Tangadagi with the 71 recipients of the Kannada Rajyotsava Award at Ravindra Kalakshetra.
ಕನ್ನಡ ರಾಜ್ಯೋತ್ಸವ: ನಿಷೇಧದ ನಡುವೆಯೂ ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನ; ನಾಡವಿರೋಧಿ ಘೋಷಣೆ!

ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ, ಹಿರಿಯ ನಟ ಅಶೋಕ್, ಯಕ್ಷಗಾನ ಕಲಾವಿದ ಗೋಪಾಲ ಗಾಣಿಗ, ಲೇಖಕಿ ಹಾಗೂ ಸಂಶೋಧಕಿ ಇಂದಿರಾ ಹೆಗಡೆ ಮತ್ತು ರಾಜಕಾರಣಿ ಕಾಗೋಡು ತಿಮ್ಮಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾನಪದ ಕಲೆ ವಿಭಾಗದಲ್ಲಿ ಏಳು, ಸಂಗೀತದಲ್ಲಿ ಮೂವರು, ನೃತ್ಯದಲ್ಲಿ ಒಬ್ಬರು ಹಾಗೂ ಚಲನಚಿತ್ರ ಮತ್ತು ಕಿರುತೆರೆ ವಿಭಾಗದಲ್ಲಿ ಮೂವರು ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ಪುರಸ್ಕೃತರಲ್ಲಿ 12 ಮಹಿಳೆಯರೂ ಸೇರಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ಬಿ.ವಿ. ಆಚಾರ್ಯ ಅವರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಸ್ವಾಗತಾರ್ಹ ಕ್ರಮ ಎಂದು ಹೇಳಿದರು.

ಎಲ್ಲ ಪ್ರಶಸ್ತಿ ಪುರಸ್ಕೃತರ ಪರವಾಗಿ ನಮ್ಮ ಸಾಧನೆಗಳನ್ನು ಗುರುತಿಸಿ ಗೌರವಿಸಿದ ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸದಿದ್ದರೆ ಕ್ರಮ: ಸರ್ಕಾರ ಎಚ್ಚರಿಕೆ

ಇದೇ ವೇಳೆ ನಾಮಫಲಕಗಳಲ್ಲಿ ಕನ್ನಡ ಬಳಸದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯ್ದೆಯಡಿ ನಾಮಫಲಕಗಳಲ್ಲಿ ಕನಿಷ್ಠ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಲಾಗಿದೆ. ಆದರೂ ಹಲವು ನಗರ ಪ್ರದೇಶಗಳು ಮತ್ತು ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಪಾದಚಾರಿ ಸುರಕ್ಷತೆ ಪರಿಶೀಲಿಸಲು 11 ಕಿ.ಮೀ. ನಡಿಗೆ

ಬಿಎನ್‌ಸಿಸಿ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ 'ವಾಕಲೂರು ಸೇಫ್ 1,000 ಕಿ.ಮೀ. ಫುಟ್‌ಪಾತ್ ಚಾಲೆಂಜ್' ಅಭಿಯಾನದ ಭಾಗವಾಗಿ ತಣಿಸಂದ್ರ ಮುಖ್ಯರಸ್ತೆಯಲ್ಲಿ 11 ಕಿ.ಮೀ. ಉದ್ದದ ಕನ್ನಡ ರಾಜ್ಯೋತ್ಸವ ನಡಿಗೆ ಆಯೋಜಿಸಲಾಗಿತ್ತು.

ಪಾದಚಾರಿ ಮಾರ್ಗಗಳ ಸುರಕ್ಷತೆಯನ್ನು ಪರಿಶೀಲಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ನಡಿಗೆಯ ವೇಳೆ ಬಿಎನ್‌ಸಿಸಿ ತಂಡವು ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ತೊಂದರೆಗಳು ಮತ್ತು ಸಮಸ್ಯೆಗಳನ್ನು ಛಾಯಾಚಿತ್ರಗಳ ಮೂಲಕ ದಾಖಲಿಸಿ, ಅಗತ್ಯ ಮಾಹಿತಿಯನ್ನು ಸಂಗ್ರಹಿಸಿತು.

ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ಒದಗಿಸುವ ನಿಗಮದ ಪ್ರಯತ್ನದಲ್ಲಿ ನಾಗರಿಕರು ಭಾಗವಹಿಸಿರುವುದಕ್ಕೆ ಬಿಎನ್‌ಸಿಸಿ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಇಸಿಸಿ ಆಯುಕ್ತ ಡಿ.ಎಸ್. ರಮೇಶ್ ಹಾಗೂ ಬಿಸಿಸಿಸಿ ಆಯುಕ್ತ ಜಿ. ಜಗದೀಶ್ ಅವರು, ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರೊಂದಿಗೆ ಕನ್ನಡದಲ್ಲೇ ಸಂವಹನ ನಡೆಸಲು ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X