

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತನ್ನ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಸಾವಿರಕ್ಕೂ ಹೆಚ್ಚು ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳನ್ನು ನಿಯಂತ್ರಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ರೂಪಿಸುತ್ತಿದೆ. ಆದರೆ, ಅನಧಿಕೃತ ಪಿಜಿಗಳ ವಿರುದ್ಧ ಹಲವು ವರ್ಷಗಳಿಂದ ಧ್ವನಿ ಎತ್ತುತ್ತಿರುವ ನಾಗರಿಕ ಹೋರಾಟಗಾರರು ಮತ್ತು ಸ್ವಯಂಸೇವಾ ಸಂಸ್ಥೆಗಳು, ಪ್ರಸ್ತಾಪಿತ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಜಿಬಿಎ ನಡೆಸಿದ ಪರಿಶೀಲನೆಯ ಪ್ರಕಾರ, ನಗರದಲ್ಲಿ 3,597 ಅನಧಿಕೃತ ಪಿಜಿಗಳಿವೆ. ಕಳೆದ ಒಂದು ದಶಕದಿಂದ ನಗರದಲ್ಲಿ ಪಿಜಿ ನಿಯಮಗಳ ಉಲ್ಲಂಘನೆ ವ್ಯಾಪಕವಾಗಿ ನಡೆಯುತ್ತಿದ್ದರೂ, ಜಿಬಿಎ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದು ಪದೇಪದೇ ಹೈಕೋರ್ಟ್ ನೀಡಿದ ಕಠಿಣ ಸೂಚನೆಗಳ ನಂತರವೇ ಎಂದು ಬೆಂಗಳೂರು ಕೊಯಲಿಷನ್‌ನ ರಾಜಗೋಪಾಲನ್ ಆರ್. ಹೇಳಿದ್ದಾರೆ.
ನಿಯಮ ಉಲ್ಲಂಘನೆಗಳ ವಿರುದ್ಧ ವಾಸ್ತವದಲ್ಲಿ ಯಾವುದೇ ಗಮನಾರ್ಹ ಕ್ರಮಗಳು ನಡೆದಿಲ್ಲ. ಪರಿಷ್ಕೃತ ನೀತಿ ಅಥವಾ ಎಸ್‌ಒಪಿ ರೂಪಿಸುವ ಪ್ರಸ್ತಾಪವಿದ್ದರೂ, 2024ರ ಮಾರ್ಗಸೂಚಿಗಳನ್ನು ಬಹಿರಂಗವಾಗಿಯೇ ಉಲ್ಲಂಘಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಸತಿ ಪ್ರದೇಶಗಳಲ್ಲಿ ಪಿಜಿಗಳ ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ವಲಯ ನಿಯಮಾವಳಿಗಳನ್ನು ತಿದ್ದುಪಡಿ ಮಾಡಬೇಕು. ಅಲ್ಲದೆ, ಹಾಸ್ಟೆಲ್‌ಗಳಿಗಿಂತ ಭಿನ್ನವಾಗಿರುವ ಪಿಜಿಗಳಿಗೆ ಜಿಬಿಎ ಪ್ರತ್ಯೇಕ ವರ್ಗೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ನಗರಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪಿಜಿಗಳು ಕಡಿಮೆ ವೆಚ್ಚದ ವಸತಿ ವ್ಯವಸ್ಥೆಯಾಗಿವೆ. ಹೀಗಾಗಿ ಇವುಗಳನ್ನು ನಿರ್ಬಂಧಿಸಬಾರದು ಎಂದು ಪಿಜಿ ಮಾಲೀಕರ ಸಂಘ ಸಮರ್ಥಿಸಿಕೊಂಡಿದೆ.
ಆದರೆ, ಈ ವಾದವನ್ನು ಒಪ್ಪದ ಬೆಂಗಳೂರಿನ ನಾಗರಿಕರ ವೇದಿಕೆಯ ಸಂಚಾಲಕ ಸಂದೀಪ್ ಅನಿರುದ್ಧನ್, ಅಕ್ರಮ ಪಿಜಿಗಳ ಹಾವಳಿ ಮತ್ತು ಕಟ್ಟಡ ನಿಯಮಗಳ ಉಲ್ಲಂಘನೆ ರಾಜ್ಯದ ಎರಡು ಮೂಲಭೂತ ವೈಫಲ್ಯಗಳಾದ ಯೋಜನಾರಹಿತ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಯ ಕುಸಿತದ ಪರಿಣಾಮ ಎಂದು ಹೇಳಿದ್ದಾರೆ.
ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ, ಉಳಿದ ಕ್ರಮಗಳೆಲ್ಲವೂ ಕೇವಲ ಮೇಲ್ನೋಟದ ಬದಲಾವಣೆಗಳಾಗಲಿವೆ. ಬೆಂಗಳೂರು ವೇಗವಾಗಿ ಕೊಳಗೇರಿ ನಗರವಾಗಿ ಬದಲಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಅಕ್ರಮ ಕಟ್ಟಡಗಳು ಮತ್ತು ಬಡಾವಣೆಗಳನ್ನು ವಶಕ್ಕೆ ಪಡೆದು, ಕಾನೂನುಬದ್ಧವಾಗಿ ಮರುಅಭಿವೃದ್ಧಿಪಡಿಸಿ, ನಂತರ ಆಸ್ತಿಗಳನ್ನು ಮಾರಾಟ ಮಾಡುವ ಅಧಿಕಾರ ಹೊಂದಿರುವ ಸ್ವಾಯತ್ತ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಕಟ್ಟಡ ನಿರ್ಮಾಣ ಮತ್ತು ನೆಲಸಮ ಪ್ರಕ್ರಿಯೆಗಳನ್ನು ಒಳಗೊಂಡ ಮರುಬಳಕೆ ಆರ್ಥಿಕ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
"ಆರ್ಥಿಕ ಪ್ರೋತ್ಸಾಹ, ಮೂಲಸೌಕರ್ಯ ನೆರವು ಮತ್ತು ಭೂಮಿಯ ಲಭ್ಯತೆಯನ್ನು ಒದಗಿಸುವ ವಿಶೇಷ ನವೋದ್ಯಮ ನೀತಿ ರೂಪಿಸಬೇಕು. ಇದರ ಜೊತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣ ಮತ್ತು ನೆಲಸಮದ ತ್ಯಾಜ್ಯ ಮರುಬಳಕೆ ಉದ್ಯಾನಗಳನ್ನು ಸ್ಥಾಪಿಸಿದರೆ, ಆಧುನಿಕ ನೆಲಸಮ ಮತ್ತು ಮರುಬಳಕೆ ತಂತ್ರಜ್ಞಾನಗಳಲ್ಲಿ ಹೂಡಿಕೆ ಆಕರ್ಷಿಸಬಹುದು. ಇದರಿಂದ ಹೊಸ ಹಸಿರು ಉದ್ಯಮವನ್ನೂ ಸೃಷ್ಟಿಸಬಹುದು ಎಂದು ಅವರು ಹೇಳಿದ್ದಾರೆ.
ಬಿಎನ್‌ಪಿ ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್ ಮಾತನಾಡಿ, ಪಿಜಿಗಳ ವ್ಯವಹಾರವು ಮಾಲೀಕರು ಮತ್ತು ರಾಜಕಾರಣಿಗಳ ನಡುವಿನ ಪ್ರಬಲ ನಂಟಿನೊಂದಿಗೆ ಬೆಳೆಯುತ್ತಿದೆ. ನಿಯಮಗಳನ್ನು ಪಾಲಿಸಲು ಬಯಸುವ ಸಣ್ಣ ಮಾಲೀಕರು ವ್ಯವಹಾರದಿಂದ ಹೊರಗುಳಿಯುವಂತಾಗಿದೆ. ಹಲವು ಸಂದರ್ಭಗಳಲ್ಲಿ ಹೊಸ ನಿಯಮಗಳು ಪ್ರಭಾವಿಗಳಿಗೆ ರಕ್ಷಣಾ ಕವಚವಾಗುತ್ತವೆ ಎಂದು ಹೇಳಿದ್ದಾರೆ.
ಪಿಜಿಗಳ ಕಾರ್ಯಾಚರಣೆಯನ್ನು ವ್ಯವಸ್ಥಿತಗೊಳಿಸುವುದು ಸರ್ಕಾರದ ನಿಜವಾದ ಉದ್ದೇಶವಾಗಿದ್ದರೆ, ಎಸ್‌ಒಪಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಅವುಗಳಲ್ಲಿ ಯಾವೆಲ್ಲ ಅಂಶಗಳಿವೆ ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು. ಈ ಕುರಿತು ಸರ್ಕಾರ ವ್ಯಾಪಕ ಸಾರ್ವಜನಿಕ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಸಮಸ್ಯೆಯಿಂದ ಹೊರಬರುವ ಮಾರ್ಗಗಳು...
ನಗರದಲ್ಲಿ ಹೆಚ್ಚುತ್ತಿರುವ ಪಿಜಿಗಳ ಮೇಲೆ ನಿಯಂತ್ರಣ ಮತ್ತು ಹೊಣೆಗಾರಿಕೆ ಖಚಿತಪಡಿಸಲು ತಜ್ಞರು ಹಲವು ಸಲಹೆಗಳನ್ನು ನೀಡಿದ್ದಾರೆ.
ಐದು ನಗರ ಪಾಲಿಕೆಗಳಲ್ಲಿಯೂ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಮತ್ತು ನಿಯಮಗಳ ಪಾಲನೆಯನ್ನು ಖಚಿತಪಡಿಸಲು ವಿಶೇಷ ಕಾರ್ಯಪಡೆ ರಚಿಸಬೇಕು. ಈಗಿರುವ ಕಾನೂನುಗಳನ್ನು ತಕ್ಷಣವೇ ಜಾರಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಐದು ಪ್ರಮುಖ ಅಂಶಗಳ ಮೇಲೆ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ:
ವಲಯ ನಿಯಮಗಳ ಪಾಲನೆ: ವಸತಿ ಪ್ರದೇಶಗಳಲ್ಲಿ ಪಿಜಿಗಳ ಕಾರ್ಯಾಚರಣೆ ವಲಯ ನಿಯಮಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಕಟ್ಟಡ ನಿಯಮಗಳ ಪಾಲನೆ: ಅಗ್ನಿ ಸುರಕ್ಷತೆ, ವಾಹನ ನಿಲುಗಡೆ ವ್ಯವಸ್ಥೆ ಮತ್ತು ಅನುಮೋದಿತ ಕಟ್ಟಡ ನಕ್ಷೆಯ ಅನುಸಾರ ನಿರ್ಮಾಣವಾಗಿದೆಯೇ ಎಂಬುದನ್ನು ಖಚಿತಪಡಿಸಬೇಕು.
ಸುರಕ್ಷತೆ: ಆಹಾರ ಸುರಕ್ಷತೆಗಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಿಯಮಗಳನ್ನು ಪಾಲಿಸಬೇಕು. ವೈಯಕ್ತಿಕ ಸುರಕ್ಷತೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪ್ರಕ್ರಿಯೆ ಜಾರಿಯಲ್ಲಿರಬೇಕು.
ವ್ಯಾಪಾರ ಪರವಾನಗಿ: 2024ರ ಬಿಬಿಎಂಪಿ ಪಿಜಿ ಮಾರ್ಗಸೂಚಿಗಳು ಮತ್ತು ತಿದ್ದುಪಡಿಗಳನ್ನು ಪಾಲಿಸಬೇಕು. ಅರ್ಹತಾ ಮಾನದಂಡಗಳನ್ನು ವಾರ್ಷಿಕವಾಗಿ ಪರಿಶೀಲಿಸಬೇಕು.
ಘನತ್ಯಾಜ್ಯ ನಿರ್ವಹಣೆ: ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಘಟಕಗಳಿಗೆ ಅನ್ವಯಿಸುವ ನಿಯಮಗಳ ಅಡಿಯಲ್ಲಿ ಪಿಜಿಗಳನ್ನು ಕಡ್ಡಾಯವಾಗಿ ವರ್ಗೀಕರಿಸಿ, ಘನತ್ಯಾಜ್ಯ ನಿರ್ವಹಣೆಯನ್ನು ಖಚಿತಪಡಿಸಬೇಕು.