

ಮೈಸೂರು: ಮೈಸೂರು ದಸರಾ ಸಂಪ್ರದಾಯಗಳ ಕುರಿತ ಗೊಂದಲಗಳ ನಡುವೆ, ಅರಮನೆಯ ಭೂಮಿ ಹಸ್ತಾಂತರದ ಬಗ್ಗೆ ಸ್ಪಷ್ಟನೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೀಡಿದ್ದಾರೆ. ಅರಮನೆಯ ಸಂಪೂರ್ಣ ಜಾಗವನ್ನು ಸರ್ಕಾರಕ್ಕೆ ಹಸ್ತಾಂತರಿಸಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ, ಅದು ನಮ್ಮದೇ ಜಾಗ ಎಂದು ಸ್ಪಷ್ಟಪಡಿಸಿದ್ದಾರೆ. ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅವರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ ಎಂದು ಸಚಿವ ಯತೀಂದ್ರ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದೀಗ ಪ್ರಮೋದಾ ದೇವಿ ತಿರುಗೇಟು ನೀಡಿದ್ದಾರೆ.
ಅಂಬಾರಿ ಹಾಗೂ ಸಿಂಹಾಸನವು ಅರಮನೆ ಸ್ವಾಧೀನ ಕಾಯ್ದೆಗೆ ಒಳಪಡದ ಸಂಪೂರ್ಣ ಖಾಸಗಿ ಸ್ವತ್ತಾಗಿದ್ದು, ಹಿಂದೆಯೂ ನಮ್ಮ ಸುಪರ್ದಿಯಲ್ಲೇ ಇತ್ತು, ಮುಂದೆಯೂ ನಮ್ಮದಾಗಿಯೇ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 1947ರಲ್ಲಿಯೇ ಖಾಸಗಿ ಸ್ವತ್ತುಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದ್ದು, 1951ರಲ್ಲಿ ವಿ.ಪಿ. ಮೆನನ್ ಅವರು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ ಎಂದರು.
ಅರಮನೆಯ ವಾಸದ ವಿಭಾಗ ಈಗಲೂ ರಾಜಮನೆತನದ ಸುಪರ್ದಿಯಲ್ಲಿದೆ. ಸಾರ್ವಜನಿಕರು ವೀಕ್ಷಿಸುವ ಮುಂಭಾಗದ ಭಾಗವನ್ನು ಮಾತ್ರ ಸರ್ಕಾರ ನಿರ್ವಹಿಸುತ್ತಿದೆ. ಅಂಬಾರಿ ಮತ್ತು ಸಿಂಹಾಸನ ಸೇರಿದಂತೆ ಕೆಲವು ಪ್ರಮುಖ ವಸ್ತುಗಳು ಎಂದಿಗೂ ಸರ್ಕಾರದ ವಶಕ್ಕೆ ಹೋಗಿಲ್ಲ, ಅವು ಸದಾ ಅರಮನೆಯಲ್ಲೇ ಇವೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ಜಯಚಾಮರಾಜ ಒಡೆಯರ್ ನಿಧನದ ಬಳಿಕ 8 ಕೋಟಿ ರೂ.ಗೂ ಅಧಿಕ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಬಂದಾಗ, ಅರಮನೆ ನೋಡಿಕೊಳ್ಳುವುದಾಗಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಒಪ್ಪಂದದಂತೆ ನಡೆದುಕೊಳ್ಳದ ಕಾರಣ ನಾವು ಕೋರ್ಟ್ ಮೊರೆ ಹೋಗಿದ್ದು, 30 ದಿನಗಳಲ್ಲಿ ಅರಮನೆ ಮರಳಿಸುವಂತೆ ಕೋರ್ಟ್ ಆದೇಶಿಸಿದ್ದರೂ ಸರ್ಕಾರ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳಿಗೆ ನಮ್ಮ ಖಾಸಗಿ ಆಸ್ತಿಗಳ ಬಗ್ಗೆ ಸರಿಯಾದ ಓದು ಹಾಗೂ ಮಾಹಿತಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಸರಾ ಸಂದರ್ಭದಲ್ಲಿ ಪೊಲೀಸರ ಅತಿಯಾದ ನಿರ್ಬಂಧದಿಂದ ಧಾರ್ಮಿಕ ವಿಧಿವಿಧಾನಗಳಿಗೆ ತೊಂದರೆಯಾಗಿದೆ ಎಂದ ಅವರು, ಬ್ರಹ್ಮಪುರಿ ಗೇಟ್ ಬಳಿ ಕರ್ತವ್ಯ ಲೋಪ ಎಸಗಿರುವ ಎಸಿಪಿ ಚಂದ್ರಶೇಖರ್ ವಿರುದ್ಧ ಕ್ರಮವಾಗಬೇಕು ಎಂದರು. ಜಟ್ಟಿ ಕಾಳಗ ಹಾಗೂ ಪಟ್ಟದ ಕತ್ತಿಯಿಂದ ಕುಂಬಳಕಾಯಿ ಕತ್ತರಿಸುವುದು ನಮ್ಮ ಪರಂಪರೆಯ ಧಾರ್ಮಿಕ ಆಚರಣೆಯಾಗಿದ್ದು, ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.
ಅಂಬಾರಿಗೆ ಅವರು ಕೊಡುತ್ತಿರೋದು ಬಾಡಿಗೆಯಲ್ಲ, ಅದು ರಾಯಲ್ಟಿ. ನಮ್ಮ ವಸ್ತು ಬಳಸಿಕೊಂಡು ಅವರು ಪ್ರಚಾರ ಮಾಡುತ್ತಾರೆ. ಅದಕ್ಕಾಗಿ ರಾಯಲ್ಟಿ ಕೊಡುತ್ತಾರೆ. ರಾಯಲ್ಟಿ ಎಷ್ಟು ಬೇಕಾದರೂ ಕೇಳಬಹುದು. ಎಷ್ಟು ಪಡೆಯುತ್ತೇವೆ ಎಂಬುದನ್ನು ನಾನು ಹೇಳುವುದಿಲ್ಲ. ಸರ್ಕಾರ ಅದನ್ನು ಬಹಿರಂಗ ಮಾಡುತ್ತದೆ ಎಂದರೆ ನನ್ನ ಆಕ್ಷೇಪಣೆ ಇಲ್ಲ ಎಂದು ಹೇಳಿದರು.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಯದು ವಂಶದ ಆಚರಣೆಯನ್ನು ಸರ್ಕಾರ ಮುಂದುವರೆಸುತ್ತಿಲ್ಲ. ಸರ್ಕಾರ ಯದು ವಂಶದ ವಾರಸುದಾರ ಅಲ್ಲ. ಅವರು ಮಾಡುತ್ತಿರುವುದು ಸಾಂಸ್ಕೃತಿಕ ಕಾರ್ಯಕ್ರಮ. ನಾನು ಹಿಂದೆಯೇ ಹೇಳಿದ್ದೇನೆ. ನೀವು ದಸರಾ ಮಾಡುವಾಗ ನಮ್ಮನ್ಯಾಕೆ ಅಂಬಾರಿ ಕೇಳುತ್ತೀರಿ ಎಂದಿದ್ದೇನೆ. ನೀವೇ ಒಂದು ಅಂಬಾರಿ ತಯಾರಿಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದೇನೆ. ಸರ್ಕಾರ ಅವರೇ ಒಂದು ಅಂಬಾರಿ ತಯಾರಿಸಿಕೊಂಡು ದಸರಾ ಮಾಡಿದರೆ ನಮ್ಮ ಅಭ್ಯಂತರ ಇಲ್ಲ ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದರು.
1998 ರಲ್ಲಿ ಒಂದು ಕೋಟಿ ಹಣ, ಒಂದು ಎಕರೆ ಜಾಗ ಕೊಡುತ್ತೇವೆ. ನೀವು 6 ತಿಂಗಳಲ್ಲಿ ಅರಮನೆ ಬಿಟ್ಟು ಕೊಡಿ ಎಂದು ಹೇಳಿದ್ದರು. ಇದಕ್ಕೆ ನಮ್ಮ ಪತಿ ದಿವಂಗತ ಶ್ರೀಕಂಠದತ್ತ ಒಡೆಯರ್ ಒಪ್ಪಲಿಲ್ಲ. ಒಂದು ಕೋಟಿ ಹಣ ಇವತ್ತು ಅರಮನೆಯ ಒಂದು ಕಂಬಕ್ಕೆ ಆಗಲ್ಲ. ಮುಖ್ಯಮಂತ್ರಿ ಮತ್ತು ಸಚಿವರ ಜೊತೆ ಮಾತನಾಡಲು ನಾನು ಸಿದ್ದ. ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳುತ್ತೇನೆ ಎಂದು ಸಿಎಂ ಹೇಳಿರುವುದಕ್ಕೆ ಧನ್ಯವಾದಗಳು. ನಮ್ಮ ಹೇಳಿಕೆಯನ್ನು ಸೆನ್ಸಷೆನ್ಸೈಸ್ ಮಾಡುವುದು ಬೇಡ, ನಾನು ಹೇಳಿರುವದನ್ನು ಅಷ್ಟೇ ಜನರಿಗೆ ತಲುಪಿಸಿ ಎಂದು ಮನವಿ ಮಾಡಿದರು.
ಅಂಬಾರಿ ಮೆರವಣಿಗೆಗೆ ಸರ್ಕಾರ ಯಾವುದೇ ‘ಬಾಡಿಗೆ’ ನೀಡುವುದಿಲ್ಲ, ಬದಲಿಗೆ ಗೌರವಧನ (ರಾಯಲ್ಟಿ) ನೀಡುತ್ತದೆ ಎಂದು ಸ್ಪಷ್ಟಪಡಿಸಿದರು. ಅಂತಿಮವಾಗಿ, ಮುಖ್ಯಮಂತ್ರಿಗಳು ಹಾಗೂ ಸಚಿವರು ಈ ಕುರಿತು ಮಾತನಾಡಲು ಬಯಸಿದರೆ, ಸರ್ಕಾರದೊಂದಿಗೆ ಮಾತುಕತೆ ನಡೆಸಲು ತಾವು ಸಂಪೂರ್ಣ ಸಿದ್ಧವಿರುವುದಾಗಿ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ಅರಮನೆಯ ವಾಸದ ಭಾಗದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ. ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಉಂಟಾದರೆ ನ್ಯಾಯಾಲಯವನ್ನು ಸಂಪರ್ಕಿಸುವ ಹಕ್ಕು ರಾಜಮನೆತನಕ್ಕಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಕ್ಕೆ ಪ್ರಮೋದಾದೇವಿ ಧನ್ಯವಾದ ಅರ್ಪಿಸಿದ್ದಾರೆ.