250ಕ್ಕೂ ಹೆಚ್ಚು ದೇಶಿ ಬೀಜಗಳ ಸಂರಕ್ಷಣೆ: ಕರ್ನಾಟಕದ ಬಿಬಿ ಫಾತಿಮಾ ಮಹಿಳಾ ಸಂಘಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ..!

ನನ್ನ ತಂದೆ ಬೀಜಗಳನ್ನು ಸಂರಕ್ಷಿಸುತ್ತಿದ್ದರು. ಅವರಿಂದ ನನಗೂ ಬೀಜ ಸಂರಕ್ಷಣೆಯಲ್ಲಿ ಆಸಕ್ತಿ ಮೂಡಿತು. 2018ರಲ್ಲಿ ಮಹಿಳಾ ಸ್ವಸಹಾಯ ಸಂಘ ಮತ್ತು ಸೀಡ್ ಬ್ಯಾಂಕ್ ಸ್ಥಾಪಿಸಿದೆ.
Members of Bibi Fathima Women’s Self Help Group in a field in Kundgol.
ಕುಂದಗೋಳದ ಹೊಲವೊಂದರಲ್ಲಿ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು.
Updated on: 

ಬೆಂಗಳೂರು: ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಕರ್ನಾಟಕದ ಮಹಿಳಾ ಸ್ವಸಹಾಯ ಸಂಘಕ್ಕೆ ಅತ್ಯುನ್ನತ ಗೌರವ ಒಲಿದುಬಂದಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದ ಬಿಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘಕ್ಕೆ (SHG) ಪ್ರತಿಷ್ಠಿತ ಸಸ್ಯ ಜೀನೋಮ್ ಸಂರಕ್ಷಕ ಸಮುದಾಯ ಪ್ರಶಸ್ತಿಗೆ ಲಭಿಸಿದೆ.

ರೈತ ಮಹಿಳೆ ಬೀಬಿಜಾನ್ ಮೌಲಾಸಾಬ್ ಹಳೇಮನಿ ಅವರ ನೇತೃತ್ವದಲ್ಲಿ ಆರಂಭವಾದ ಈ ಸಂಘ, ಈ ಭಾಗದ ನೂರಾರು ಬಗೆಯ ಸ್ಥಳೀಯ ಬೀಜಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಔಪಚಾರಿಕ ಶಿಕ್ಷಣ ಕಡಿಮೆ ಇದ್ದರೂ ಬಾಲ್ಯದಿಂದಲೇ ಕೃಷಿಯಲ್ಲಿ ಅಪಾರ ಅನುಭವ ಹೊಂದಿರುವ ಬೀಬಿಜಾನ್, ಕೃಷಿ ಕ್ಷೇತ್ರದಲ್ಲಿ ವಿಭಿನ್ನವಾದದ್ದನ್ನು ಸಾಧಿಸಬೇಕೆಂಬ ಉದ್ದೇಶದಿಂದ ಶ್ರಮಿಸಿದ್ದಾರೆ. ತಾವು ಸಂಗ್ರಹಿಸಿದ್ದ ದೇಶಿ ಬೀಜಗಳನ್ನು ಉಳಿಸುವ ಉದ್ದೇಶದಿಂದ ಇತರ 14 ಮಹಿಳೆಯರೊಂದಿಗೆ ಕೈಜೋಡಿಸಿದ್ದಾರೆ.

ನನ್ನ ತಂದೆ ಬೀಜಗಳನ್ನು ಸಂರಕ್ಷಿಸುತ್ತಿದ್ದರು. ಅವರಿಂದ ನನಗೂ ಬೀಜ ಸಂರಕ್ಷಣೆಯಲ್ಲಿ ಆಸಕ್ತಿ ಮೂಡಿತು. 2018ರಲ್ಲಿ ಮಹಿಳಾ ಸ್ವಸಹಾಯ ಸಂಘ ಮತ್ತು ಸೀಡ್ ಬ್ಯಾಂಕ್ ಸ್ಥಾಪಿಸಿದೆ. ಜನರಿಗೆ ಉತ್ತಮ ಗುಣಮಟ್ಟದ ದೇಶಿ ಬೀಜಗಳನ್ನು ಒದಗಿಸುವುದು, ಉತ್ತಮ ಆರೋಗ್ಯ ಹಾಗೂ ಗುಣಮಟ್ಟದ ಕೃಷಿ ಉತ್ಪಾದನೆಗೆ ನೆರವಾಗುವುದು ನಮ್ಮ ಉದ್ದೇಶ ಎಂದು ಬೀಬಿಜಾನ್ ತಿಳಿಸಿದ್ದಾರೆ.

ಸಾವಯವ ಕೃಷಿಯನ್ನು ಉತ್ತೇಜಿಸುವ ಸಹಜ ಸಮೃದ್ಧ ಸಂಸ್ಥೆಯ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಈ ಮಹಿಳಾ ಸಂಘವು ಕೃಷಿ ಜೀವವೈವಿಧ್ಯ ಸಂರಕ್ಷಣೆ ಹಾಗೂ ಗ್ರಾಮೀಣ ಉದ್ಯಮಶೀಲತೆಯಲ್ಲಿ ಮಹಿಳಾ ನಾಯಕತ್ವಕ್ಕೆ ಮಾದರಿಯಾಗಿದೆ. ಮಳೆ ಆಶ್ರಿತ ಕೃಷಿ ಪ್ರದೇಶಗಳ 30 ಗ್ರಾಮಗಳಲ್ಲಿ ಸಿರಿಧಾನ್ಯ ಆಧಾರಿತ ಮಿಶ್ರ ಬೆಳೆ ಪದ್ಧತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಸಂಘ ಮಹತ್ವದ ಪಾತ್ರ ವಹಿಸಿದೆ.

ಹವಾಮಾನ ಬದಲಾವಣೆಯನ್ನು ತಡೆದುಕೊಳ್ಳುವ ಕೃಷಿ ಪದ್ಧತಿಗಳ ಪ್ರಚಾರ, ಪಶುಸಂಗೋಪನೆ, ತೋಟಗಾರಿಕೆ, ಮಹಿಳಾ ಸಬಲೀಕರಣ ಹಾಗೂ ಕುಟುಂಬಗಳ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಬಲಪಡಿಸುವುದು ಸಂಘದ ಪ್ರಮುಖ ಚಟುವಟಿಕೆಗಳಾಗಿವೆ.

Members of Bibi Fathima Women’s Self Help Group in a field in Kundgol.
Karnataka Rajyotsava Award 2026: ನಟ ಅಶೋಕ್ ಸೇರಿದಂತೆ ಈ ಬಾರಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ!

ನಮ್ಮಲ್ಲಿರುವ ಸಮೃದ್ಧ ಕೃಷಿ ಜೀವವೈವಿಧ್ಯವನ್ನು ಜಗತ್ತಿಗೆ ಪರಿಚಯಿಸಬೇಕೆಂಬ ಉದ್ದೇಶ ನಮ್ಮದಾಗಿತ್ತು. ಅಳಿದುಹೋಗಿದ್ದ ಹಾಗೂ ಅಳಿವಿನಂಚಿನಲ್ಲಿದ್ದ ಬೀಜಗಳನ್ನು ಮತ್ತೆ ಸಂಗ್ರಹಿಸಿ ಬೆಳೆಸಲು ಸಾಕಷ್ಟು ಶ್ರಮಿಸಿದ್ದೇವೆ. ಇಂದು ನಮ್ಮ ಬಳಿ 250ಕ್ಕೂ ಹೆಚ್ಚು ಬಗೆಯ ಬೀಜಗಳು, ಬೇಳೆಕಾಳುಗಳು, ಸಿರಿಧಾನ್ಯಗಳು, ಭತ್ತ ಮತ್ತು ತರಕಾರಿ ತಳಿಗಳಿವೆ ಎಂದು ಬೀಬಿಜಾನ್ ಹೇಳಿದ್ದಾರೆ.

ಸ್ಥಳೀಯ ಹವಾಮಾನ ಮತ್ತು ಕೃಷಿ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯುವ, ಹವಾಮಾನ ವೈಪರೀತ್ಯವನ್ನೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ದೇಶಿ ಸಿರಿಧಾನ್ಯ ತಳಿಗಳನ್ನು ಸಂರಕ್ಷಿಸಿರುವುದು ಸಂಘದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.

ಸಂಘದ ಸಮುದಾಯ ಬೀಜ ಬ್ಯಾಂಕ್‌ನಲ್ಲಿ ಜೋಳ, ರಾಗಿಯ 70 ತಳಿಗಳು, ಸಾಮೆಯ 25 ತಳಿಗಳು, ಸಿರಿಧಾನ್ಯದ ಎರಡು ತಳಿಗಳು, 25 ಬಗೆಯ ಹುರುಳಿ, ಕಡಲೆಯ 10 ತಳಿಗಳು, ಭತ್ತದ 25 ತಳಿಗಳು, ಹೆಸರುಕಾಳಿನ ಮೂರು ತಳಿಗಳು, ಸುಮಾರು 12 ಬಗೆಯ ಎಣ್ಣೆಕಾಳುಗಳು, ನವಣೆಯ 10 ತಳಿಗಳು ಹಾಗೂ ಹಲವು ಬಗೆಯ ತರಕಾರಿ ಬೀಜಗಳನ್ನು ಸಂರಕ್ಷಿಸಲಾಗಿದೆ.

ಮನೆಯ ಕೈತೋಟಗಳಲ್ಲಿ ಉತ್ತಮ ಗುಣಮಟ್ಟದ ದೇಶಿ ತರಕಾರಿಗಳನ್ನು ಬೆಳೆಸಲು ಜನರಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಈ ಪ್ರಶಸ್ತಿಯನ್ನು ನೀಡುತ್ತದೆ. ಪ್ರಶಸ್ತಿಯು ₹10 ಲಕ್ಷ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ದೇಶಿ ಬೆಳೆ ತಳಿಗಳ ಸಂರಕ್ಷಣೆ, ಸಾಂಪ್ರದಾಯಿಕ ಬೀಜ ಸಂಪತ್ತಿನ ರಕ್ಷಣೆ, ಸುಸ್ಥಿರ ಕೃಷಿ ಪದ್ಧತಿಗಳ ಉತ್ತೇಜನ ಹಾಗೂ ರೈತರ ಜೀವನೋಪಾಯ ಸುಧಾರಣೆಗೆ ಮಹಿಳಾ ಸಂಘಟನೆ ನೀಡಿರುವ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. 2026ರ ನವೆಂಬರ್ 12ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇದಲ್ಲದೆ, ಹವಾಮಾನ ವೈಪರೀತ್ಯ ತಡೆದುಕೊಳ್ಳುವ ಕೃಷಿ, ಪ್ರಕೃತಿ ಆಧಾರಿತ ಪರಿಹಾರಗಳು ಮತ್ತು ಮಹಿಳಾ ನಾಯಕತ್ವವನ್ನು ಉತ್ತೇಜಿಸುವ ಕಾರ್ಯಕ್ಕಾಗಿ ಬಿಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘಕ್ಕೆ ಇತ್ತೀಚೆಗೆ ಪ್ರತಿಷ್ಠಿತ 2025ರ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ 'ಇಕ್ವೇಟರ್ ಇನಿಶಿಯೇಟಿವ್' ಪ್ರಶಸ್ತಿಯೂ ಲಭಿಸಿದೆ. ಜೀವವೈವಿಧ್ಯ ಸಂರಕ್ಷಣೆಯ ಕ್ಷೇತ್ರದಲ್ಲಿ ಈ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X