ಮೇಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಚತುಷ್ಪಥ ಎಲಿವೇಟೆಡ್ ಕಾರಿಡಾರ್ ನಿರ್ಮಾಣ: 18 ತಿಂಗಳು ಬಳ್ಳಾರಿ ರಸ್ತೆ ಬಂದ್‌!

ಬಳ್ಳಾರಿ ರಸ್ತೆಯ ಯುಎಎಸ್ (UAS) ಸ್ಟಾಫ್ ಕ್ವಾರ್ಟರ್ಸ್‌ನಿಂದ ಮೆಖ್ರಿ ಸರ್ಕಲ್‌ವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿಯು ಮುಂದಿನ 18 ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ.
Hebbal flyover
ಹೆಬ್ಬಾಳ ಮೇಲ್ಸೇತುವೆ
Updated on: 

ಬೆಂಗಳೂರು: ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನಾಲ್ಕು ಪಥದ ಬೃಹತ್ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ನವೆಂಬರ್ 6 ರಿಂದ ಜಾರಿಗೆ ಬರುವಂತೆ ಬಳ್ಳಾರಿ ರಸ್ತೆಯಲ್ಲಿ ಭಾರಿ ಸಂಚಾರ ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ.

ಬಳ್ಳಾರಿ ರಸ್ತೆಯ ಯುಎಎಸ್ (UAS) ಸ್ಟಾಫ್ ಕ್ವಾರ್ಟರ್ಸ್‌ನಿಂದ ಮೆಖ್ರಿ ಸರ್ಕಲ್‌ವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿಯು ಮುಂದಿನ 18 ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ. ಕಾಮಗಾರಿಯ ಹಿನ್ನೆಲೆಯಲ್ಲಿ ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗಿನ ಪ್ರಮುಖ ರಸ್ತೆಯನ್ನು (Main Road) ಸಂಪೂರ್ಣವಾಗಿ ಮುಚ್ಚಲಾಗುತ್ತಿದ್ದು, ಕೇವಲ ಸರ್ವಿಸ್ ರಸ್ತೆಯಲ್ಲಿ ಮಾತ್ರವೇ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ನವೆಂಬರ್ 6, 2026 ರಂದು ಪ್ರಾರಂಭವಾಗಲಿರುವ ಈ ನಿರ್ಮಾಣ ಕಾಮಗಾರಿಯು 18 ತಿಂಗಳುಗಳ ಕಾಲ ಮುಂದುವರಿಯಲಿದೆ. ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸದಾಶಿವನಗರ ಮತ್ತು ಸಂಜಯನಗರ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ ಈ ರಸ್ತೆಯಲ್ಲಿ ವಾಹನ ಸಂಚಾರದ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ.

ಸಂಚಾರ ಸುಗಮವಾಗಿ ಸಾಗಲು ಅನುಕೂಲವಾಗುವಂತೆ, ಬಳ್ಳಾರಿ ರಸ್ತೆಯಲ್ಲಿ ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳು (ಹಗುರ, ಮಧ್ಯಮ ಮತ್ತು ಭಾರೀ ಸರಕು ವಾಹನಗಳು) ಹಾಗೂ ಕೆಎಸ್‌ಆರ್‌ಟಿಸಿ (KSRTC) ಮತ್ತು ಖಾಸಗಿ ಬಸ್‌ಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ, ಹೆಬ್ಬಾಳದ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು (ತುರ್ತು ಸೇವಾ ವಾಹನಗಳು ಸೇರಿದಂತೆ), ಕೆಳಗೆ ಸೂಚಿಸಲಾದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.

Hebbal flyover
ಬೆಂಗಳೂರಿನ 4 ಫ್ಲೈಓವರ್‌ಗಳಲ್ಲಿ ಬೈಕ್-ಆಟೋ ಸಂಚಾರ ಬಂದ್: ಟ್ರಾಫಿಕ್ ಜಾಮ್'ಗೆ ಸವಾರರು ಹೈರಾಣ; ಪೊಲೀಸರ ವಿರುದ್ಧ ಜನಾಕ್ರೋಶ..!

ಹೆಬ್ಬಾಳ ಮೂಲಕ ಏರ್‌ಪೋರ್ಟ್‌ಗೆ ತೆರಳುವ ವಾಹನಗಳು: ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್ ➔ ಕಲ್ಪನಾ ಜಂಕ್ಷನ್ ➔ ಓಲ್ಡ್ ಉದಯ ಟಿವಿ ಜಂಕ್ಷನ್ ➔ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ➔ ಟ್ಯಾನರಿ ರಸ್ತೆ ➔ ನಾಗವಾರ ರಸ್ತೆ ಮಾರ್ಗವಾಗಿ ರಿಂಗ್ ರೋಡ್ ತಲುಪಿ ವಿಮಾನ ನಿಲ್ದಾಣಕ್ಕೆ ಸಂಚರಿಸಬೇಕು.

ಯಶವಂತಪುರದಿಂದ ವಿಮಾನ ನಿಲ್ದಾಣದ ಕಡೆಗೆ ತೆರಳುವವರಿಗೆ

ಯಶವಂತಪುರ ಭಾಗದಿಂದ ಬರುವ ವಾಹನಗಳು: ಮತ್ತಿಕೆರೆ ರಸ್ತೆ ➔ ಬಿಇಎಲ್ (BEL) ವೃತ್ತದಲ್ಲಿ ಬಲಕ್ಕೆ ತಿರುವು ➔ ಹೆಬ್ಬಾಳ/ನಾಗವಾರ ರಿಂಗ್ ರೋಡ್ ಮೂಲಕ ಸಂಚರಿಸಬೇಕು.

ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ (City Centre) ಬರುವವರಿಗೆ

ಮಾರ್ಗ 1: ವಿಮಾನ ನಿಲ್ದಾಣದಿಂದ ಬರುವ ವಾಹನಗಳು ಹೆಬ್ಬಾಳದಲ್ಲಿ ಎಡಕ್ಕೆ ತಿರುಗಿ ➔ ನಾಗವಾರ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ➔ ಬಂಬುಬಜಾರ್ ➔ ಕ್ವೀನ್ಸ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು.

ಮಾರ್ಗ 2: ಹೆಬ್ಬಾಳದಲ್ಲಿ ಬಲಕ್ಕೆ ತಿರುಗಿ ➔ ಹೆಬ್ಬಾಳ್ ರಿಂಗ್ ರಸ್ತೆ ➔ ಕುವೆಂಪು ಸರ್ಕಲ್ ➔ ಗೊರಗುಂಟೆಪಾಳ್ಯ ಜಂಕ್ಷನ್ ➔ ಡಾ. ರಾಜ್‌ಕುಮಾರ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು.

ಯಶವಂತಪುರದಿಂದ ನಗರದ ಕೇಂದ್ರ ಭಾಗಕ್ಕೆ ಬರುವ ವಾಹನಗಳಿಗೆ

ಯಶವಂತಪುರ ಕಡೆಯಿಂದ ಬರುವ ವಾಹನಗಳು: ಬಿಎಚ್‌ಇಎಲ್ (BHEL) ಜಂಕ್ಷನ್ ➔ ಮಾರಮ್ಮ ಸರ್ಕಲ್ ಬಳಿ ಬಲಕ್ಕೆ ತಿರುವು ➔ ಮಾರ್ಗೋಸಾ ರಸ್ತೆ ಮೂಲಕ ನಗರದ ಕೇಂದ್ರ ಭಾಗವನ್ನು ತಲುಪಬಹುದು.

ಹೆಬ್ಬಾಳದಿಂದ ನಗರದ ಕಡೆಗೆ ಬರುವ ಸಾಮಾನ್ಯ ವಾಹನಗಳಿಗೆ

ಹೆಬ್ಬಾಳ ಫ್ಲೈಓವರ್ ಇಳಿದ ಬಳಿಕ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆಗೆ ತೆರಳಿ ➔ ಸಿಬಿಐ (CBI) ಜಂಕ್ಷನ್ ಮೂಲಕ ಮರಳಿ ಬಳ್ಳಾರಿ ಮುಖ್ಯ ರಸ್ತೆಗೆ ಸಂಪರ್ಕ ಪಡೆಯಬಹುದು.

ಹೆಬ್ಬಾಳದಿಂದ ಆನಂದನಗರ, ಆರ್.ಟಿ. ನಗರ ಮತ್ತು ಜಯಮಹಲ್ ಕಡೆಗೆ ತೆರಳುವವರಿಗೆ:

ಹೆಬ್ಬಾಳದಿಂದ ಬರುವವರು: ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ ➔ ಆನಂದನಗರ ಕ್ರಾಸ್ ➔ ಸಿಬಿಐ ಜಂಕ್ಷನ್ ಮೂಲಕ ಆನಂದನಗರ ಮುಖ್ಯ ರಸ್ತೆಯನ್ನು ತಲುಪಬೇಕು.

ಮುಂದಿನ 18 ತಿಂಗಳುಗಳ ಕಾಲ ಏರ್‌ಪೋರ್ಟ್ ರಸ್ತೆಯಲ್ಲಿ ಭಾರಿ ಕಾಮಗಾರಿ ನಡೆಯುತ್ತಿರುವುದರಿಂದ, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಕನಿಷ್ಠ 1 ರಿಂದ 2 ಗಂಟೆಗಳ ಮುಂಚಿತವಾಗಿ ಹೊರಡುವುದು ಸೂಕ್ತ. ಟ್ರಾಫಿಕ್ ಅಡಚಣೆಯನ್ನು ತಪ್ಪಿಸಲು ಸಂಚಾರಿ ಪೊಲೀಸರು ಪ್ರಕಟಿಸಿರುವ ಪರ್ಯಾಯ ಮಾರ್ಗಗಳನ್ನೇ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X