

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯಿಂದ ಹಲವು ಗೃಹಿಣಿಯರು ಫಲ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದವರಿದ್ದಾರೆ, ಇನ್ನು ಕೆಲವರು ಬೇರೆ ಕೆಲಸಗಳಿಗೆ ಬಳಸಿಕೊಂಡದ್ದೂ ಇದೆ.
ಕಲಬುರಗಿಯ ಶಿವನಗರದ ಎಂ ಎಸ್ ಸುವರ್ಣ ಅವರು ತಾವು ಕೂಡಿಟ್ಟ ಗೃಹಲಕ್ಷ್ಮಿ ಹಣದಿಂದ ತಮಗೆ ಗೊತ್ತಿರುವ ಕರಕುಶಲ ವಸ್ತುಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡುವ ಉದ್ಯಮ ಕಂಡುಕೊಂಡು ಬದುಕು ರೂಪಿಸಿಕೊಂಡಿದ್ದಾರೆ.
ಗೃಹಲಕ್ಷ್ಮಿ ಹಣದಲ್ಲಿ ಕಸೂತಿ ವಸ್ತುಗಳು, ಮಣಿಗಳಿಂದ ತಯಾರಿಸಿದ ತೊಟ್ಟಿಲು, ಮುತ್ತಿನ ತೇನೆ, ದಂಡಿ ಮತ್ತಿತರ ಅಲಂಕಾರಿಕ ವಸ್ತುಗಳ ವ್ಯಾುಪಾರ ಆರಂಭಿಸಿದ್ದಾರೆ. ತಮ್ಮ ಊರು, ಜಿಲ್ಲೆ, ರಾಜ್ಯದಲ್ಲಿ ಮಾತ್ರವಲ್ಲದೆ ನೆರೆಯ ಮುಂಬೈ, ಪುಣೆ, ಹೈದರಾಬಾದ್ ಮತ್ತಿತರ ನಗರಗಳಲ್ಲಿಯೂ ವ್ಯಾಪಾರವನ್ನು ವಿಸ್ತರಿಸಿಕೊಂಡಿದ್ದಾರಂತೆ.
ಇದು ಗೊತ್ತಾಗಿದ್ದು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಜತೆ ಇಂದು ಇಟ್ಟುಕೊಂಡಿದ್ದ ಸಂವಾದ ಕಾರ್ಯಕ್ರಮದ ವೇಳೆ.
ಸುವರ್ಣ ಅವರು ತಾವು ಮಣಿಗಳಿಂದ ಮಾಡಿರುವ ಬಣ್ಣದ ಆಟಿಕೆ ತೊಟ್ಟಿಲನ್ನು ಪ್ರದರ್ಶಿಸಿದರು. ಸಿಎಂಗೆ ತೊಟ್ಟಿಲು ಬಹಳ ಇಷ್ಟವಾಗಿ ತಮ್ಮ ಪುಟ್ಟ ಮೊಮ್ಮಗಳಿಗೆ ಆಟವಾಡಲು ಕೊಡಿಸಬೇಕೆಂದು ಮನಸ್ಸು ಹಂಬಲಿಸಿತು. ಸುವರ್ಣ ಬಳಿ "ಎಷ್ಟಮ್ಮ ಇದರ ಬೆಲೆ ಎಂದು ಕೇಳಿದ್ರು, ಸರ್, ಇದನ್ನು ತಯಾರಿಸಲು ನನಗೆ 125 ರೂಪಾಯಿ ಖರ್ಚಾಗುತ್ತೆ, 250, 300 ರೂಪಾಯಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ತೀನಿ'' ಎಂದರು.
"ಆ ತೊಟ್ಟಿಲು ಕೊಡಮ್ಮ, ಬಹಳ ಚನ್ನಾಗಿದೆ, ನನ್ನ ಮೊಮ್ಮಗಳಿಗೆ ಕೊಡ್ತೀನಿ" ಎಂದು ಸಿಎಂ ಡಿ ಕೆ ಶಿವಕುಮಾರ್ ಖರೀದಿಸಿಕೊಂಡು ಮಹಿಳೆಗೆ 500 ರೂಪಾಯಿ ಕೊಟ್ಟರು. ತೊಟ್ಟಿಲನ್ನು ಮೇಲೆ ಕೆಳಗೆ ತಿರುಗಿಸಿ ನೋಡಿ, ಅದರ ಅಂದ ಕಣ್ತುಂಬಿಕೊಂಡು ಮನೆಗೆ ಕೊಟ್ಟು ಕಳುಹಿಸಿಕೊಟ್ಟರು. ಗೃಹಲಕ್ಷ್ಮಿ ಹಣದಿಂದ ತಯಾರಿಸಿದ ಸುವರ್ಣರ ಸಂತೋಷಕ್ಕೆ ಪಾರವೇ ಇರಲಿಲ್ಲ.