ಮೂಡಲಗಿ (ಬೆಳಗಾವಿ): ಹಣವನ್ನು ಎರಡುಪಟ್ಟು ಮಾಡುವುದಾಗಿ ನಂಬಿಸಿ, ಕೋಟಿ ಕೋಟಿ ಹಣ ಸಂಗ್ರಹಿಸಿದ ಬಳಿಕ ಖಾರದ ಪುಡಿ ಎರಚಿ ದರೋಡೆ ಮಾಡಲು ಹೋದ ಖತರ್ನಾಕ್ ಗ್ಯಾಂಗ್ ಒಂದರ ಕರಾಳ ಮುಖ ಬಯಲಾಗಿದೆ. ಅಚ್ಚರಿಯೆಂದರೆ ಈ ಹೈ-ವೋಲ್ಟೇಜ್ ದರೋಡೆ ಯತ್ನದ ಮಾಸ್ಟರ್ ಮೈಂಡ್ ಬೇರೆ ಯಾರೂ ಅಲ್ಲ, ಸ್ವತಃ ಪ್ರಭಾವಿ ಶಾಸಕರೊಬ್ಬರ ಗನ್ ಮ್ಯಾನ್ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಈ ಘಟನೆ ಭಾರೀ ಸಂಚಲನ ಸೃಷ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಅವರ ಗನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಚಿದಾನಂದ ಕುರಬೇಟ್, ಕೋಟ್ಯಂತರ ರೂಪಾಯಿ ದರೋಡೆಗೆ ಯತ್ನಿಸಿದ ಆಘಾತಕಾರಿ ಸಿನಿಮಾ ಸ್ಟೈಲ್ ಕೃತ್ಯ ಬಯಲಾಗಿದ್ದು, ಗನ್‌ಮ್ಯಾನ್ ಸೇರಿದಂತೆ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು, ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಅವರು ಚಿದಾನಂದನನ್ನು ಅಮಾನತುಗೊಳಿಸಿದ್ದಾರೆ.
ಹಣ ಡಬ್ಲಿಂಗ್ ಆಮಿಷ
ಮುಖ್ಯ ಆರೋಪಿ ಚಿದಾನಂದ ಸಿದ್ಧಾರೂಢ ಕುರಬೇಟ್, ಪ್ರತಿ 1 ಲಕ್ಷ ರೂಪಾಯಿ ನಗದು ನೀಡಿದರೆ ಬ್ಯಾಂಕ್ ಖಾತೆಗೆ 1.30 ಲಕ್ಷ ರೂಪಾಯಿ ಆನ್‌ಲೈನ್ ಟ್ರಾನ್ಸ್‌ಫರ್ (ಜಮಾ) ಮಾಡಿಕೊಡುವುದಾಗಿ ಸಾರ್ವಜನಿಕರನ್ನು ನಂಬಿಸಿದ್ದನು. ಅಂದರೆ ₹1 ಕೋಟಿ ನೀಡಿದರೆ ₹1.30 ಕೋಟಿ ಕೊಡುವ ಭಾರಿ ಲಾಭದ ಆಮಿಷವೊಡ್ಡಿದ್ದನು. ಅದರಂತೆ, ಈ ಭಾರಿ ಲಾಭದ ಆಸೆಗೆ ಬಿದ್ದ ಕಲ್ಮೇಶ ರಂಗಾಪೂರ ಮತ್ತು ಅವರ ಸಂಬಂಧಿಕರು ತಮ್ಮ ಪರಿಚಿತರಿಂದ ಸಾಲ ಮಾಡಿ ಬರೋಬ್ಬರಿ ₹2.68 ಕೋಟಿ ಹಣವನ್ನು ಒಟ್ಟುಗೂಡಿಸಿದ್ದರು.
ದರೋಡೆಗೆ ಸಿನಿಮಾ ಸ್ಟೈಲ್ ಸ್ಕೆಚ್
ಅಕ್ಟೋಬರ್ 30ರಂದು ಹಣ ಎಣಿಕೆ ಮಾಡಲು ಕಲ್ಮೇಶ ಅವರ ತಂಡವನ್ನು ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ ತೋಟದ ಶೆಡ್‌ಗೆ ಕರೆಯಲಾಗಿತ್ತು. ಪೂರ್ವಯೋಜಿತ ಸಂಚಿನಂತೆ ಕಲ್ಮೇಶ ಅವರಿಂದ ₹2.68 ಕೋಟಿ ಹಣವನ್ನು ಕಿತ್ತುಕೊಂಡು, ಕಣ್ಣಿಗೆ ಖಾರದಪುಡಿ ಎರಚಿ ಅಲ್ಲಿಂದ ಪರಾರಿಯಾಗಲು ಚಿದಾನಂದ ತನ್ನದೇ ಒಂದು ದರೋಡೆಕೋರರ ಗ್ಯಾಂಗ್ ಅನ್ನು ಅಲ್ಲಿಗೆ ನುಗ್ಗಿಸಿದ್ದನು. ಅದರಂತೆ, ಶೆಡ್ ಮೇಲೆ ದರೋಡೆಕೋರರ ತಂಡ ದಾಳಿ ಮಾಡಿದಾಗ, ಮೊದಲೇ ಅಲರ್ಟ್ ಆಗಿದ್ದ ಕಲ್ಮೇಶ ಅವರ ತಂಡವು ದರೋಡೆ ಮಾಡಲು ಬಂದವರನ್ನೇ ಹಿಡಿದು ಹಿಗ್ಗಾಮುಗ್ಗಾ ಬಡಿದು ಪೊಲೀಸರಿಗೆ ಒಪ್ಪಿಸಿದೆ. ಪೊಲೀಸರು ತನಿಖೆ ನಡೆಸಿದಾಗ ಈ ಇಡೀ ದರೋಡೆ ಸಂಚಿನ ಹಿಂದೆ ಗನ್‌ಮ್ಯಾನ್ ಚಿದಾನಂದ ಇರುವುದು ಪತ್ತೆಯಾಗಿದೆ.
ಶಾಸಕರಿಗೂ ಇದಕ್ಕೂ ಸಂಬಂಧವಿಲ್ಲ
ಸದ್ಯ ಪೊಲೀಸರು ದರೋಡೆ ಗ್ಯಾಂಗ್‌ನಲ್ಲಿದ್ದ ಚಿದಾನಂದ ಕುರಬೇಟ್, ಸಂಜೀವ್ ಅರಭಾವಿ, ರಾಜಾರಾಮ್ ಮಾಳ್ಯಾಗೋಳ ಸೇರಿದಂತೆ ಏಳು ಜನರನ್ನು ಬಂಧಿಸಿ ಅವರ ಬಳಿಯಿದ್ದ ₹2.39 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಆರೋಪಿ ಗನ್‌ಮ್ಯಾನ್ ಚಿದಾನಂದನನ್ನು ಸೇವೆಯಿಂದ ತಕ್ಷಣವೇ ಅಮಾನತುಗೊಳಿಸಿದ್ದಾರೆ. ಏತನ್ಮಧ್ಯೆ, ಈ ಪ್ರಕರಣ ಕೇವಲ ಶಾಸಕ ರಮೇಶ್ ಜಾರಕಿಹೊಳಿ ಅವರ ಭದ್ರತಾ ಸಿಬ್ಬಂದಿಯಾಗಿದ್ದ ಪೊಲೀಸ್ ಪೇದೆಯ ವೈಯಕ್ತಿಕ ಕ್ರಿಮಿನಲ್ ಕೃತ್ಯವಾಗಿದ್ದು, ದರೋಡೆಗೂ ಶಾಸಕ ರಮೇಶ್ ಜಾರಕಿಹೊಳಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.