

ಬೆಂಗಳೂರು: ಭಾರತದ ಮೊಟ್ಟಮೊದಲ ಸ್ವತಂತ್ರ ಕಾಮನ್ವೆಲ್ತ್ ಮಹಿಳಾ ಸಂಸದರ (CWP) ಭಾರತ ವಲಯದ ಸಮ್ಮೇಳನಕ್ಕೆ ರಾಜಧಾನಿ ಬೆಂಗಳೂರು ಆತಿಥ್ಯ ವಹಿಸುತ್ತಿದ್ದು, ಇದೇ ನವೆಂಬರ್ 17 ಮತ್ತು 18 ರಂದು ಎರಡು ದಿನಗಳ ಕಾಲ ಈ ಐತಿಹಾಸಿಕ ಶೃಂಗಸಭೆ ನಡೆಯಲಿದೆ.
ಭಾರತೀಯ ಸಂಸತ್ತಿನ ಸಹಯೋಗದೊಂದಿಗೆ ಕರ್ನಾಟಕ ವಿಧಾನಮಂಡಲವು ವಿಧಾನಸೌಧದಲ್ಲಿ ಈ ಸಮ್ಮೇಳನವನ್ನು ಆಯೋಜಿಸಿದೆ. ಸಮ್ಮೇಳನದ ಅಧಿಕೃತ ವೇಳಾಪಟ್ಟಿಯನ್ನು ಕರ್ನಾಟಕ ವಿಧಾನಸಭೆ ಸ್ಪೀಕರ್ ಜಿ. ಎಸ್. ಪಾಟೀಲ್ ಮತ್ತು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಜಂಟಿಯಾಗಿ ಪ್ರಕಟಿಸಿದ್ದಾರೆ.
ಎರಡು ದಿನಗಳ ಸಮ್ಮೇಳನವು ಮಹಿಳಾ ಸಂಸದರು ಹಾಗೂ ಶಾಸಕರು ಸಾರ್ವಜನಿಕ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಲು ಮತ್ತು ಶಾಸಕಾಂಗ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸಲು ವೇದಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಈ ರೀತಿಯ ಪ್ರತ್ಯೇಕ ಕಾಮನ್ವೆಲ್ತ್ ಮಹಿಳಾ ಜನಪ್ರತಿನಿಧಿಗಳ ಸಮ್ಮೇಳನ ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ಆತಿಥ್ಯ ವಹಿಸಲು ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಕಾಮನ್ವೆಲ್ತ್ ಮಹಿಳಾ ಸಂಸದರು ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಡಿ. ಪುರಂದೇಶ್ವರಿ ಕೂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭೆ ಸ್ಪೀಕರ್ಗಳು ಹಾಗೂ ಉಪಸಭಾಪತಿಗಳು ಸೇರಿದಂತೆ ಸುಮಾರು 150 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರತಿ ರಾಜ್ಯದಿಂದ ನಾಲ್ವರು ಮಹಿಳಾ ಜನಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆಯಿದೆ. ಅಲ್ಲದೆ, 15ರಿಂದ 20 ದೇಶಗಳ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ.
ಮಹಿಳೆಯರ ಡಿಜಿಟಲ್ ಮತ್ತು ಅಂತರ್ಜಾಲ ಸುರಕ್ಷತೆ ಹಾಗೂ ಮಹಿಳಾ ಜನಪ್ರತಿನಿಧಿಗಳ ಶಾಸಕಾಂಗ ಕೌಶಲ ಮತ್ತು ನಾಯಕತ್ವ ಸಾಮರ್ಥ್ಯ ಬಲಪಡಿಸುವುದು ಸಮ್ಮೇಳನದ ಎರಡು ಪ್ರಮುಖ ವಿಷಯಗಳಾಗಿವೆ.
ಮಹಿಳೆಯರ ವಿರುದ್ಧ ನಡೆಯುವ ಅಂತರ್ಜಾಲ ಅಪರಾಧಗಳು, ಆನ್ಲೈನ್ ಕಿರುಕುಳ, ಡಿಜಿಟಲ್ ದುರುಪಯೋಗ, ಕೃತಕ ಬುದ್ಧಿಮತ್ತೆಯ ದುರ್ಬಳಕೆ, ಡೀಪ್ಫೇಕ್ ತಂತ್ರಜ್ಞಾನ, ವೈಯಕ್ತಿಕ ಮಾಹಿತಿಯ ರಕ್ಷಣೆ ಮತ್ತು ಡಿಜಿಟಲ್ ಗೌಪ್ಯತೆ ಕುರಿತು ಚರ್ಚೆಗಳು ನಡೆಯಲಿವೆ. ಡಿಜಿಟಲ್ ವಾತಾವರಣದಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.
ಎರಡನೇ ವಿಷಯದಡಿ ಶಾಸಕಾಂಗ ಪ್ರಕ್ರಿಯೆಗಳು, ಕಾನೂನು ರಚನೆ, ನೀತಿ ನಿರೂಪಣೆ, ಸಂಸದೀಯ ಚರ್ಚೆಗಳು, ನಾಯಕತ್ವ ಅಭಿವೃದ್ಧಿ ಹಾಗೂ ಶಾಸಕಾಂಗ ಕಾರ್ಯಚಟುವಟಿಕೆಗಳಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯ ಕುರಿತು ಗಮನಹರಿಸಲಾಗುತ್ತದೆ.
ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಮುಖ್ಯ. ಆದರೆ, ಅವರ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ನೀತಿ ನಿರೂಪಣೆ ಮತ್ತು ಆಡಳಿತದಲ್ಲಿ ಅರ್ಥಪೂರ್ಣ ಪಾತ್ರ ವಹಿಸುವಂತೆ ಮಾಡುವುದು ಅಷ್ಟೇ ಅಗತ್ಯ. ಮಹಿಳಾ ಜನಪ್ರತಿನಿಧಿಗಳು ಎದುರಿಸುವ ಸವಾಲುಗಳನ್ನು ಚರ್ಚಿಸಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಈ ಸಮ್ಮೇಳನ ಅವಕಾಶ ಕಲ್ಪಿಸಲಿದೆ ಎಂದು ಸಲೀಂ ಅಹಮದ್ ಅವರು ಹೇಳಿದರು.
ಸಮ್ಮೇಳನ ಆಯೋಜಿಸುವಂತೆ ಕರ್ನಾಟಕ ವಿಧಾನಮಂಡಲಕ್ಕೆ ಸೂಚನೆ ನೀಡಲಾಗಿದ್ದು, ಲೋಕಸಭಾ ಸಚಿವಾಲಯ ಮತ್ತು ಕಾಮನ್ವೆಲ್ತ್ ಮಹಿಳಾ ಸಂಸದರು ಘಟಕದ ನಾಯಕರೊಂದಿಗೆ ಸಮಾಲೋಚಿಸಿ ವಿವರವಾದ ಕಾರ್ಯಸೂಚಿ ಸಿದ್ಧಪಡಿಸಲಾಗುತ್ತಿದೆ ಎಂದರು.
ಡಿ. ಪುರಂದೇಶ್ವರಿ ಅವರು ಸುಮಾರು 27ರಿಂದ 28 ಸಂಸದರನ್ನೊಳಗೊಂಡ ಸಮಿತಿಯನ್ನು ರಚಿಸಿದ್ದು, ಸಮ್ಮೇಳನದ ಸಿದ್ಧತೆಗಳ ಕುರಿತು ಈಗಾಗಲೇ ಪ್ರಾಥಮಿಕ ಸಭೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ನವೆಂಬರ್ 17ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನದ ಊಟದ ಬಳಿಕ ಚರ್ಚೆಗಳು ಆರಂಭವಾಗಲಿವೆ. ನವೆಂಬರ್ 18ರಂದು ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಪಾಲೆ ಸುಧಾ ಯಾದವ್ ಭಾಗವಹಿಸಲಿದ್ದಾರೆ.
ಸಮ್ಮೇಳನದ ಪೂರ್ವಭಾವಿಯಾಗಿ ನವೆಂಬರ್ 14ರಂದು ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಾಮನ್ವೆಲ್ತ್ ಮಹಿಳಾ ಸಂಸದರು ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಡಿ. ಪುರಂದೇಶ್ವರಿ ಅವರು ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ ಮಾಡಿ ಸಿದ್ಧತೆಗಳ ವಿವರ ನೀಡಲಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಕರ್ನಾಟಕ ಹೆಚ್ಚಿನ ಆದ್ಯತೆ ನೀಡಿದೆ. ಈ ಸಮ್ಮೇಳನವು ದೇಶಾದ್ಯಂತ ಮಹಿಳಾ ಸಬಲೀಕರಣದ ಕುರಿತು ಬಲವಾದ ಸಂದೇಶ ರವಾನಿಸಲಿದೆ ಎಂದು ಜಿ.ಎಸ್. ಪಾಟೀಲ್ ಅವರು ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಎರಡು ಸಚಿವ ಸ್ಥಾನಗಳು ಖಾಲಿಯಿದ್ದು, ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಮ್ಮೇಳನದ ಭಾಗವಾಗಿ ನವೆಂಬರ್ 19ರಂದು ಪ್ರತಿನಿಧಿಗಳನ್ನು ಮೈಸೂರಿಗೆ ಕರೆದೊಯ್ಯುವ ಕಾರ್ಯಕ್ರಮವೂ ಇದೆ. ಈ ವೇಳೆ ಚಾಮುಂಡಿ ಬೆಟ್ಟ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಶಾಸಕಾಂಗ ಸಂಸ್ಥೆಗಳನ್ನು ಹೆಚ್ಚು ಒಳಗೊಳ್ಳುವಂತೆ ರೂಪಿಸುವುದು ಹಾಗೂ ಮಹಿಳಾ ನಾಯಕತ್ವವನ್ನು ಬಲಪಡಿಸುವ ಕುರಿತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲು ಈ ಸಮ್ಮೇಳನ ವೇದಿಕೆಯಾಗುವ ನಿರೀಕ್ಷೆಯಿದೆ.